ನೊಂದವರ ಬದುಕಿಗೆ ದಾರಿ ದೀಪ

blm
Published on

ಕಾರ್ಕಳ: ಸಮಾಜದಲ್ಲಿ ಬಡವರ, ಆಸಕ್ತರ ಕಣ್ಣೀರು ಒರೆಸುವ ಕಾರ್ಯದಲ್ಲಿ ನಾವು ತೊಡಗಿಕೊಳ್ಳಬೇಕಾಗಿದೆ. ನೊಂದವರ ಬದುಕಿಗೊಂದು ದಾರಿ ದೀಪವಾಗಬೇಕು. ಸಂಘ-ಸಂಸ್ಥೆ ಸಮಾಜದ ಏಳಿಗೆಗೆ ಸದಾ ಸಮಾಜಮುಖಿ ಚಿಂತನೆಯಲ್ಲಿ ಕಾರ್ಯ ನಿರ್ವಹಿಸಿದಾಗ ಅದೆಷ್ಟೋ ಮಂದಿಯ ಕಷ್ಟ ದೂರವಾಗಿ ಸುಖದ ದಿನ ಕಾಣಲು ಸಾಧ್ಯ ಎಂದು ಜೆಸಿಐ ಬೆಳ್ಮಣ್ ಘಟಕಾಧ್ಯಕ್ಷ ಪ್ರದೀಪ್ ಶೆಟ್ಟಿ ಇನ್ನಾ ಹೇಳಿದರು.

ನಂದಳಿಕೆ ಇಂಚರ ಸೇವಾ ಬಳಗದ 3ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮಾಚರಣೆ ಪ್ರಯುಕ್ತ ಕಾರ್ಕಳ ಕುಕ್ಕುಂದೂರು ಅಯ್ಯಪ್ಪ ನಗರದ ವಿಜೇತ ವಿಶೇಷ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಬೋಳ ಗ್ರಾಪಂ ಮಾಜಿ ಅಧ್ಯಕ್ಷ ಬೋಳ ಸತೀಶ್ ಪೂಜಾರಿ ಮಾತನಾಡಿ, ಸಮಾಜಸೇವೆಯಲ್ಲಿ ತೊಡಗಿಕೊಂಡಿರುವ ಇಂಚರ ಸೇವಾ ಬಳಗ ಈಗಾಗಲೇ ಅವಿಭಜಿತ ದ.ಕ., ಉಡುಪಿ ಜಿಲ್ಲೆಯ ಬಡವರ ಹಾಗೂ ನೊಂದವರ ಬಾಳಿಗೆ ಬೆಳಕಾಗುವ ಕಾರ್ಯ ಮಾಡಿದೆ. ಇಂತಹ ಸೇವೆ ನಿರಂತರವಾಗಿ ಮುಂದುವರಿಯಲಿ ಎಂದರು.

ಸೇವಾ ಬಳಗದ ವತಿಯಿಂದ ರಘು ಪೂಜಾರಿ, ಶಂಭು ಎಂಬುವರಿಗೆ ಆರ್ಥಿಕ ಸಹಾಯ ನೀಡಲಾಯಿತು. ನಂದಳಿಕೆ ಇಂಚರ ಸೇವಾ ಬಳಗ ಸಂಸ್ಥಾಪಕ ದೀಕ್ಷಿತ್ ದೇವಾಡಿಗ, ಶೈಲೇಶ್ ಕೋಟ್ಯಾನ್, ಅಧ್ಯಕ್ಷ ಸಂತೋಷ್ ಪೂಜಾರಿ, ಕಾರ್ಯದರ್ಶಿ ರವೀಂದ್ರ ಕುಲಾಲ್, ವಕೀಲೆ ಸರಿತಾ ರವೀಂದ್ರ ಶೆಟ್ಟಿ, ಇಂಚರ ಸೇವಾ ಬಳಗದ ಪದಾಧಿಕಾರಿಗಳು ಉಪಸ್ಥಿತರಿದ್ದರು. ವಿಶೇಷ ಶಿಕ್ಷಕಿ ಹರ್ಷಿತಾ ಕಿರಣ್ ನಿರೂಪಿಸಿದರು. ವಿಜೇತ ವಿಶೇಷ ಶಾಲಾ ಸಂಸ್ಥಾಪಕಿ ಡಾ.ಕಾಂತಿ ಹರೀಶ್ ಸ್ವಾಗತಿಸಿದರು. ವಿಶೇಷ ಶಿಕ್ಷಕಿ ಶ್ವೇತಾ ವಂದಿಸಿದರು. ಸಮಾರಂಭದ ಬಳಿಕ ವಿಜೇತ ವಿಶೇಷ ಶಾಲಾ ಮಕ್ಕಳಿಗೆ ಭೋಜನ ವ್ಯವಸ್ಥೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net