ಛಾಯಾಗ್ರಾಹಕನಿಗೆ ನಿರಂತರತೆ ಇರಬೇಕು: ಎಸ್.ಕೃಷ್ಣ ಅಭಿಮತ

MDK04
Published on

ಮಡಿಕೇರಿ: ಸೃಜನ ಹಾಗೂ ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಂಡು ಕೆಲಸ ಮಾಡಿದರೆ ಉತ್ತಮ ಛಾಯಾಗ್ರಾಹಕನಾಗಿ ಹೊರಹೊಮ್ಮಲು ಸಾಧ್ಯ ಎಂದು ರಾಜ್ಯ ಪ್ರಶಸ್ತಿ ವಿಜೇತ, ಸಿನಿಮಾ ಛಾಯಾಗ್ರಾಹಕ, ಮುಂಗಾರುಮಳೆ ಖ್ಯಾತಿಯ ಎಸ್.ಕೃಷ್ಣ ಅಭಿಮತ ವ್ಯಕ್ತಪಡಿಸಿದರು.


ನಗರದ ಗಾಂಧಿ ಭವನದಲ್ಲಿ ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ವತಿಯಿಂದ ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ದೃಶ್ಯಂ-೨೦೨೩ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಛಾಯಾಗ್ರಾಹಕನಿಗೆ ನಿರಂತರತೆ ಇರಬೇಕು. ಅಭ್ಯಾಸಿಸುವ ಗುಣವಿರಬೇಕು. ಫೋಟೋದೊಂದಿಗೆ ಕಥೆಯನ್ನು ಹೇಳುವ, ಬಣ್ಣಗಳನ್ನು ಹೊಂದಣಿಸುವ ನೈಪುಣ್ಯತೆ ಇರಬೇಕು. ರೀಲ್ ಕಾಲದಿಂದ ಡಿಜಿಟಲ್ ತಂತ್ರಜ್ಞಾನದ ತನಕ ಅನೇಕ ಕ್ಯಾಮರಗಳು ಬಂದಿವೆ. ಕಾಲಕಾಲಕ್ಕೆ ತಂತ್ರಜ್ಞಾನ ಬದಲಾವಣೆ ಆಗುತ್ತದೆ. ಇದನ್ನು ಅಳವಡಿಸಿಕೊಳ್ಳಬೇಕಾದರೆ ಮಾನಸಿಕತೆ ಸದೃಢವಾಗಿರಬೇಕು. ಕಲಿಕೆಯನ್ನು ಯಾರು ತಡೆಯಲು ಸಾಧ್ಯವಿಲ್ಲ. ಸವಾಲು ನಡುವೆ ನಾವು ಮುನ್ನಗಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಸಕಾರತ್ಮಕ ಚಿಂತನೆಯನ್ನೂ ಮೈಗೂಡಿಸಿಕೊಳ್ಳಬೇಕು. ಕೊಡಗಿನ ಜನರ ಕಣ್ಣಿನಲ್ಲಿ ಪ್ರಕೃತಿಯ ದೃಶ್ಯ ಗಾಢವಾಗಿ ತುಂಬಿದೆ. ಇಲ್ಲಿನ ಜನರಿಂದ ಫೋಟೋಗ್ರಾಫಿಯಲ್ಲಿ ಮತ್ತಷ್ಟು ಹೊಸ ಪ್ರಯೋಗ ಮಾಡಬಹುದು ಎಂದು ವಿಶ್ಲೇಷಿಸಿದರು.


ನವಮಾಧ್ಯಮದಲ್ಲಿ ಛಾಯಾಗ್ರಾಹಕರ ಸವಾಲು ಮತ್ತು ಭವಿಷ್ಯ ವಿಚಾರದಲ್ಲಿ ಹಿರಿಯ ಪತ್ರಕರ್ತ ಗೌರೀಶ್ ಅಕ್ಕಿ ಮಾತನಾಡಿ, ಯಾವುದೇ ಕಲೆಗೆ ಅಂತ್ಯವಿಲ್ಲ. ಅದು ಮೇಲ್ದರ್ಜೆಗೇರುತ್ತದೆ. ಅದನ್ನು ಕಲಿತುಕೊಂಡರೆ ವೃತ್ತಿಯಲ್ಲಿ ಸಾಧನೆ ಮಾಡಬಹುದು. ಬೇರೆಯವರಿಗೆ ಕಾಣದ ವಿಚಾರ ಕಾಣುವುದು ಛಾಯಾಗ್ರಾಹಕನ ವಿಶೇಷತೆಯಾಗಿರಬೇಕು. ಸೂಕ್ಷ್ಮ ಸಂವೇದನಶೀಲರಾಗಿರಬೇಕು. ಡಿಜಿಟಲ್ ಮಾಧ್ಯಮದಿಂದ ಅನೇಕ ಉಪಯೋಗಗಳಿವೆ. ಹೊಸ ಆವಿಷ್ಕಾರಗಳನ್ನು ಅಳವಡಿಸಿಕೊಂಡರೆ ಮಾತ್ರ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯ ಎಂದರು.


ಅಧುನಿಕ ಜಗತ್ತಿನಲ್ಲಿ ರೀಲ್ಸ್ ಟ್ರೆಂಡ್ ವಿಷಯವಾಗಿ ಡಿಜಿಟಲ್ ಕ್ರಿಯೇಟರ್ ಬಲ್ಲಚಂಡ ಭಜನ್ ಬೋಪಣ್ಣ, ಹಿರಿಯ ಛಾಯಾಗ್ರಾಹಕ ಗುರುಚರಣ್ ಸಿಂಗ್, ಕೊಡಗು ಪ್ರೆಸ್ ಕ್ಲಬ್ ಬೆಳ್ಳಿಮಹೋತ್ಸವ ಆಚರಣಾ ಸಮಿತಿ ಮಹಾಪೋಷಕ ಜಿ.ರಾಜೇಂದ್ರ, ಕಾರ್ಯಕ್ರಮ ಸಂಚಾಲಕ ಮಂದನೆರವಂಡ ಯುಗದೇವಯ್ಯ ಮಾತನಾಡಿದರು.


ಈ ಸಂದರ್ಭ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್.ಸವಿತಾ ರೈ, ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಸಾಂಸ್ಕೃತಿಕ ಸಮಿತಿ ಸಂಚಾಲಕ ಐಮಂಡ ಗೋಪಾಲ್ ಸೋಮಯ್ಯ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net