ಪೂರ್ವ ಆಕಾಶದಲ್ಲಿ ನಡೆಯಲಿದೆ ಗ್ರಹಗಳ ಮೆರವಣಿಗೆ

graha1
ಮೇ 31ರಿಂದ ಜೂ.4 ವರೆಗೆ ಆಕಾಶದಲ್ಲಿ ಶನಿ, ಮಂಗಳ, ಗುರು ಹಾಗೂ ಬುಧನ ಜತೆಯಲ್ಲಿ ನೆಪ್ಚೂನ್​ ಹಾಗೂ ಯುರೇನಸ್​ ಗ್ರಹಗಳ ಸಂಚಾರದ ಚಿತ್ರಣ.
Published on
  • ಬರಿಗಣ್ಣಿಗೆ ಕಾಣಲಿದೆ ಶನಿ, ಮಂಗಳ, ಗುರು, ಬುಧ
  • ಜೂನ್​ ಮೊದಲ ವಾರ ಬಾನಂಗಳದಿ ಕೌತುಕ

ಉಡುಪಿ: ಪೂರ್ವ ಆಕಾಶದಲ್ಲಿ ಜೂನ್​ ಮೊದಲ ವಾರ ಬೆಳಗಿನ ಸೂಯೋರ್ದಯಕ್ಕೆ ಮುನ್ನ ಬರಿಗಣ್ಣಿನಿಂದ ಆರು ಗ್ರಹಗಳನ್ನು ನೋಡಬಹುದಾಗಿದೆ. ಶನಿ, ಮಂಗಳ, ಗುರು ಹಾಗೂ ಬುಧನ ಜತೆಯಲ್ಲಿ ಬೈನಾಕುಲರ್​ ಸಹಾಯದಿಂದ ನೆಪ್ಚೂನ್​ ಹಾಗೂ ಯುರೇನಸ್​ ಗ್ರಹಗಳನ್ನು ನೋಡಬಹುದಾಗಿದೆ. ಗ್ರಹಗಳು ಮೆರವಣಿಗೆ ನಡೆಸುತ್ತಿರುವ ರೀತಿಯಲ್ಲಿ ಗೋಚರಿಸಲಿವೆ ಎಂದು ಭೌತಶಾಸ್ತ್ರಜ್ಞ ಡಾ. ಎ.ಪಿ . ಭಟ್​ ಮಾಹಿತಿ ನೀಡಿದ್ದಾರೆ.

graha2

ಕೆಲ ವಾರಗಳಿಂದ ಸೂರ್ಯನ ನೇರ ಬಂದು ಅಸ್ತವಾಗಿದ್ದ ಗುರುಗ್ರಹವು ಜೂನ್​ 1ರಿಂದ ಪೂರ್ವ ಆಕಾಶದಲ್ಲಿ ಕಾಣಿಸಲಿದೆ. ಗುರುಗ್ರಹದೊಂದಿಗೆ ಅಪರೂಪದ ಬುಧಗ್ರಹವೂ ಜತೆಯಲ್ಲೇ ಗೋಚರಿಸಲಿದೆ. ಬುಧ ಯಾವಾಗಲೂ ಬರಿಗಣ್ಣಿಗೆ ಕಾಣಿಸುವುದಿಲ್ಲ. ವರ್ಷದಲ್ಲಿ ಆರು ಬಾರಿ, ಕೆಲ ದಿನಗಳು, ಕೆಲ ನಿಮಿಷ ಮಾತ್ರ ಗೋಚರಿಸುತ್ತದೆ.

graha3


ಸೂಯೋರ್ದಯಕ್ಕೆ 20 ನಿಮಿಷ ಮುಂಚಿತವಾಗಿ ಪೂರ್ವ ಆಕಾಶದಲ್ಲಿ ದಿಗಂತದಿಂದ ಗುರು, ಬುಧ, ಯರೇನಸ್​, ಮಂಗಳ, ನೆಪ್ಚೂನ್​ನ ನಂತರ ಶನಿಗ್ರಹ ಗೋಚರಿಸಲಿವೆ. ಇವನ್ನೆಲ್ಲ ಪರಿಚಯಿಸಲೋ ಎನ್ನುವಂತೆ ಅಮವಾಸ್ಯೆಗೆ ಸೂರ್ಯನನ್ನು ಸಮೀಪಿಸುವ ಚಂದ್ರ ಈ ಎಲ್ಲ ಗ್ರಹಗಳ ಸಮೀಪ ಹಾದು ದಿಗಂತದೆಡೆಗೆ ಸರಿಯುತ್ತಿರುತ್ತದೆ.

graha4


ಹಣತೆಯಂತೆ ಕಾಣುವ ಬೆಳಗಿನ ಚಂದ್ರ

ಜೂನ್​ 1ರಂದು ಶನಿಗ್ರಹದ ಸಮೀಪ, ಜೂನ್​ 2ರಂದು ನೆಪ್ಚೂನ್​ ಮಂಗಳನ ಸಮೀಪ , ಜೂನ್​ 3ರಂದು ಯರೇನಸ್​ ಸಮೀಪ ಸರಿದು ಜೂನ್​ 4ರಂದು ಗುರು, ಬುಧ ಸಮೀಪ ಕಾಣಲಿದೆ. ಆಕಾಶದ ಭವ್ಯತೆಗೆ ಹಣತೆ (Crescent moon)ಯಂತೆ ಕಾಣುವ ಬೆಳಗಿನ ಚಂದ್ರ ಎಲ್ಲರನ್ನೂ ಆಕರ್ಷಿಸಲಿದೆ.
ಆಶ್ಚರ್ಯವೆಂದರೆ, ಸುಮಾರು 3.70 ಲಕ್ಷ ಕಿಮೀ ದೂರದ ಚಂದ್ರನು ಕೋಟಿ ಕೋಟಿ ಕಿಮೀ ದೂರದ ಗ್ರಹಗಳೊಂದಿಗೆ ಮೇ 31ರಂದು (ಇಂದು) (ಬುಧ ಗ್ರಹ 17.5 ಕೋಟಿ ಕಿಮೀ, ಮಂಗಳ 27.8 ಕೋಟಿ ಕಿಮೀ, ಗುರು ಗ್ರಹ 90 ಕೋಟಿ ಕಿಮೀ, ಶನಿ ಗ್ರಹ 146.5 ಕೋಟಿ ಕಿಮೀ) ಒಂದೇ ದೂರದಲ್ಲಿರುವಂತೆ ಕಾಣುತ್ತದೆ. ಬಾನಂಗಳದ ಈ ಕೌತುಕ ವೀಸುವುದೇ ಒಂದು ಆನಂದ ಎಂದು ಡಾ. ಎ.ಪಿ . ಭಟ್​ ತಿಳಿಸಿದ್ದಾರೆ.

graha5
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net