ಸ್ವಸ್ಥ ಸಮಾಜಕ್ಕಾಗಿ ಅರ್ಥಪೂರ್ಣ ಮ್ಯಾರಾಥಾನ್, ನಮ್ಮ ಪೊಲೀಸ್ ನಮ್ಮ ಹೆಮ್ಮೆ...!

MARATHAN POLICE DEPT
ವಿಜಯಪುರ ನಗರದಲ್ಲಿ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ಮ್ಯಾರಾಥಾನ್‌ನಲ್ಲಿ ಸಚಿವ ಎಂ.ಬಿ. ಪಾಟೀಲರು ಹೆಜ್ಜೆ ಹಾಕಿ ಗಮನ ಸೆಳೆದರು. ಜಿಲ್ಲಾಧಿಕಾರಿ ಟಿ.ಭೂಬಾಲನ್ ಹಾಗೂ ಎಸ್‌ಪಿ ಲಕ್ಷ್ಮಣ ನಿಂಬರಗಿ ಇದ್ದಾರೆ.
Published on

ವಿಜಯಪುರ: ‘ಡ್ರಗ್ ಫ್ರೀ ಕರ್ನಾಟಕ-ಫಿಟ್‌ನೆಸ್ ಫಾರ್ ಆಲ್’ ಹಾಗೂ ‘ನಮ್ಮ ಪೊಲೀಸ್ ನಮ್ಮ ಹೆಮ್ಮೆ’ ಥೀಮ್ ಅಡಿಯಲ್ಲಿ ಭಾನುವಾರ ಹಮ್ಮಿಕೊಂಡ ಕರ್ನಾಟಕ ಪೊಲೀಸ್ ರನ್-2025 ಯಶಸ್ವಿಯಾಗಿ ನೆರವೇರಿತು.

ಜಿಲ್ಲಾ ಪೊಲೀಸ್ ಇಲಾಖೆಯಿಂದ ಭಾಣುವಾರ ವಿಶ್ವ ವಿಖ್ಯಾತ ಗೋಳಗುಮ್ಮಟ ಆವರಣದಲ್ಲಿ ಹಮ್ಮಿಕೊಂಡಿದ್ದ 5 ಕಿಮೀ ಮ್ಯಾರಾಥಾನ್‌ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಸಚಿವ ಡಾ.ಎಂ.ಬಿ. ಪಾಟೀಲ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ವ್ಯಸನಕ್ಕೆ ಒಳಗಾಗದೆ ಸುಂದರ ಜೀವನ ರೂಪಿಸಿಕೊಳ್ಳಲು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಡ್ರಗ್ಸ್ ಫ್ರಿ ಕರ್ನಾಟಕ, ಫಿಟನೆಸ್ ಫಾರ್ ಆಲ್ ಹಾಗೂ ನಮ್ಮ ಪೊಲೀಸ್ ನಮ್ಮ ಹೆಮ್ಮೆಯ ವಿಷಯಾಧಾರಿತ ಕರ್ನಾಟಕ ಪೊಲೀಸ್ ರನ್-2025 ಹಮ್ಮಿಕೊಳ್ಳಲಾಗಿದೆ ಎಂದು ಸಚಿವರು ಹೇಳಿದರು.

ಸದೃಢ ಸಮಾಜಕ್ಕಾಗಿ ಇಂತಹ ಕಾರ್ಯಕ್ರಮಗಳು ಅತ್ಯಗತ್ಯವಾಗಿವೆ. ಇಂತಹ ಕಾರ್ಯಕ್ರಮಗಳ ಉದ್ದೇಶ ಸಫಲತೆ ಕಾಣಲು, ಸಾಮಾಜಿಕವಾಗಿ ಸಂಘ ಸಂಸ್ಥೆಗಳು, ಶಾಲಾ ಕಾಲೇಜ್‌ಗಳು ಕೈ ಜೋಡಿಸುವ ಮೂಲಕ ಸದೃಢ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.

ಡ್ರಗ್ಸ್ ನಿಯಂತ್ರಣದಲ್ಲಿ ಸಾರ್ವಜನಿಕರ ಸಹಕಾರವು ಅತ್ಯಗತ್ಯವಾಗಿದೆ. ಪ್ರತಿಯೊಬ್ಬರೂ ಮಾನಸಿಕ ಹಾಗೂ ದೈಹಿಕ ಸದೃಢತೆ ಹೊಂದುವುದು ಅತ್ಯಗತ್ಯವಾಗಿರುವುದರಿಂದ ಇಂತಹ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ. ಜಿಲ್ಲಾಡಳಿತ ವತಿಯಿಂದಲೂ ವಿವಿಧ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದ್ದು, ಪಾಲಕರು ಅರಿವು ಹೊಂದಿ ಮಕ್ಕಳ ಬಗ್ಗೆ ಕಾಳಜಿ ವಹಿಸಿ ಯಾವುದೇ ವ್ಯಸನಕ್ಕೆ ಬಲಿಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.

ಸಮಾಜದ ಸುರಕ್ಷತೆಯ ಹಿತದೃಷ್ಟಿಯಿಂದ ಬಿಡುವಿಲ್ಲದೇ ದಿನನಿತ್ಯದ 24 ಗಂಟೆಗಳ ಕಾರ್ಯ ನಿರ್ವಹಿಸುವ ಪೊಲೀಸ್‌ರು ಸಹ ತಮ್ಮ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ಪ್ರತಿ ದಿನ ಒಂದು ಗಂಟೆಯಾದರೂ ದೈಹಿಕ ಸದೃಢತೆಗೆ ಸಮಯ ಮೀಸಲಿಡುವ ಮೂಲಕ ದೈಹಿಕವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು ಸಚಿವ ಎಂ.ಬಿ. ಪಾಟೀಲ ಹೇಳಿದರು.

ಬಳಿಕ ಓಟದಲ್ಲಿ ಪಾಲ್ಗೊಳ್ಳುವ ಮೂಲಕ ಸಚಿವ ಎಂ.ಬಿ. ಪಾಟೀಲರು ಹುರಿದುಂಬಿಸಿದರು. ಶಾಸಕ ವಿಠಲ ಕಟಕದೊಂಡ, ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸಹ ಪಾಲ್ಗೊಂಡು ಗಮನ ಸೆಳೆದರು.

ಗೋಳಗುಮ್ಮಟದಿಂದ ಆರಂಭಗೊಂಡ ಮ್ಯಾರಾಥಾನ್, ಜಿಲ್ಲಾ ಕ್ರೀಡಾಂಗಣ, ಬಸವೇಶ್ವರ ವೃತ್ತ, ಗಾಂಧಿಚೌಕ್, ಶಿವಾಜಿ ವೃತ್ತ, ವಾಟರ್ ಟ್ಯಾಂಕ್, ಸೋಲಾಪೂರ ರಸ್ತೆ ಮಾರ್ಗವಾಗಿ ಜಿಲ್ಲಾ ಪೊಲೀಸ್ ಕವಾಯತು ಮೈದಾನ ತಲುಪಿ ಮುಕ್ತಾಯಗೊಂಡಿತು. ಎಎಸ್‌ಪಿಗಳಾದ ಶಂಕರ ಮಾರಿಹಾಳ, ರಾಮನಗೌಡ ಹಟ್ಟಿ, ಡಿವೈಎಸ್‌ಪಿ ಬಸವರಾಜ ಯಲಿಗಾರ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net