

ಕೆ.ಆರ್.ಸಾಗರ: ಸರ್ ಎಂ.ವಿಶ್ವೇಶ್ವರಯ್ಯ ಅವರ ತಮ್ಮನ ಮರಿಮೊಮ್ಮಗ ಸತೀಶ್ ಮೋಕ್ಷ ಗುಂಡಂ ಮತ್ತು ಕುಟುಂಬ ಕೃಷ್ಣರಾಜಸಾಗರ ಅಣೆಕಟ್ಟೆಗೆ ಭೇಟಿ ನೀಡಿ ಜಲವೈಭವವನ್ನು ಕಣ್ತುಂಬಿಕೊಂಡಿತು.
ಸತೀಶ್ ಮೋಕ್ಷ ಗುಂಡಂ ಅವರು ಪತ್ನಿ ಲಕ್ಷ್ಮಮ್ಮ ಹಾಗೂ ಪುತ್ರಿ ದಿವ್ಯಾ ಜತೆಗೂಡಿ ಅಣೆಕಟ್ಟೆಯ ಗೇಟುಗಳು, ಸರ್ ಎಂ.ವಿ. ನಾಲೆ, ಹಿನ್ನೀರು, ಬೃಂದಾವನವನ್ನು ಸೋಮವಾರ ವೀಕ್ಷಿಸಿದರು. ಅಣೆಕಟ್ಟೆ ಮತ್ತು ಗೇಟುಗಳ ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದರು. ಕಾವೇರಿ ನೀರಾವರಿ ನಿಗಮ ಸಹಾಯಕ ಇಂಜಿನಿಯರ್ ಮಾನಸ ಅವರು ಪ್ರಸ್ತುತ ಅಣೆಕಟ್ಟೆ ಕುರಿತು ಮಾಹಿತಿ ನೀಡಿದರು.
ಸತೀಶ್ ಮೋಕ್ಷ ಗುಂಡಂ ಮಾತನಾಡಿ, ಈ ಅಣೆಕಟ್ಟೆ ಕಟ್ಟಲು ಮೈಸೂರು ಮಹಾರಾಜರ ಕೊಡುಗೆ ಅನನ್ಯ. ನಮ್ಮ ಮುತ್ತಾತ ಸರ್ ಎಂ.ವಿ. ಅವರ ತಂತ್ರಜ್ಞಾನದ ಕೊಡುಗೆ ಕೂಡ ಸ್ಮರಣೀಯ. ಮಹಾರಾಜರ ಶ್ರಮ ಮತ್ತು ಸರ್ಎಂವಿ ಅವರ ಜ್ಞಾನದಿಂದ ಈ ಅಣೆಕಟ್ಟೆ ಇನ್ನೂ ಉತ್ತಮ ಸ್ಥಿತಿಯಲ್ಲಿದೆ. ಆದ್ದರಿಂದ ಇಲ್ಲಿ ಅವರ ಪ್ರತಿಮೆ ನಿರ್ಮಿಸಬೇಕು. ಈ ಬಗ್ಗೆ ಸರ್ಕಾರ ಕಠಿಣ ನಿಲುವು ತೆಗೆದುಕೊಳ್ಳಬೇಕು ಎಂದರು.
ಕಿರಿಯ ಇಂಜಿನಿಯರ್ಗಳಾದ ಗಣೇಶ್, ಅಭಿಲಾಷ್, ಸರ್ಕಾರಿ ನೌಕರರ ಸಂದ ಕೆ.ಆರ್.ಸಾಗರ ಯೋಜನಾ ಘಟಕದ ಅಧ್ಯಕ್ಷ ಶಿವಪ್ಪ ಇದ್ದರು.