

ಮಂಗಳೂರು: ತುಳುನಾಡ ಆರಾಧ್ಯ ದೈವ ಕೊರಗಜ್ಜನ ವೇಷ ಧರಿಸಿ ಡಾನ್ಸ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನ ಮಂಗಲ್ಪಾಡಿ ನಿವಾಸಿ ಅಹ್ಮದ್ ಮುಜಿತಾಬು(28) ಮತ್ತು ಬಾಯಾರು ಪದವು ನಿವಾಸಿ ಮೊಯ್ದೀನ್ ಮುನಿಶ್(19) ಬಂಧಿತರು. ಆರೋಪಿಗಳು ಕಾಸರಗೋಡಿನ ಮಂಜೇಶ್ವರ ಮೂಲದವರು. ಪ್ರಮುಖ ಆರೋಪಿ, ಮದುಮಗ ಉಮರುಲ್ ಬಾತಿಷ್ ತಲೆಮರೆಸಿಕೊಂಡಿದ್ದಾನೆ.
ಮದುವೆಯ ದಿನ ಕೊರಗಜ್ಜನ ಹೋಲುವ ವೇಷಭೂಷಣ ಧರಿಸಿ ಮದುಮಗ ಬಾತಿಷ್ ಮತ್ತು ಅವನ ಸ್ನೇಹಿತರು ಡಾನ್ಸ್ ಮಾಡಿದ್ದರು. ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದಲ್ಲಿ ನಡೆದಿದ್ದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಮುಸ್ಲಿಂ ಯುವಕರ ವರ್ತನೆಗೆ ಹಿಂದೂ ಹಾಗೂ ಮುಸ್ಲಿಂ ಎರಡೂ ಸಮುದಾಯದವರು ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರತಿಭಟನೆಗಳೂ ನಡೆದಿದ್ದವು. ವರ ಹಾಗೂ ಆತನ ಸ್ನೇಹಿತರ ವಿರುದ್ಧ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅತ್ತ ಕೊರಗಜ್ಜನಿಗೆ ಅವಮಾನ ಪ್ರಕರಣದಲ್ಲಿ ಬಂಧನಕ್ಕೊಳಪಟ್ಟ ಆರೋಪಿಗಳ ಬಿಡುಗಡೆಗೆ ಒತ್ತಡ ಹಾಕಿದ ಆರೋಪದಲ್ಲಿ ಬಿಜೆಪಿ ಯುವ ನಾಯಕ ಮಹಮ್ಮದ್ ಅಸ್ಗರ್ ಎಂಬಾತನನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ.
ಪಜೀರು ಗ್ರಾಮದ ಸಾಂಬಾರ್ ತೋಟ ಬೂತ್ ಅಧ್ಯಕ್ಷ ಮಹಮ್ಮದ್ ಅಸ್ಗರ್ ಅಮಾನತು ಆದವ. ಪಕ್ಷದ ಶಿಸ್ತು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ದಕ್ಷಿಣಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಅವರು ಅಮಾನತು ಆದೇಶ ಹೊರಡಿಸಿದ್ದಾರೆ.