

ಮಂಗಳೂರು: ನವಮಂಗಳೂರು ಬಂದರು, ಎಂಆರ್‌ಪಿಎಲ್, ಮೀನುಗಾರಿಕಾ ಬಂದರು ಸಹಿತ 3,800 ಕೋಟಿ ರೂ. ವೆಚ್ಚದ ಯೋಜನೆಗಳ ಶಿಲಾನ್ಯಾಸ-ಉದ್ಘಾಟನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ವರ್ಚುವಲ್ ಮೂಲಕ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಶುಕ್ರವಾರ ಮಧ್ಯಾಹ್ನ ನೆರವೇರಿಸಿದರು.
ಸಮಾವೇಶ ನಡೆಯುವ ಮೈದಾನಕ್ಕೆ ಆಗಮಿಸಿದ ಪ್ರಧಾನಿ ಅವರು ವಿವಿಧ ಯೋಜನೆಗಳ 3ಡಿ ಮಾಡೆಲ್ ವೀಕ್ಷಿಸಿದರು. ಬಳಿಕ ವೇದಿಕೆಗೆ ಆಗಮಿಸಿದರು. ಬಂದರು ಸಚಿವ ಸರ್ಬಾನಂದ ಸೋನಾವಾಲ್ ಅವರು ಕೃಷ್ಣನ ಮೂರ್ತಿಯನ್ನು ಸ್ಮರಣಿಕೆ ನೀಡಿ, ಪೇಟ ತೊಡಿಸಿ, ಶಾಲು ಹೊದಿಸಿ ಗೌರವಿಸಿದರು. ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತದ ವತಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಮತ್ತಿತರರು ಮಲ್ಲಿಗೆ ಹಾರ, ಶಾಲು ಹಾಕಿ ಗೌರವಿಸಿದರು. ಪರಶುರಾಮ ಪುತ್ಥಳಿಯನ್ನು ಸ್ಮರಣಿಕೆಯಾಗಿ ನೀಡಲಾಯಿತು.
ರಾಜ್ಯಪಾಲ ಥಾವರಚಂದ್ ಗೆಹಲೋತ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಪ್ರಲ್ಹಾದ ಜೋಷಿ, ಶೋಭಾ ಕರಂದ್ಲಾಜೆ, ರಾಜ್ಯದ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಎಸ್.ಅಂಗಾರ, ಜಿಲ್ಲೆಯ ಶಾಸಕರು ಇದ್ದರು.