ರಾಜ್ಯದಲ್ಲಿರೋದು ಚಂಬಲ್​ ಕಣಿವೆ ಡಕಾಯಿತರ ಆಡಳಿತ, ಖಜಾನೆ ಲೂಟಿ ಆಗ್ತಿದೆ: ಎಚ್​ಡಿಕೆ ಆಕ್ರೋಶ

hdk
Published on

ಕೋಲಾರ: ರಾಜ್ಯದ ಖಜಾನೆಯಲ್ಲಿ ಭಾಗ್ಯಲಕ್ಷ್ಮೀ ತುಂಬಿ ತುಳುಕುತ್ತಿದ್ದರೂ, ಚಂಬಲ್​ ಕಣಿವೆ ಡಕಾಯಿತರು ಆಡಳಿತ ನಡೆಸುತ್ತಿರುವುದರಿಂದ ಜನರು ಇನ್ನಿಲ್ಲದ ತೊಂದರೆ ಅನುಭವಿಸುತ್ತಿದ್ದಾರೆ. ಸಂಪತ್ತನ್ನು ಚಂಬಲ್​ ಕಣಿವೆ ಡಕಾಯಿತರ ಕೊಳ್ಳೆ ಹೊಡೆಯುತ್ತಿದ್ದಾರೆ. ಇದನ್ನು ತಡೆಯಲು ಯಾವ ಪ್ರಯತ್ನವೂ ನಡೆಯುತ್ತಿಲ್ಲ. ಸರ್ಕಾರ ಅತ್ತಂತೆ ನಟಿಸಿದರೆ, ವಿರೋಧ ಪಕ್ಷ ಹೊಡೆದಂತೆ ನಟನೆ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಟೀಕಿಸಿದರು.

ನಗರದ ಜೂನಿಯರ್​ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಮಾತನಾಡಿದ ಎಚ್​ಡಿಕೆ, ಅಭಿವೃದ್ಧಿಗೆ ಹಣದ ಕೊರತೆಯಿಲ್ಲ. ಆದರೆ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವ ಬಿಜೆಪಿಯವರಲ್ಲಿಲ್ಲ. ಬಡವರ ರಕ್ತ ಹೀರುವ ಮೂಲಕ ಸರ್ಕಾರ ಬದುಕಿದೆ. ಶೇ.40 ಕಮಿಷನ್​ ಪಡೆಯುತ್ತಿರುವುದಲ್ಲದೆ, ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸರ್ಕಾರ ದುರಾಡಳಿತ ವಿರುದ್ಧ ಗಟ್ಟಿ ಧ್ವನಿ ಮಾಡಬೇಕಾದ ಕಾಂಗ್ರೆಸ್​ ಆಡಳಿತಗಾರರೊಂದಿಗೆ ರಾಜಿ ಮಾಡಿಕೊಂಡಂತೆ ಕಾಣುತ್ತಿದೆ. ಲೂಟಿ ತಡೆಗೆ ಯಾವ ಪ್ರಯತ್ನವನ್ನೂ ಮಾಡುತ್ತಿಲ್ಲ. ಸರ್ಕಾರ ಅತ್ತಂತೆ ನಟಿಸಿದರೆ, ವಿರೋಧ ಪಕ್ಷ ಹೊಡೆದಂತೆ ನಟನೆ ಮಾಡುತ್ತಿದೆ ಎಂದರು.

ರಾಜ್ಯದಲ್ಲಿ ಉತ್ತಮ ದಿನಗಳನ್ನು ಕಾಣಬೇಕಾದರೆ 6.5 ಕೋಟಿ ಜನ ಮನಸ್ಸು ಮಾಡಿ ಜಾತ್ಯತೀತ ಜನತಾದಳವನ್ನು ಅಧಿಕಾರಕ್ಕೆ ತರಬೇಕಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net