ಶಾಂತಿನಿಕೇತನ ಸೌಹಾರ್ದ ಸಹಕಾರಿಯಿಂದ ಸಾರ್ಥಕ ಹೆಜ್ಜೆ

Hbr 23 may 01.a
Published on

ವಿಜಯವಾಣಿ ಸುದ್ದಿಜಾಲ ಹೆಬ್ರಿ

ಸಮಾಜಮುಖಿ ಚಟುವಟಿಕೆಗಳಲ್ಲಿ ಸದಾ ಮುಂಚಿತವಾಗಿರುವ ಶಾಂತಿನಿಕೇತನ ಯುವವೃಂದದ ಅಂಗ ಸಂಸ್ಥೆ ಶಾಂತಿನಿಕೇತನ ಸೌಹಾರ್ದ ಸಹಕಾರಿಯ ಲಾಭಾಂಶದಲ್ಲಿ ಒಂದು ಭಾಗವನ್ನು ಪರಿಸರ ಸಂರಕ್ಷಣೆಗೆ ಮೀಸಲಿಟ್ಟು ವಿಶೇಷ ಯೋಜನೆ ರೂಪಿಸಿ ಮತ್ತೊಮ್ಮೆ ತನ್ನ ಸಾಮಾಜಿಕ ಬದ್ಧತೆ ತೋರಿದೆ. ಪರಿಸರ ಸಂರಕ್ಷಣೆಯ ಉದ್ದೇಶದಿಂದ ಸಹಕಾರಿಯು ತನ್ನ ಲಾಭದ ಒಂದು ಭಾಗ ಮೀಸಲಿಟ್ಟಿದ್ದು, ಅದರ ಭಾಗವಾಗಿ ಸದಸ್ಯರಿಗೆ ಬಟ್ಟೆಯ ಕೈಚೀಲ ವಿತರಿಸುವ ಒಂದು ಮಹತ್ವದ ಯೋಜನೆ ಯಶಸ್ವಿಯಾಗಿ ಜಾರಿಗೊಳಿಸಿದೆ.

ಸದಸ್ಯರಲ್ಲಿ ಸಂತೋಷ, ಪ್ರೋತ್ಸಾಹ

ಸಹಕಾರಿಯ ಈ ಆಲೋಚನೆಗೆ ಸದಸ್ಯರು ಬಹಳ ಸಂತೋಷ ವ್ಯಕ್ತಪಡಿಸಿದ್ದು, ಹಲವರು ಇಂತಹ ಯೋಜನೆಗಳು ಪರಿಸರ ಕಾಪಾಡುವಲ್ಲಿ ನಿಜವಾದ ಬದಲಾವಣೆ ತರಬಹುದೆಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಟ್ಟೆ ಚೀಲಗಳ ವಿತರಣೆ ಸಾರ್ವಜನಿಕವಾಗಿ ನೀಡಿ ಜಾಗೃತಿ ಮೂಡಿಸಬೇಕು. ಇದು ಪರಿಸರ ಜಾಗೃತಿಗೆ ಮೊದಲ ಹೆಜ್ಜೆಯಾಗಲಿದೆ.

ಭವಿಷ್ಯದ ಯೋಜನೆಗಳು

ಈಗಾಗಲೇ ಸರ್ಕಾರಿ ಶಾಲೆಗಳಲ್ಲಿ ಹೆಬ್ರಿಯ ರಾಘವೇಂದ್ರ ಚಾರಿಟೆಬಲ್ ಟ್ರಸ್ಟ್, ಶಾಂತಿನಿಕೇತನ ಯುವವೃಂದ, ವಿಜಯವಾಣಿ ಸಹಯೋಗದೊಂದಿಗೆ ಪ್ರತಿ ಶಾಲೆಯಲ್ಲಿ ಗಿಡ ನೆಟ್ಟು ಉತ್ತಮವಾಗಿ ಬೆಳೆಸಿದ ವಿದ್ಯಾರ್ಥಿಗಳ ತಂಡಕ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಸಹಕಾರಿಯು ಮುಂದಿನ ದಿನಗಳಲ್ಲಿ ಮರ ನೆಡುವ ಅಭಿಯಾನ, ಶಾಲಾ-ಕಾಲೇಜುಗಳಲ್ಲಿ ಪರಿಸರ ಶಿಕ್ಷಣ ಕಾರ್ಯಕ್ರಮ ನಡೆಸುವ ಯೋಜನೆ ರೂಪಿಸಲಿದೆ.

ಪರಿಸರ ಸಂರಕ್ಷಣೆಯ ಹಾದಿಯಲ್ಲಿ ಶಾಂತಿನಿಕೇತನ ಸೌಹಾರ್ದ ಸಹಕಾರಿ ತೆಗೆದುಕೊಂಡಿರುವ ಈ ಪ್ರಾಮಾಣಿಕ ಹೆಜ್ಜೆ ಇತರ ಸಂಸ್ಥೆಗೆ ಸ್ಫೂರ್ತಿ ನೀಡಬಲ್ಲದು. ಲಾಭಕ್ಕಿಂತಲೂ, ಲಾಭಕರವಾದದ್ದು ನಿಸರ್ಗದ ಸಂರಕ್ಷಣೆಯಾಗಿದೆ ಎಂಬ ಸಂದೇಶವನ್ನು ಈ ಯೋಜನೆ ಮೂಲಕ ಸಹಕಾರಿಯು ನೀಡಿದೆ.

ಪ್ಲಾಸ್ಟಿಕ್ ವಿರುದ್ಧ ಹೋರಾಟ

ಈ ಯೋಜನೆಯ ಹಿಂದಿನ ಪ್ರಮುಖ ಉದ್ದೇಶ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ಬದಲಿಗೆ ಪುನಃ ಬಳಕೆ ಮಾಡಬಹುದಾದ, ಪರಿಸರ ಸ್ನೇಹಿ ಬಟ್ಟೆ ಚೀಲಗಳ ಬಳಕೆಯನ್ನು ಉತ್ತೇಜಿಸುವುದು. ಈಗಾಗಲೇ ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ಉಂಟಾಗುತ್ತಿರುವ ಹಾನಿ ಗಮನದಲ್ಲಿಟ್ಟುಕೊಂಡು ಕ್ರಮವು ಸಮಯೋಚಿತ ಹೌದು ಮತ್ತು ಮಾದರಿಯೂ ಆಗಿದೆ.

ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿ

ಸಂಘದ ಮೂಲಕ ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯುತ್ತಿದೆ. ಉಡುಪಿ ಅದಮಾರು ಮಠ ವತಿಯಿಂದ ನಡೆದ ಬೇಸಿಗೆ ಶಿಬಿರದಲ್ಲಿ ಅನೇಕ ವಿದ್ಯಾರ್ಥಿಗಳ ಮನ ಪರಿವರ್ತನೆಗೊಂಡು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ, ಹುಟ್ಟು ಹಬ್ಬದ ದಿನ ಗಿಡ ನೆಟ್ಟು ವಿಶೇಷವಾಗಿ ಆಚರಿಸುವ ಶಾಂತಿನಿಕೇತನದ ಮೂಲಕ ಈಗಾಗಲೇ ಸರಣಿ ಸ್ವಚ್ಛತಾ ಕಾರ್ಯಕ್ರಮ ನಡೆಸಿದ್ದೆವು. ಈಗ ನಮ್ಮ ಸಹಕಾರಿಯ ಲಾಭದ ಒಂದು ಭಾಗದಿಂದ ಪರಿಸರ ಸಂರಕ್ಷಣೆಗೆ ನೀಡುತ್ತಿದ್ದೇವೆ. ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣಕ್ಕೆ ಸದಸ್ಯರೆಲ್ಲ ಕೈ ಜೋಡಿಸಿದಾಗ ಯಶಸ್ಸು ಸಾಧ್ಯ.

ಪರಿಸರ ಉಳಿಸುವುದು ನಮ್ಮ ಎಲ್ಲರ ಹೊಣೆ. ಶಾಶ್ವತ ಅಭಿವೃದ್ಧಿಗೆ ಇದು ಅವಶ್ಯಕ. ಈ ಹಿಂದೆ ನಿರಂತರ ಸ್ವಚ್ಛತಾ ಕಾರ್ಯ ಕೈಗೊಂಡಿದ್ದೆವು. ಈಗ ಮುಂದುವರಿದು ಸದಸ್ಯರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲು ಬಟ್ಟೆಯ ಕೈ ಚೀಲ ನೀಡುವ ಯೋಜನೆ ಕೈಗೊಂಡಿದ್ದೇವೆ. ರಾಜೇಶ್ -ಕುಡಿಬೈಲು ಕುಚ್ಚೂರು ಶಾಂತಿನಿಕೇತನ ಸೌಹಾರ್ದ ಸಹಕಾರಿ ಸಂಘ ಅಧ್ಯಕ್ಷರು ನಾವು ಪ್ರಕೃತಿಯೊಂದಿಗೆ ಹೊಂದಾಣಿಕೆ ಜೀವನ ನಡೆಸಬೇಕು. ಮರುಬಳಕೆಯಾಗುವ ಪ್ಲಾಸ್ಟಿಕ್ ಬಳಕೆ ಮಾಡಬೇಕು. ಅತ್ಯಂತ ಅಗತ್ಯತೆಯಲ್ಲಿ ಮಾತ್ರ ಪ್ಲಾಸ್ಟಿಕ್ ಬಳಕೆ ಮಾಡಿ ಪರಿಸರದ ಉಳಿವಿನಲ್ಲಿ ಕೈಜೋಡಿಸಬೇಕು. ಪ್ಲಾಸ್ಟಿಕ್ ಬಳಕೆ ಬಗ್ಗೆ ದೊಡ್ಡ ಮಟ್ಟದಲ್ಲಿ ಅಭಿಯಾನ ನಡೆಯಬೇಕಾಗಿದೆ. ಆ ನಿಟ್ಟಿನಲ್ಲಿ ಶಾಂತಿನಿಕೇತನ ಸಂಸ್ಥೆಯವರು ಉತ್ತಮ ಸಾಮಾಜಿಕ ಕಳಕಳಿಯೊಂದಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಯೋಜನೆ ರೂಪಿಸಿರುವುದು ಶ್ಲಾಘನೀಯ. -ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು, ಅದಮಾರು ಮಠ ಉಡುಪಿ https://www.vijayavani.net/scouts-guides-students-who-excelled-in-sslc-and-puc-to-be-felicitated-on-may-30 https://www.vijayavani.net/receiving-the-grace-of-god-through-service

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net