ಜಲ ಕ್ಷಾಮಕ್ಕೆ ಶಾಶ್ವತ ಪರಿಹಾರ; ಕುಡಿಯುವ ನೀರು ಯೋಜನೆ ಮಾಸ್ಟರ್​ಪ್ಲಾ್ಯನ್​ಗೆ ಸಿದ್ಧತೆ

ವಿಜಯವಾಣಿ (3)
Published on

| ಶ್ರೀಕಾಂತ್ ಶೇಷಾದ್ರಿ, ಬೆಂಗಳೂರು

ರಾಜ್ಯದ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಪ್ರತಿ ವರ್ಷ ಜನವರಿ- ಫೆಬ್ರವರಿ ಬಂತೆಂದರೆ ಕುಡಿಯುವ ನೀರಿನ ಸಮಸ್ಯೆ ಆರಂಭವಾಗಿ ಏಪ್ರಿಲ್- ಮೇ ವೇಳೆ ಬಿಗಡಾಯಿಸುತ್ತದೆ. ಇದು ಸರ್ಕಾರಕ್ಕೆ ಹಾಗೂ ಜನರಿಗೆ ಸಹಜ ಎಂಬಂತಾಗಿದೆ. ಆದರೆ, ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರ ಭಗೀರಥ ಪ್ರಯತ್ನವೊಂದಕ್ಕೆ ಕೈಹಾಕಿದೆ.

ಸಾಮಾನ್ಯವಾಗಿ ಬರದ ಛಾಯೆ ಕಾಣಿಸಿಕೊಳ್ಳುತ್ತಿದ್ದಂತೆ ಅಥವಾ ಫೆಬ್ರವರಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಸರ್ಕಾರದ ಆಡಳಿತ ಯಂತ್ರ ಸಜ್ಜಾಗಬೇಕಾಗುತ್ತದೆ. ಟಾಸ್ಕ್ ಫೋರ್ಸ್ ರಚನೆ, ಪ್ರತ್ಯೇಕ ಅನುದಾನ ಬಳಕೆ, ಕ್ರಿಯಾಯೋಜನೆ, ಬೋರ್​ವೆಲ್ ಕೊರೆಸುವುದು, ಟ್ಯಾಂಕರ್ ನೀರು ಪೂರೈಕೆಯಂಥ ಚಟುವಟಿಕೆಯಲ್ಲಿ ಗ್ರಾಮಪಂಚಾಯಿತಿ, ತಾಲೂಕು, ಜಿಲ್ಲಾಡಳಿತಗಳು ತೊಡಗಿಕೊಳ್ಳುತ್ತವೆ. ಬೇರೆಲ್ಲ ಕೆಲಸ ಎರಡನೇ ಆದ್ಯತೆಯಾಗುತ್ತದೆ. ಸರ್ಕಾರ ಬೆಂಗಳೂರಿನಿಂದ ನಿರಂತರ ಮಾನಿಟರ್ ಕೂಡ ಮಾಡಬೇಕಾಗುತ್ತದೆ. ಇಂತಹದ್ದೊಂದು ವಾರ್ಷಿಕ ಅಭ್ಯಾಸಕ್ಕೆ ಬ್ರೇಕ್ ಹಾಕುವ ಉದ್ದೇಶದಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ದೂರದೃಷ್ಟಿ ಆಲೋಚನೆಯಲ್ಲಿ ಕಸರತ್ತು ಆರಂಭಿಸಿದೆ.

ಕಳೆದ ಐದು ವರ್ಷದಲ್ಲಿ ನಿರಂತರವಾಗಿ ಕುಡಿಯುವ ನೀರಿನ ಸಮಸ್ಯೆ ಕಾಣಿಸುವ ಪ್ರದೇಶಗಳು, ನಿರ್ದಿಷ್ಟ ಸ್ಥಳಗಳ ದತ್ತಾಂಶವನ್ನು ಸಂಗ್ರಹಿಸಿ, ಅದನ್ನು ವಿಶ್ಲೇಷಿಸಿ ಸಮಸ್ಯೆ ಪರಿಹಾರಕ್ಕೆ ಶಾಶ್ವತ ಪರಿಹಾರ ಕೊಡಬಹುದೇ ಎಂಬುದು ಈ ಚಿಂತನೆಯ ಹೂರಣವಾಗಿದೆ.

ಈ ಬಾರಿ ತಾತ್ಕಾಲಿಕ

ಪ್ರಸ್ತುತ ವರ್ಷದ ಬೇಸಿಗೆಯಲ್ಲಿ ಸಮಸ್ಯೆ ಪರಿಹಾರಕ್ಕಾಗಿ ಸಿದ್ಧತೆ ನಡೆಸಲು ಸಂಪುಟ ಉಪ ಸಮಿತಿ ಈಗಾಗಲೇ ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದೆ. ಇದು ಎಂದಿನಂತೆ ಕಾರ್ಯನಿರ್ವಹಿಸಲಿದೆ. ಇದರ ಹೊರತಾಗಿ ದತ್ತಾಂಶ ಸಂಗ್ರಹಿಸಿ ಅದನ್ನು ಅವಲೋಕಿಸಿ ಮುಂದಿನ ವರ್ಷದಲ್ಲಾದರೂ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡಲು ಕೆಲಸ ಆರಂಭಿಸಬೇಕೆಂಬ ಇರಾದೆ ಗ್ರಾಮೀಣಾಭಿವೃದ್ಧಿ ಇಲಾಖೆಯದ್ದಾಗಿದೆ.

ಕಾರ್ಯತಂತ್ರಗಳು

1. ಐದು ವರ್ಷದ ದತ್ತಾಂಶದಿಂದ ಸಮಸ್ಯೆ ಅರಿಯುವುದು

2. ನಿರಂತರ ಸಮಸ್ಯೆ ಇರುವ ಕಡೆ ಪರಿಹಾರಕ್ಕೆ ಪ್ರಯತ್ನ

3. ಯಾವ ಸ್ವರೂಪದಲ್ಲಿ ಸಮಸ್ಯೆ ಎಂದು ತಿಳಿಯುವುದು

4. ಶಾಶ್ವತ ಪರಿಹಾರಕ್ಕೆ, ಅನುದಾನ ಆದ್ಯತೆಗೆ ಅವಕಾಶ

5. ಆಡಳಿತ ಯಂತ್ರದ ಮೇಲಿನ ವಾರ್ಷಿಕ ಒತ್ತಡ ಕಡಿಮೆ

ಸೆಂಟರ್ ಆಫ್ ಎಕ್ಸೆಲೆನ್ಸ್

ಯೋಗ್ಯ ಕುಡಿಯುವ ನೀರು ಲಭ್ಯವಾಗಬೇಕೆಂದು ನೀತಿಯನ್ನೇ ತಂದಿರುವ ರಾಜ್ಯ ಸರ್ಕಾರ ಮುಂದೆ ಈ ಕ್ಷೇತ್ರದ ವಿಚಾರಕ್ಕೆ ಸಂಬಂಧಿಸಿದಂತೆ ಸೆಂಟರ್ ಆಫ್ ಎಕ್ಸೆಲೆನ್ಸ್ (ಶ್ರೇಷ್ಠತಾ ಕೇಂದ್ರ) ಸ್ಥಾಪಿಸಲು ಬಯಸಿದೆ. ಈ ನಿಟ್ಟಿನಲ್ಲಿ ಪ್ರಾಥಮಿಕ ಹಂತದ ಚರ್ಚೆಗಳು ನಡೆದಿವೆ.

ಸಮಸ್ಯೆ ಅರಿಯಲು ಅವಕಾಶ

ಕಳೆದ ಐದು ವರ್ಷದಲ್ಲಿ ಯಾವ ಜಿಲ್ಲೆ, ತಾಲೂಕು, ಗಾಪಂ, ಯಾವ ಸ್ಥಳದಲ್ಲಿ ಕುಡಿಯುವ ನೀರಿಗೆ ಜನ ಕಷ್ಟ ಪಡುತ್ತಿದ್ದಾರೆ ಎಂದು ಸರ್ಕಾರಿ ವ್ಯವಸ್ಥೆಯಲ್ಲಿರುವ ಮಾಹಿತಿ ಕ್ರೋಢೀಕರಿಸಲಾಗುತ್ತದೆ. ಇದರಿಂದ ಹೆಚ್ಚು ಸಮಸ್ಯೆ ಇರುವ, ಅದರ ಅವಧಿ, ಸ್ವರೂಪ ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆ.

ಖಾತ್ರಿಯತ್ತಲೂ ಚಿತ್ತ

ರಾಜ್ಯದ 38 ಸಾವಿರ ಹಳ್ಳಿಗಳಲ್ಲಿ ನೀರು, ವಿದ್ಯುತ್ ಖಾತ್ರಿ ಕೊಡಬಾರದೇಕೆ ಎಂಬ ದೂರದೃಷ್ಟಿ ಚಿಂತನೆಯೂ ಒಡಮೂಡಿದೆ. ಈ ಸಂಬಂಧ ಇಲಾಖೆ ಮಟ್ಟದಲ್ಲಿ ಶೀಘ್ರವೇ ಉನ್ನತ ಮಟ್ಟದ ಸಭೆ ನಡೆಯಬೇಕಿದೆ. ಗ್ರಾಮೀಣ ಜನರಿಗೆ ಕುಡಿಯುವ ನೀರು ಹಾಗೂ ವಿದ್ಯುತ್ ಸರಬರಾಜು ಉತ್ತಮ ರೀತಿಯಲ್ಲಿದ್ದರೆ ಸವಾಲುಗಳನ್ನು ಎದುರಿಸಲು ಸಾಧ್ಯವಾಗುತ್ತದೆ. ಇದಕ್ಕಾಗಿ ಪರಿಹಾರೋಪಾಯಗಳನ್ನು ರ್ಚಚಿಸಿ ಜಾರಿಗೆ ರೂಪುರೇಷೆ ಸಿದ್ಧಪಡಿಸಲಾಗುತ್ತದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಪರಿಹಾರೋಪಾಯ ಹೇಗೆ?

ಸದಾ ಸಮಸ್ಯೆ ಇರುವ ಕಡೆ ಕುಡಿಯುವ ನೀರನ್ನು ಪೂರೈಸಲು ಯಾವೆಲ್ಲ ಮೂಲ ಬಳಸಿಕೊಳ್ಳಬಹುದೆಂದು ನೋಡಲಾಗುತ್ತದೆ. ಬೋರ್​ವೆಲ್ ಅಗತ್ಯವೇ? ಸಮೀಪದ ಜಲಮೂಲದಿಂದ ಸರಬರಾಜು ಮಾಡಲು ಸಾಧ್ಯವೇ? ಸಮೀಪದ ವ್ಯವಸ್ಥೆಯಿಂದ ಸಂಪರ್ಕ ಮಾಡಿಕೊಡಬಹುದೇ ಎಂದು ನಂತರ ಕ್ರಿಯಾಯೋಜನೆ ರೂಪಿಸಿ ಅನುಷ್ಠಾನ ಮಾಡುವ ಉದ್ದೇಶವಿದೆ.

ಪ್ರತಿ ವರ್ಷ ಬೆಂಕಿ ಬಿದ್ದಾಗ ಬಾವಿ ತೋಡು ಎಂಬಂತೆ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಹುಡುಕುವ ಕಾರ್ಯ ಆಗುತ್ತಿದೆ. ಈ ಕಾರಣಕ್ಕೆ ಐದು ವರ್ಷದ ದತ್ತಾಂಶ ಸಂಗ್ರಹಿಸಿ ಅದರ ಆಧಾರದಲ್ಲಿ ಸಮಸ್ಯೆಗೆ ಪರಿಹಾರ ಕೊಡಬೇಕೆಂಬ ಪ್ರಯತ್ನ ನಡೆದಿದೆ. | ಪ್ರಿಯಾಂಕ್ ಖರ್ಗೆ ಗ್ರಾಮೀಣಾಭಿವೃದ್ಧಿ ಸಚಿವ https://www.vijayavani.net/students-of-this-school-are-great-in-these-five-languages

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net