

ಮಡಿಕೇರಿ: ನಿರಂತರ ಆಟೋಟಗಳಲ್ಲಿ ಪಾಲ್ಗೊಳ್ಳುವುದರಿಂದ ದೇಹದ ಪ್ರತೀ ಅಂಗಾಂಗಕ್ಕೂ ಸ್ವಾಸ್ಥ್ಯ ಲಭಿಸಿ ಆರೋಗ್ಯಯುತ ಬುದುಕು ಪಡೆಯಲು ಸಾಧ್ಯವಾಗುತ್ತದೆ ಎಂದು ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಪಟು ತಾತಪಂಡ ಜ್ಯೋತಿ ಸೋಮಯ್ಯ ಅಭಿಪ್ರಾಯಿಸಿದರು.
ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವದ ಅಂಗವಾಗಿ, ಬೆಳ್ಳಿಮಹೋತ್ಸವ ಆಚರಣಾ ಸಮಿತಿ, ಬೆಳ್ಳಿ ಮಹೋತ್ಸವ ಕ್ರೀಡಾ ಸಮಿತಿ ಹಾಗೂ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಪತ್ರಕರ್ತರ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಆಟದ ವೇಳೆ ಆಗುವ ಗಾಯಗಳನ್ನು ಕಡೆಗಣಿಸಿ, ಎಚ್ಚೆತ್ತುಕೊಂಡರೆ ಮತ್ತೆ ಸಾಧನೆಯೆಡೆಗೆ ಸಾಗಬಹುದು ಎಂಬ ತಮ್ಮ ಅನುಭವವನ್ನು ಹಂಚಿಕೊಂಡ ಅವರು, ಯಾವುದೇ ಆಟೋಟಗಳಲ್ಲಿ ಪಾಲ್ಗೊಳ್ಳುವ ಮುನ್ನ ಪೂರ್ವ ತಯಾರಿಯ ತಾಲೀಮು ಅತ್ಯಗತ್ಯ. ಸುದ್ದಿಯ ಜಂಜಾಟದಲ್ಲಿರುವ ಪತ್ರಕರ್ತರು ಕ್ರೀಡೆಗೂ ಆಸಕ್ತಿ ತೋರುತ್ತಿರುವುದು ಉತ್ತಮ ಬೆಳವಣಿಗೆ. ವಯಸ್ಸಿನ ಮಿತಿಯಿಲ್ಲದೆ ಎಲ್ಲರೂ ವ್ಯಾಯಾಮವನ್ನು ರೂಢಿಸಿಕೊಳ್ಳ ಬೇಕೆಂದು ಜ್ಯೋತಿ ಸೋಮಯ್ಯ ಕಿವಿಮಾತು ಹೇಳಿದರು.
ಬೆಳ್ಳಿಮಹೋತ್ಸವ ಆಚರಣಾ ಸಮಿತಿ ಮಹಾಪೋಷಕರೂ, ಶಕ್ತಿ ಪ್ರಧಾನ ಸಂಪಾದಕರಾದ ಜಿ.ರಾಜೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ, ಇಂತಹ ಸ್ಪರ್ಧೆಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯಬೇಕೆಂದರಲ್ಲದೆ, ಪ್ರತೀ ದಿನ ಪತ್ರಕರ್ತರು ಅಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಒಳಾಂಗಣ ಶಟಲ್ ಬ್ಯಾಡ್ಮಿಂಟನ್ ಆಟ ಶಾರೀರಿಕವಾಗಿ ಪುಷ್ಠಿ ನೀಡುವ ಉತ್ತಮ ವ್ಯಾಯಾಮ. ಇಂತಹ ಕ್ರೀಡೆಗಳಿಂದ ಮಾನಸಿಕ ಸದೃಢತೆಯೊಂದಿಗೆ, ಎಲ್ಲರೂ ಸಮಾಗಮವಾಗುವ ಅವಕಾಶ ಸಿಗುತ್ತದೆ. ಜಂಜಾಟದ ಕೆಲಸದಲ್ಲಿ ಮಗ್ನರಾಗಿರುವ ಎಲ್ಲರೂ, ಆಗಿಂದಾಗ್ಗೆ ಎದ್ದು ನಡೆಯುವುದು, ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳುವುದು ಒಳಿತು ಎಂದರು.
ಸಮಾಜ ಸೇವಕ ಟಿ.ಆರ್.ವಾಸುದೇವ್ ಮಾತನಾಡಿ, ಪತ್ರಕರ್ತರು ಸಮಾಜದ ತಪ್ಪುಗಳನ್ನು ತಿದ್ದಿ ನ್ಯಾಯ ಒದಗಿಸುವ ನ್ಯಾಯಾಧೀಶರಿದ್ದಂತೆ. ಕೊಡಗಿನ ಪತ್ರಕರ್ತರು ಇತರರಿಗಿಂತ ಭಿನ್ನವಾಗಿದ್ದು, ಆಮಿಷಗಳಿಂದ ದೂರ ಉಳಿದಿದ್ದಾರೆ. ಕೊಡಗಿನ ಪತ್ರಕರ್ತರು ವಿನಯ ಶಾಲಿಗಳು ಎಂದು ಹೇಳಿದರು.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷೆ ಬಿ.ಆರ್.ಸವಿತಾ ರೈ ಮಾತನಾಡಿ, ಪತ್ರಕರ್ತರ ಕೆಲಸದಲ್ಲಿನ ಜಂಜಾಟ ಮತ್ತು ಒತ್ತಡವನ್ನು ಇಂತಹ ಕ್ರೀಡಾಕೂಟಗಳು ಮರೆಸುತ್ತವೆ. ಕ್ರೀಡಾ ಪಂದ್ಯಗಳಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ಸುಧಾರಣೆ ಸಾಧ್ಯ ಎಂದು ಹೇಳಿದರು.
ಸಭಾಧ್ಯಕ್ಷತೆ ವಹಿಸಿದ್ದ ಕೊಡಗು ಪ್ರೆಸ್ ಕ್ಲಬ್ ಉಪಾಧ್ಯಕ್ಷ ಆರ್.ಸುಬ್ರಮಣಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಶಟಲ್ ಬ್ಯಾಡ್ಮಿಂಟನ್ ಆಟಗಾರ್ತಿ ತಾತಪಂಡ ಜ್ಯೋತಿ ಸೋಮಯ್ಯ ಅವರನ್ನು ಕೊಡಗು ಪ್ರೆಸ್ ಕ್ಲಬ್ ಸನ್ಮಾನಿಸಿ ಗೌರವಿಸಿತು.
ಗಣ್ಯರು ವಿಜೇತರಿಗೆ ಬಹುಮಾನ ವಿತರಿಸಿದರು. ವೇದಿಕೆಯಲ್ಲಿ ಬೆಳ್ಳಿಮಹೋತ್ಸವ ಕ್ರೀಡಾ ಸಮಿತಿ ಸಂಚಾಲಕ ಸಂತೋಷ್ ರೈ, ಬೊಳ್ಳಜಿರ ಬಿ.ಅಯ್ಯಪ್ಪ ಇತರರು ಉಪಸ್ಥಿತರಿದ್ದರು.