

ಮಂಗಳೂರು: ನಗರದ ಬಾವುಟಗುಡ್ಡೆಯ ಖಾಸಗಿ ಮೆಡಿಕಲ್ ಕಾಲೇಜಿನ ಡೆಂಟಲ್ ವಿಭಾಗಕ್ಕೆ ಬಂದಿದ್ದ ಕಾನೂನಿನೊಡನೆ ಸಂಘರ್ಷಕ್ಕಿಳಿದ ಬಾಲಕನೋರ್ವ ಮಹಿಳೆಯರ ಶೌಚಗೃಹದಲ್ಲಿ ಮೊಬೈಲ್ ಇಟ್ಟು ವಿಡಿಯೋ ಚಿತ್ರೀಕರಣಕ್ಕೆ ಯತ್ನಿಸಿ ಸಿಕ್ಕಿಬಿದ್ದಿದ್ದಾನೆ.
ಮಂಗಳವಾರ ಬೆಳಗ್ಗೆ ಹಲ್ಲಿನ ಚಿಕಿತ್ಸೆಗೆಂದು ಹುಡುಗ ಬಂದಿದ್ದ. ಈ ಹಿಂದೆಯೂ ತಾಯಿ ಜೊತೆಗೆ ಚಿಕಿತ್ಸೆಗಾಗಿ ಬರುತ್ತಿದ್ದ. ನಿನ್ನೆ ಒಬ್ಬನೇ ತಾಯಿಯ ಮೊಬೈಲನ್ನು ತೆಗೆದುಕೊಂಡು ಬಂದಿದ್ದ. ಚಿಕಿತ್ಸೆಗೆ ಹೋಗುವುದಕ್ಕೂ ಮುನ್ನ ಮೊಬೈಲನ್ನು ಮಹಿಳೆಯರ ಶೌಚಗೃಹದ ಮೇಲೆ ಇಟ್ಟು ಹೋಗಿದ್ದಾನೆ. ಆದರೆ, ಸೈಲೆಂಟ್ ಮೋಡಲ್ಲಿ ಇಡುವುದಕ್ಕೆ ಮರೆತಿದ್ದ. ಕೆಲ ಹೊತ್ತಿನಲ್ಲೇ ಮೊಬೈಲ್ ರಿಂಗಣಿಸಿತ್ತು. ಪದೇ ಪದೇ ಮೊಬೈಲ್ ಶೌಚಗೃಹದ ಒಳಗಿನಿಂದ ರಿಂಗ್ ಆಗುತ್ತಿದ್ದುದನ್ನು ಸೆಕ್ಯುರಿಟಿ ಸಿಬಂದಿ ಗಮನಿಸಿದ್ದು, ಒಳಗೆ ಹೋಗಿ ನೋಡಿದಾಗ ಮೇಲೆ ಇಟ್ಟಿದ್ದ ಮೊಬೈಲ್ ಗಮನಕ್ಕೆ ಬಂದಿದೆ.
ಬಳಿಕ ಸಿಸಿಟಿವಿ ಗಮನಿಸಿದಾಗ, ಹುಡುಗನ ಚಹರೆ ಸಿಕ್ಕಿದ್ದು ಬಂದರು ಪೊಲೀಸರನ್ನು ಸ್ಥಳಕ್ಕೆ ಕರೆಸಿದ್ದಾರೆ. ಉಡುಪಿ ಜಿಲ್ಲೆಯ ಕಾಪು ಮೂಲದ ಹುಡುಗನಾಗಿದ್ದು, ಸುರತ್ಕಲ್‌ನಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿದ್ದಾನೆ. ತಾಯಿ ಜೊತೆಗೆ ಹಲ್ಲಿನ ಚಿಕಿತ್ಸೆಗೆ ಬರುತ್ತಿದ್ದ ಹುಡುಗ ನಿನ್ನೆ ಒಬ್ಬಂಟಿಯಾಗಿ ಬಂದು ದುಷ್ಕೃತ್ಯ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾನೆ. ಪೊಲೀಸರು ಮೊಬೈಲನ್ನು ಚೆಕ್ ಮಾಡಿದಾಗ ಯಾವುದೇ ವಿಡಿಯೋ, ಫೋಟೋ ದಾಖಲಾಗಿಲ್ಲ ಆರೋಪಿಯನ್ನು ಬಾಲಾಪರಾಧ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
2023ರ ಜುಲೈ ತಿಂಗಳಲ್ಲಿ ಉಡುಪಿ ನಗರದ ಕಣ್ಣಿನ ಚಿಕಿತ್ಸೆಯ ಕಾಲೇಜಿನಲ್ಲಿ ಇಂತಹದ್ದೇ ಘಟನೆ ನಡೆದಿತ್ತು. ಮೂವರು ವಿದ್ಯಾರ್ಥಿನಿಯರು ತಮಾಷೆಗಾಗಿ ಮೊಬೈಲನ್ನು ಶೌಚಗೃಹದಲ್ಲಿಟ್ಟು ವಿಡಿಯೋ ಚಿತ್ರೀಕರಣಕ್ಕೆ ಯತ್ನಿಸಿದ್ದರು. ಈ ಘಟನೆ ರಾಜ್ಯಾದ್ಯಂತ ಭಾರೀ ಗದ್ದಲ, ಆಕ್ರೋಶಕ್ಕೆ ಕಾರಣವಾಗಿತ್ತು. ಬಳಿಕ ಮೂವರು ವಿದ್ಯಾರ್ಥಿನಿಯರನ್ನು ಕಾಲೇಜಿನಿಂದ ಅಮಾನತು ಮಾಡಲಾಗಿತ್ತು. ವಿಪಕ್ಷಗಳ ಆರೋಪ ಜೋರಾದ ಕಾರಣ ಪ್ರಕರಣದ ತನಿಖೆಯನ್ನು ಸಿಓಡಿಗೆ ಒಪ್ಪಿಸಲಾಗಿತ್ತು.