ಹುಷಾರ್​ ನಾನಿನ್ನೂ ಬದುಕಿದ್ದೇನೆ, ಇನ್ನೆರಡು ತಿಂಗಳು ಕಾಯು... ಕೆ.ಎನ್​.ರಾಜಣ್ಣಗೆ ಎಚ್​ಡಿಕೆ ಹಿಗ್ಗಾಮುಗ್ಗಾ ತರಾಟೆ

kn rajanna hdk hdd
Published on

ಬೆಂಗಳೂರು: ತುಮಕೂರಿನ ಮಹಾನ್ ನಾಯಕರು ದೇವೆಗೌಡರ ಬಗ್ಗೆ ಅನಾಗರೀಕವಾಗಿ, ವಿಕೃತ ಮನಸ್ಸಿನಿಂದ ವ್ಯಕ್ತಪಡಿಸಿದ ಅಭಿಪ್ರಾಯ ಅವರ ಸಂಸ್ಕೃತಿ ತೋರಿಸುತ್ತೆ. ಅದು 2004ರ ಚುನಾವಣೆ ಕೊನೆಯ ದಿನದ ಪ್ರಚಾರ. ಬೆಳ್ಳಾವಿಯ ದೊಡ್ಡೇರಿ ಬಳಿ ದೇವೇಗೌಡರು ಹೋಗಿ ಪ್ರಚಾರ ಮಾಡಿದಕ್ಕೆ ಆ ವ್ಯಕ್ತಿ ಗೆದಿದ್ದು. ದೇವೇಗೌಡರಿಗೆ 104 ಡಿಗ್ರಿ ಜ್ವರ ಇದ್ದರೂ ಅಂದು ಬಂದು ಹೋಗಿ ಪ್ರಚಾರ ಮಾಡಿದ್ರು... ಇದೇ ವ್ಯಕ್ತಿ ದೇವೇಗೌಡರ ಬಗ್ಗೆ ದುರಂಹಂಕಾರದಿಂದ ಮಾತಾಡ್ತಾರೆ ಎಂದು ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.

ಮಧುಗಿರಿ ತಾಲೂಕಿನ ಕಾವಣದಾಲದಲ್ಲಿ ಗುರುವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮಾಜಿ ಶಾಸಕ ಕೆ.ಎನ್​.ರಾಜಣ್ಣ, ‘ದೇವೇಗೌಡರು ಇಬ್ಬರ ಮೇಲೆ ಹಾಕ್ಕೊಂಡು ಹೋಗ್ತಾವ್ರೇ..(ಭುಜದ ಮೇಲೆ ಕೈ ಹಾಕೋ ರೀತಿ ತೋರಿಸಿ ಹೇಳಿದ ಮಾತು) ಹತ್ತಿರದಲ್ಲೇ ಇದೇ ನಾಲ್ಕರ ಮೇಲೆ ಹೋಗೋದು…' ಎನ್ನುತ್ತಾ ನಾಲಗೆ ಹರಿಯಬಿಟ್ಟಿದ್ದರು. ಈ ಕುರಿತು ಶುಕ್ರವಾರ ಖಾರವಾಗಿಯೇ ಪ್ರತಿಕ್ರಿಯಿಸಿದ ಎಚ್​ಡಿಕೆ, 'ದೇವರಿಗೂ ಹೆಗಲು ಕೊಡ್ತಾರೆ. ನಾನು ಯಾವುದಾದ್ರು ಸಾವಿಗೆ ಹೋದಾಗ ಕಣ್ಣೀರು ಹಾಕಿದ್ದೇನೆ. ದೇವೇಗೌಡರಿಗೆ ನಾಲ್ಕು ಹೆಗಲು ಕೊಡ್ತಾರೆ ಎಂದು ಹೇಳ್ತಾರೆ. ನೀನೇನು ಬ್ರಹ್ಮ ಅಲ್ಲಪ್ಪ, ಆ ದೇವರು ನಮ್ಮ ತಂದೆಗೆ 100 ವರ್ಷ ಆಯುಸ್ಸು ಕೊಡ್ತಾರೆ. ದೇವೆಗೌಡರಿಗೆ ಇಬ್ಬರು ಹೆಗಲು ಕೊಡುವಂತೆ ಮಾಡಿದ್ದು ಕಾಂಗ್ರೆಸ್‌ನವರು. ತುಮಕೂರಿನಲ್ಲಿ ಅವರನ್ನ ಸೋಲಿಸಿದ್ದು ನೀನೇ ಅಲ್ವೇನಪ್ಪಾ? ಜಾತ್ಯತೀತ ಭಾವನೆಯಿಂದ ನಿಮ್ಮ ಜತೆ ಬಂದಿದ್ದಕ್ಕೆ ಇಬ್ಬರು ಹೆಗಲು ಕೊಡುವಂತಹ ಪರಿಸ್ಥಿತಿ ಬಂದಿರೋದು. ಇನ್ನೆರಡು ತಿಂಗಳು ಕಾಯಪ್ಪ, ಅವರೇ ಎದ್ದು ನಿಲ್ತಾರೆ. ಇನ್ನು ಅವರ ಮಗ ನಾನು ಇದ್ದೇನೆ ಎಂದು ಎಚ್ಚರಿಸಿದ್ದಾರೆ.

'ಹುಷಾರ್, ಅವರ ಮಗ ನಾನಿನ್ನೂ ಬದುಕಿದ್ದೇನೆ. ಮಧುಗಿರಿಯಲ್ಲಿ ಬಂದು ತೋರಿಸುತ್ತೇನೆ. ಮಧುಗಿರಿಯ ಜನರಿಂದ ನಿನಗೆ ಉತ್ತರ ಕೊಡಿಸುತ್ತೇನೆ. ಭಗವಂತ ಮೇಲಿಂದ ನೋಡುತ್ತಿರುತ್ತಾರೆ. ಅದರ ಪ್ರಾಯಶ್ಚಿತ್ತ ಅನುಭವಿಸಬೇಕಾಗುತ್ತೆ' ಎಂದು ಕೆ.ಎನ್​.ರಾಜಣ್ಣಗೆ ಕುಮಾರಸ್ವಾಮಿ ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net