

ನವದೆಹಲಿ: ಆಂಧ್ರ ಪ್ರದೇಶಕ್ಕೆ ಅಮರಾವತಿ ರಾಜಧಾನಿ ಎಂದು ಘೋಷಣೆಯಾಗಿದ್ದರೂ ಅಲ್ಲಿ ಸರ್ಕಾರ ನಡೆಸಲು ಕಟ್ಟಡವಿಲ್ಲ. ಆದರೆ ವರ್ಷಗಳ ಕಾಲ ಆಳಿದ ಜಗನ್ ರೆಡ್ಡಿ ನೇತೃತ್ವದ ಸರ್ಕಾರ 500ಕೋಟಿ ರೂ.ವೆಚ್ಚದಲ್ಲಿ ಬೀಚ್ನಲ್ಲಿ ಐಷಾರಾಮಿ ಕಟ್ಟಡ ನಿರ್ಮಿಸಿ ಹಣಪೋಲು ಮಾಡಿತ್ತು. ಇದೀಗ ಚಂದ್ರಬಾಬು ನೇತೃತ್ವದ ಸರ್ಕಾರಕ್ಕೆ ಟೀಕಿಸಲು ಬ್ರಹ್ಮಾಸ್ತ್ರ ರೂಪದಲ್ಲಿ ಸಿಕ್ಕಿದೆ.
ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ವೈಎಸ್‌ಆರ್‌ಸಿಪಿ ಸರ್ಕಾರವು ವಿಶಾಖಪಟ್ಟಣದಲ್ಲಿ ಋಷಿಕೊಂಡ ಬೆಟ್ಟ ಕೊರೆದು ಐಷಾರಾಮಿ ಅರಮನೆಯನ್ನು ಬರೋಬ್ಬರಿ 500ಕೋಟಿ ರೂ. ಖರ್ಚಿನಲ್ಲಿ ನಿರ್ಮಿಸಿದ್ದು, ಸಾರ್ವಜನಿಕ ಹಣವನ್ನು ಪೋಲು ಮಾಡಿದೆ ಎಂದು ಟಿಡಿಪಿ ಆರೋಪಿಸಿದೆ.
ಋಷಿಕೊಂಡ ಬೆಟ್ಟದಲ್ಲಿ ನಿರ್ಮಿಸಿರುವ ಭವ್ಯ ಅರಮನೆಯನ್ನು ಮಾಜಿ ಮುಖ್ಯಮಂತ್ರಿ ಜಗನ್ ರೆಡ್ಡಿ, ವೈಎಸ್ಆರ್ಪಿ ಕ್ಯಾಂಪ್ ಆಫೀಸ್‌ಗಾಗಿ ಬಳಸಿಕೊಂಡಿತ್ತು. ಜಗನ್ ಯಾರ ಅನುಮತಿಯೊಂದಿಗೆ 500 ಕೋಟಿ ಜನರ ಹಣದಿಂದ ಈ ಅರಮನೆಯನ್ನು ನಿರ್ಮಿಸಿದ್ದಾರೆ? ಈ ಬಗ್ಗೆ ಆಳವಾದ ತನಿಖೆಯಾಗಬೇಕು ಎಂದು ಆಂಧ್ರ ಜನ ಪ್ರಶ್ನಿಸುತ್ತಿದ್ದಾರೆ ಎಂದು ಟಿಡಿಪಿ ಎಕ್ಸ್ ಖಾತೆಯಲ್ಲಿ ಟೀಕಿಸಿದೆ.
ಜಗನ್ ರನ್ನು ಸೋಲಿಸಿ ರಾಜ್ಯಕ್ಕೆ ಜನರು ಎಷ್ಟು ಒಳ್ಳೆಯದನ್ನು ಮಾಡಿದ್ದಾರೆಂದು ತಿಳಿಯಲು ಋಷಿಕೊಂಡ ಅರಮನೆ ಸಾಕ್ಷಿಯೊಂದೇ ಸಾಕು. ವಿಶಾಖದ ಗುಡ್ಡವನ್ನು ಆಕ್ರಮಿಸಿ 500 ಕೋಟಿ ರೂಪಾಯಿ ಸಾರ್ವಜನಿಕ ಹಣದಿಂದ ಅರಮನೆಯನ್ನು ಕಟ್ಟಲು ಅವರು ಎಷ್ಟು ಶ್ರಮಿಸಿದರು ನೋಡಿ ಎಂದು ಟಿಡಿಪಿ ವ್ಯಂಗ್ಯವಾಡಿದೆ.
ಈಶಾನ್ಯದಲ್ಲಿ ಬೀಚ್ ಮತ್ತು ಸಮುದ್ರದ ನೋಟ ವೀಕ್ಷಿಸಲು ಜಗನ್ ಈ ಅರಮನೆಯನ್ನು ಹಣ ದುಂದುವೆಚ್ಚಮಾಡಿ ನಿರ್ಮಿಸಿದ್ದಾರೆ. ಬೀಚ್ ವ್ಯೂ ಪ್ಯಾಲೇಸ್ ಖರೀದಿಸಲು ಆತನ ಪತ್ನಿ ಕೇಳಿದಾಗ, ಆತ ಎಲ್ಲಾ ನಿಯಮಗಳನ್ನು ಮುರಿದು, ನೂರಾರು ಕೋಟಿ ಸಾರ್ವಜನಿಕ ಹಣವನ್ನು ವ್ಯರ್ಥ ಮಾಡಿ ಇಂತಹ ಅರಮನೆ ಕಟ್ಟಿಸಿದ್ದಾರೆ. ಇದರಲ್ಲಿನ ಬಾತ್‌ಟಬ್‌ಗೆ 26 ಲಕ್ಷ ರೂ ವೆಚ್ಚ ಮಾಡಿದ್ದು ಇದರ ಉದ್ದೇಶ ಸ್ಪಷ್ಟವಾಗಿದೆ ಎಂದು ಟಿಡಿಪಿ ಕಿಡಿಕಾರಿದೆ.
ಋಷಿಕೊಂಡ ಅರಮನೆಯಲ್ಲಿ ಬಳಸಲಾದ ಇಟಾಲಿಯನ್ ಮಾರ್ಬಲ್ ಮತ್ತು ಟೈಲ್ಸ್ ನ ಪ್ರತಿ ಅಡಿ ವೆಚ್ಚದಲ್ಲಿ ಮಧ್ಯಮ ವರ್ಗದ ವ್ಯಕ್ತಿ ಸಣ್ಣ ಗಾತ್ರದ ಅಪಾರ್ಟ್ಮೆಂಟ್ ಅನ್ನು ಖರೀದಿಸಬಹುದು. ಇದು ಜಗನ್ ರೆಡ್ಡಿ ನಿರ್ಮಿಸಿದ ಬೀಚ್ ವ್ಯೂ ಪ್ಯಾಲೇಸ್ ನ ಕರ್ಮಕಾಂಡವಾಗಿದೆ. ಇವು ಮಹಾರಾಜರು ಅರಮನೆಗಳಿಗೆ ಬಳಸುವ ಸಾಮಗ್ರಿಗಳು ಎಂದು ಟಿಡಿಪಿ ಮತ್ತೊಂದು ಟ್ವೀಟ್‌ನಲ್ಲಿ ಚಿತ್ರಗಳನ್ನು ಹಂಚಿಕೊಂಡಿದೆ.
ರಾಜ್ಯದ ಜನರಿಗೆ ಟಿಡಿಪಿ ತಪ್ಪು ಸಂದೇಶ ನೀಡುತ್ತಿದೆ ಎಂದು ವೈಎಸ್‌ಆರ್‌ಸಿಪಿ ಮುಖಂಡ ಹಾಗೂ ಮಾಜಿ ಸಚಿವ ಗುಡಿವಾಡ ಅಮರನಾಥ ಹೇಳಿದರು. ಇದು ಸರ್ಕಾರಿ ಕಟ್ಟಡವಾಗಿದೆ. ಅಲ್ಲಿನ ಕಟ್ಟಗಳು ಯಾವುವೂ ಖಾಸಗಿ ಆಸ್ತಿಯಲ್ಲ, ಆಂಧ್ರದ ರಾಜಧಾನಿಯಾಗಿರುವ ವಿಶಾಖಪಟ್ಟಣಕ್ಕೆ ನೀಡಬೇಕಿದ್ದ ಆದ್ಯತೆಯನ್ನು ಗಮನದಲ್ಲಿಟ್ಟುಕೊಂಡು ಈ ಕಟ್ಟಡಗಳನ್ನು ನಿರ್ಮಿಸಲಾಗಿದೆ, ಅವುಗಳನ್ನು ಹೇಗೆ ಬಳಸಬೇಕು ಎಂಬುದು ಸರ್ಕಾರಕ್ಕೆ ಬಿಟ್ಟದ್ದು ಎಂದು ಅವರು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಟಿಡಿಪಿ, ಸರ್ಕಾರಿ ಕಟ್ಟಡಗಳಾಗಿದ್ದರೆ ಅವುಗಳನ್ನು ಸಾರ್ವಜನಿಕರಿಂದ ಏಕೆ ಮರೆಮಾಚಲಾಗಿತ್ತು ಎಂದು ಕೇಳಿದೆ. ‘‘ರಾಷ್ಟ್ರಪತಿ, ಪ್ರಧಾನಿಯಂತಹ ಗಣ್ಯರು ಉಳಿದುಕೊಳ್ಳಲು ಕಟ್ಟಿದ ಭವನಗಳಾದರೆ ಇತ್ತೀಚೆಗೆ ಮುಳ್ಳುಬೇಲಿ ಹಾಕಿದ್ದೇಕೆ?, ಸಾರ್ವಜನಿಕರನ್ನು ದೂರವಿಟ್ಟಿದ್ದೇಕೆ? ನ್ಯಾಯಾಲಯವನ್ನೇಕೆ ಮರೆಮಾಚಿದ್ದೀರಿ? ಪ್ರವಾಸೋದ್ಯಮ ಕಟ್ಟಡಗಳು ಎಂದು ಏಕೆ ಹೇಳುತ್ತಿದ್ದೀರಿ? ರಾಷ್ಟ್ರಪತಿ, ಪ್ರಧಾನಿಗೆ ಕಟ್ಟಡ ನಿರ್ಮಿಸಿದ್ದರೆ ಜಗನ್ ರೆಡ್ಡಿ ಪತ್ನಿಯ ಸಂಬಂಧಿಕರು ಅಲ್ಲಿಗೆ ಹೋಗಿ ಪ್ರಾರ್ಥನೆ ಸಲ್ಲಿಸಿದ್ದು ಏಕೆ? ಎಂದು ಪ್ರಶ್ನಿಸಿದೆ.