ಸಂಚಾರ ಮಾಡದ ಸಂಚಾರಿ ಆಂಬುಲೆನ್ಸ್; ಪಶುಗಳಿಗಿಲ್ಲ ತುರ್ತು ಚಿಕಿತ್ಸೆ ; ಒಂದು ವರ್ಷದಿಂದ ನಿಂತಲ್ಲೇ ನಿಂತ ವಾಹನ

19sgr1a
ಪಶುಪಾಲನೆಯ ಸಂಚಾರಿ ತುರ್ತು ವಾಹನ.
Published on

ದೀಪಕ್ ಸಾಗರ್ ಸಾಗರ
ಕೇಂದ್ರ ಸರ್ಕಾರ ಜಾನುವಾರುಗಳನ್ನು ವ್ಯವಸ್ಥಿತವಾಗಿ ಕಾಪಾಡುವಲ್ಲಿ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಅದು ವ್ಯವಸ್ಥಿತವಾಗಿ ಅನುಷ್ಠಾನಗೊಳ್ಳಲಿಲ್ಲ. ಸಾಗರ ತಾಲೂಕಿನಲ್ಲಿ ಪಶುಗಳ ಸೇವೆಗಾಗಿಯೇ ಸಂಚಾರಿ ತುರ್ತು ವಾಹನವನ್ನು ನೀಡಲಾಗದೆ. ಆದರೆ ಒಂದು ವರ್ಷ ಕಳೆದರೂ ಆ ವಾಹನ ಸಾಗರದಲ್ಲಿ ಒಂದು ಬಾರಿಯೂ ಸಂಚಾರ ಮಾಡಲಿಲ್ಲ.

ಕೇಂದ್ರ ಸರ್ಕಾರದ ಪಶುಪಾಲನಾ ಮತ್ತು ಹೈನುಗಾರಿಕಾ ಇಲಾಖೆ ಕಳೆದ ಆಗಸ್ಟ್‌ನಲ್ಲಿ ಆಂಬುಲೆನ್ಸ್ ಒಂದನ್ನು ಸಾಗರ ತಾಲೂಕಿಗೆ ನೀಡಿದೆ. 1962 ನಂಬರ್‌ಗೆ ಕರೆ ಮಾಡಿದರೆ ತಕ್ಷಣ ಆ ಆಂಬುಲೆನ್ಸ್ ಜಾನುವಾರು ಅಪಘಾತಕ್ಕೊಳಗಾಗಿರುವ ಸ್ಥಳಕ್ಕೆ ಬಂದು ಅಲ್ಲಿಯೇ ಪ್ರಥಮ ಚಿಕಿತ್ಸೆಯನ್ನು ಕೈಗೊಳ್ಳುತ್ತದೆ. ಇಂತಹ ಅಪರೂಪದ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಎಲ್ಲ ತಾಲೂಕಳಲ್ಲೂ ಮಾಡಿದ್ದು ಪ್ರತಿ ತಾಲೂಕು ಕೇಂದ್ರಕ್ಕೂ ಒಂದು ಆಂಬುಲೆನ್ಸ್ ನೀಡಿದರು.
ದುರ್ದೈವ ಎಂದರೆ ಒಂದು ವರ್ಷದಿಂದ ಈ ವಾಹನಕ್ಕೆ ಚಾಲಕ, ಸಿಬ್ಬಂದಿ ಮತ್ತು ವೈದ್ಯರು ನೇಮಕವಾಗಲೇ ಇಲ್ಲ. ಹಾಗಾಗಿ ಪಶು ಚಿಕಿತ್ಸೆಯ ಸಂಚಾರಿ ವಾಹನ ಸಂಚರಿಸದೆ ಸಾಗರದ ಸರ್ಕಾರಿ ಪಶು ವೈದ್ಯಕೀಯ ಆಸ್ಪತ್ರೆ ಹಿಂಭಾಗದಲ್ಲಿ ಗೂಡು ಸೇರಿತ್ತು. ಮೊನ್ನೆ ಇದಕ್ಕೆ ಓರ್ವ ನೌಕರ, ಚಾಲಕನನ್ನು ನೇಮಕ ಮಾಡಿದ್ದಾರೆ. ಆದರೆ ಇಂದಿಗೂ ವೈದ್ಯರ ಭಾಗ್ಯ ಕರುಣಿಸಿಲ್ಲ. ಪಶುಪಾಲನಾ ಇಲಾಖೆಯವರು ಇದರ ಆಡಳಿತಕ್ಕೆ ವ್ಯವಸ್ಥೆಯೇ ಬೇರೆ ಇದೆ. ನಾವು ಮುಟ್ಟುವ ಹಾಗಿಲ್ಲ ಎನ್ನುತ್ತಾರೆ. ವಾಹನಕ್ಕೆ ಜಿಪಿಆರ್‌ಎಸ್ ಕೂಡ ಅಳವಡಿಸಲಾಗಿದೆ. ಒಟ್ಟಾರೆ ಇನ್ನು ಈ ವಾಹನಕ್ಕೆ ಸಂಚರಿಸುವ ಮುಹೂರ್ತ ಬಂದಿಲ್ಲ.
ಸಾಗರ ತಾಲೂಕಿನಲ್ಲಿ ಪಶು ಸಖಿ ಯೋಜನೆಯದ್ದು ಇದೇ ಕತೆ. ಕೇಂದ್ರ ಸರ್ಕಾರದ ಎನ್‌ಆರ್‌ಎನ್‌ಎಂ ಅಡಿಯಲ್ಲಿ ಪಶುಸಖಿ ಯೋಜನೆ ರೂಪಿಸಲಾಗಿದೆ. ಈ ಯೋಜನೆ ಬಗ್ಗೆ ಗ್ರಾಮೀಣ ಜನತೆಗೆ ಮಾಹಿತಿ ಮತ್ತು ಪ್ರಚಾರದ ಕೊರತೆಯಿದೆ.
ಪ್ರತಿ ಗ್ರಾಪಂಗೆ ಒಬ್ಬರಂತೆ ಸಾಗರ ತಾಲೂಕಿನ 35 ಗ್ರಾಪಂಗಳಿಗೂ ಪಶುಸಖಿಯರನ್ನು ನೇಮಕ ಮಾಡಲಾಗಿದೆ. 8 ತಿಂಗಳ ಹಿಂದೆಯೇ ಈ ಯೋಜನೆ ಅನುಷ್ಠಾನಕ್ಕೆ ಬಂದಿದ್ದು ಆಯಾ ಗ್ರಾಪಂ ವ್ಯಾಪ್ತಿಯ ಮಹಿಳೆಯೇ ಇದಕ್ಕೆ ನೇಮಕವಾಗಬೇಕು. ಜತೆಗೆ ಆಕೆ ಸ್ವಸಹಾಯ ಸಂಘದ ಸದಸ್ಯೆಯಾಗಿರಬೇಕು. ಎಸ್‌ಎಸ್‌ಎಲ್‌ಸಿ ಓದಿರಬೇಕು ಎನ್ನುವ ನಿಯಮವಿದೆ. ಇವರು ಜಾನುವಾರು ಗಣತಿ, ಜಾನುವಾರುಗಳ ಶುಶ್ರೂಷೆಗೆ ಸಹಕಾರ, ಇಲಾಖೆಯ ಯೋಜನೆಗಳನ್ನು ಹೈನುಗಾರಿಕೆ ಮಾಡುವವರಿಗೆ ತಲುಪಿಸುವುದು ಮುಂತಾದ ಕೆಲಸಗಳನ್ನು ನೀಡಲಾಗುತ್ತದೆ. ಈಗಾಗಲೇ ಎರಡು, ಮೂರು ಬಾರಿ ತರಬೇತಿ ನೀಡಲಾಗಿದೆ.ಆದರೆ ಗೌರವ ಸಂಭಾವನೆ ಕೇವಲ 3 ಸಾವಿರ ರೂ. ನೀಡಲಾಗುತ್ತಿದ್ದು ಕೆಲಸ ಮಾಡಲು ಮಹಿಳೆಯರು ಹಿಂದೇಟು ಹಾಕುತ್ತಿದ್ದಾರೆ.
ಸಾಗರ ತಾಲೂಕಿನಲ್ಲಿ ಕೂಡ ಕೆಲವರು ಈಗಾಗಲೇ ಈ ಕೆಲಸವನ್ನು ತ್ಯಜಿಸಿದ್ದಾರೆ. ಕಾರಣ ಕೇಳಿದರೆ ಸಂಭಾವನೆ ಕಡಿಮೆ, ಕೆಲಸಕ್ಕೆ ನಿಗದಿತ ಸಮಯವಿಲ್ಲ, ಯಾವ ಕ್ಷಣದಲ್ಲಿಯೂ ಓಡಾಟ ಮಾಡಬೇಕಾಗುತ್ತದೆ, ಕುಟುಂಬವನ್ನು ನೋಡಿಕೊಂಡು ಕೆಲಸ ನಿಭಾಯಿಸುವುದು ಕಷ್ಟ ಎನ್ನುತ್ತಾರೆ.
ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಸರ್ಜನ್‌ಗಳೇ ಇಲ್ಲದೆ ತೀವ್ರ ಸಮಸ್ಯೆಯಿದೆ. ಮುಖ್ಯ ಪಶುವೈದ್ಯಾಧಿಕಾರಿ ಡಾ. ಎಸ್.ಉಮಾದೇವಿ ಅವರು ಇರುವ ಸಿಬ್ಬಂದಿ ಮತ್ತು ವೈದ್ಯರನ್ನು ಬಳಸಿಕೊಂಡು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿರುವುದಕ್ಕೆ ತಾಲೂಕಿನ ಜನತೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾರೆ. ಆದರೆ ಇಲಾಖೆಯ ಸಮಸ್ಯೆಗಳು ಪರಿಹಾರವಾಗುತ್ತಿಲ್ಲ. ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಂಡಂತೆ ಕಾಣುತ್ತಿಲ್ಲ.

ನಿರ್ಮಾಣವಾಗದ ಗೋಶಾಲೆ
ಸಾಗರ ತಾಲೂಕಿನಲ್ಲಿ 1,17,716 ಜಾನುವಾರುಗಳನ್ನು ಗಣತಿ ಮಾಡಲಾಗಿದ್ದು ಅದಕ್ಕೆ ಆಧಾರ್ ಕಾರ್ಡ್ ಅಳವಡಿಸಲಾಗಿದೆ. ಪ್ರತಿ ದಿನವೂ ಒಂದಲ್ಲ ಒಂದು ಬಿಡಾಡಿ ದನಗಳು ಅಪಘಾತಕ್ಕೆ ಒಳಗಾಗುತ್ತಲೇ ಇವೆ. ನಾಡಕಲಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 48 ಎಕರೆ ಗೋಶಾಲೆಗೆ ಜಾಗ ಕಾಯ್ದಿರಿಸಲಾಗಿತ್ತು, ಅನುದಾನವೂ ಬಿಡುಗಡೆಯಾಗಿತ್ತು. ಸ್ಥಳೀಯರ ಪ್ರತಿರೋಧದಿಂದ ಇಲ್ಲಿ ಗೋಶಾಲೆ ನಿರ್ಮಾಣವಾಗಲಿಲ್ಲ, ಅನುದಾನವೂ ಬೇರೆ ಕಡೆ ವರ್ಗಾವಣೆಯಾಯಿತು. ಸಾಗರದಲ್ಲಿ ತುರ್ತು ಗೋಶಾಲೆಯನ್ನು ನಿರ್ಮಾಣ ಮಾಡಬೇಕಾದ ಅಗತ್ಯತೆಯಿದೆ. ಕಸಾಯಿಖಾನೆಗಳಿಗೆ ದನಗಳನ್ನು ಕದ್ದೊಯ್ಯುವ ಪ್ರಕರಣಗಳು ದಿನೇದಿನೆ ಹೆಚ್ಚುತ್ತಿದೆ. ಸ್ಥಳೀಯ ಆಡಳಿತ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಬೇಕಾಗಿದೆ.
ನಾಲ್ಕು ಗೋಶಾಲೆಗೆ ಅನುದಾನ
ಕಳೆದ ಸರ್ಕಾರದಲ್ಲಿ ಮಂತ್ರಿಗಳಾಗಿದ್ದ ಪ್ರಭು ಚೌವ್ಹಾಣ್ ಪ್ರತಿಯೊಬ್ಬ ಸರ್ಕಾರಿ ನೌಕರರು 11 ಸಾವಿರ ರೂ. ವರ್ಷಕ್ಕೆ ನೀಡಿ ಗೋವನ್ನು ದತ್ತು ತೆಗೆದುಕೊಳ್ಳುವ ಯೋಜನೆ ರೂಪಿಸಿದ್ದರು. ಈ ಯೋಜನೆಗೆ ಸಾಗರದ ಸಾಕಷ್ಟು ಪಶು ವೈದ್ಯರೂ ಸಹಕಾರ ನೀಡಿದ್ದಾರೆ. ತಾಲೂಕಿನಲ್ಲಿ ಸರ್ಕಾರ ಅನುದಾನ ನೀಡುತ್ತಿರುವ 4 ಗೋಶಾಲೆಗಳಿವೆ. ಅದರಲ್ಲಿ ಶೀಧರಾಶ್ರಮ ವರದಾಪುರಕ್ಕೆ ಜಾನುವಾರುಗಳ ಸಾಕುವಿಕೆ ಆಧಾರದ ಮೇಲೆ 14,53,490 ರೂ., ಮುರುಘಾರಾಜೇಂದ್ರ ಗೋಶಾಲೆ ಆನಂದಪುರಕ್ಕೆ 5,17,660 ರೂ., ಪುಣ್ಯಕೋಟಿ ಗೋರಕ್ಷಣಾ ವೇದಿಕೆ ಕುಂಟಗೋಡು 2,48,875 ರೂ., ಶಾಂತಿನಾಥ ದೈವೋದಯ ಹಾಳಸಸಿ ಗೋಶಾಲೆ 1,19,460 ರೂ. ಅನುದಾನವನ್ನು ಪುಣ್ಯಕೋಟಿ ದತ್ತು ಯೋಜನೆಯಡಿ ನೀಡಲಾಗಿದೆ. ಅಲ್ಲದೇ ಸರ್ಕಾರದ ಪಿಂಜಾರ ಪೋಲ್ ಬಿಡಾಡಿ ದನಗಳನ್ನು ಕಾಪಾಡುತ್ತಿರುವ ಮುರುಘರಾಜೇಂದ್ರ ಗೋಶಾಲೆಗೆ 71,552 ರೂ., ಪುಣ್ಯಕೋಟಿ ಗೋರಕ್ಷಣಾ ವೇದಿಕೆ ಕುಂಟಗೋಡು 15,750 ರೂ. ಅನುದಾನ ನೀಡಿದೆ.

ಈಗಾಗಲೇ 1996 ರೇಬೀಸ್ ಲಸಿಕೆ ನೀಡಲಾಗಿದೆ. ಶೀಘ್ರದಲ್ಲಿಯೇ ಕಾಲುಬಾಯಿ ರೋಗಕ್ಕೆ ವ್ಯಾಕ್ಸಿನೇಷನ್ ಮಾಡುವ ಪ್ರಕ್ರಿಯೆ ಆರಂಭವಾಗುತ್ತದೆ. ಸರ್ಕಾರ ಪಶುಗಳ ಶುಶ್ರೂಷೆಗಾಗಿಯೇ ಆಂಬುಲೆನ್ಸ್ ನೀಡಿದ್ದು ಇದಕ್ಕೆ ಈಗಾಗಲೇ ಚಾಲಕ, ಸಿಬ್ಬಂದಿ ನೇಮಕ ಮಾಡಲಾಗಿದೆ. ಶೀಘ್ರ ವೈದ್ಯರ ನೇಮಕವೂ ಆಗಲಿದೆ. ಯಾವುದೇ ಜಾನುವಾರು ಅಪಘಾತಕ್ಕೊಳಗಾದರೆ ನಾವೇ ನಮ್ಮ ತಂಡದ ಮೂಲಕ ಆ ಸ್ಥಳಕ್ಕೆ ಹೋಗಿ ಶುಶ್ರೂಷೆ ಮಾಡುತ್ತಿದ್ದೇವೆ. ವೈದ್ಯರು ಮತ್ತು ಸಿಬ್ಬಂದಿ ನೇಮಕಾತಿ ಅವಶ್ಯಕತೆಯಿದ್ದು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇವೆ.ಡಾ. ಎಸ್.ಉಮಾದೇವಿಮುಖ್ಯಪಶು ವೈದ್ಯಾಧಿಕಾರಿ, ಸಾಗರ

ಸಾಗರದಲ್ಲಿ ಸಾಕಷ್ಟು ಸಮಸ್ಯೆಗಳ ಮಧ್ಯೆಯೂ ಪಶು ವೈದ್ಯಕೀಯ ಇಲಾಖೆ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ, ಪಶು ಪಾಲನೆಗೆ ಸಹಕರಿಸುತ್ತಿದೆ. ಸರ್ಕಾರ ಲಕ್ಷಗಟ್ಟಲೇ ಹಣ ವಿನಿಯೋಗಿಸಿ ಪಶುಗಳಿಗಾಗಿಯೇ ನೀಡಿರುವ ಸಂಚಾರಿ ತುರ್ತು ಚಿಕಿತ್ಸಾ ವಾಹನ ಮೊದಲು ಓಡಾಡುವಂತಾಗಲಿ.ಪುರುಷೋತ್ತಮ್ಗೋಪಾಲಕರು, ಪುಣ್ಯಕೋಟಿ ಗೋರಕ್ಷಣಾ ವೇದಿಕೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net