ನನ್ನನ್ನು JDS​ ವರಿಷ್ಠರು ಸಂಪರ್ಕಿಸಿಲ್ಲ.. ರಾಜ್ಯಸಭೆ ಎಲೆಕ್ಷನ್​ನಲ್ಲಿ ಖಂಡಿತ BJP ಗೆಲ್ಲುತ್ತೆ: ಗುಬ್ಬಿ ಶಾಸಕ ಶ್ರೀನಿವಾಸ್​

gubbi srinivas hdk
Published on

ತುಮಕೂರು: ರಾಜ್ಯಸಭಾ ಚುನಾವಣೆ ಅಖಾಡ ಕ್ಷಣಕ್ಷಣಕ್ಕೂ ಕುತೂಹಲ ಹೆಚ್ಚಿಸುತ್ತಲೇ ಇದೆ. 4ನೇ ಸ್ಥಾನಕ್ಕೆ ಮೂರು ಪಕ್ಷದವರ ಬಳಿಯೂ ಬಹುಮತ ಇಲ್ಲ. ಹಾಗಾಗಿ ಶತಾಯಗತಾಯ ಗೆಲ್ಲಲೇಬೇಕೆಂದು ಬಿಜೆಪಿ, ಜೆಡಿಎಸ್​, ಕಾಂಗ್ರೆಸ್​ ಪಣತೊಟ್ಟಿದ್ದು, ಬೇರೆಬೇರೆ ಪಕ್ಷಗಳ ಶಾಸಕರ ಬೆಂಬಲ ಕೇಳಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ತಮ್ಮ ಪಕ್ಷದ ಶಾಸಕರ ಮೇಲೆ ಬೇರೆ ಪಕ್ಷದ ಗಾಳ ಬೀಳದಂತೆ ಕಟ್ಟೆಚ್ಚರ ವಹಿಸುತ್ತಿದ್ದಾರೆ. ಆದರೆ ಗುಬ್ಬಿ ಕ್ಷೇತ್ರದ ಶಾಸಕ ಶ್ರೀನಿವಾಸ್​ ಕಥೆ ಏನು? ಎಂಬುದು ಮಾತ್ರ ಸ್ಪಷ್ವಾಗಿಲ್ಲ. ಈ ಕುರಿತು ಜೆಡಿಎಸ್​ ವರಿಷ್ಠರ ವಿರುದ್ಧ ವಾಸು ಬಹಿರಂಗ ಅಸಮಾಧಾನ ಹೊರಹಾಕಿದ್ದಾರೆ. ಇದುವರೆಗೂ ಜೆಡಿಎಸ್ ವರಿಷ್ಠರು ನನ್ನನ್ನು ಸಂಪರ್ಕಿಸಿಲ್ಲ, ಫೋನ್ ಮಾಡಿಯೂ ಇಲ್ಲ ಎಂದಿದ್ದಾರೆ.

ಇದುವರೆಗೆ ಯಾವೊಬ್ಬ ಜೆಡಿಎಸ್ ಮುಖಂಡರೂ ನನ್ನನ್ನು ಭೇಟಿಯಾಗಿಲ್ಲ. ಕೊನೇ ಪಕ್ಷ ಫೋನ್ ಮಾಡಿಯಾದರೂ ಪಕ್ಷದ ಅಭ್ಯರ್ಥಿಗೆ ಮತ ಹಾಕಿ ಅಂತಾನೂ ಕೇಳಿಲ್ಲ. ಅಭ್ಯರ್ಥಿ ಕುಂಪೇದ್ರರೆಡ್ಡಿ ಅವರು ನಾಲ್ಕು ದಿನಗಳ ಹಿಂದೆ ಮನೆಗೆ ಬಂದಿದ್ರು. ರಾಜ್ಯಸಭೆಗೆ ಸ್ಪರ್ಧೆ ಮಾಡ್ತಿದ್ದೀನಿ, ಮತ ಹಾಕಿ ಅಂದಿದ್ರು ಅಷ್ಟೆ. ನಾನು ಕೂಡ ಮತ ನೀಡ್ತೀನಿ ಅಂದಿದ್ದೆ. ಆದರೆ ಇದುವರೆಗೆ ನಮ್ಮ‌ ಪಕ್ಷದ ವರಿಷ್ಟರು ನನ್ನನ್ನು ಸಂಪರ್ಕ ಮಾಡಿಲ್ಲ ಎಂದು ಗುರುವಾರ ಬೆಳಗ್ಗೆ ಸುದ್ದಿಗಾರರಿಗೆ ವಿವರಿಸಿದರು.

ಇಂದು ಸಂಜೆ ಬೆಂಗಳೂರಿಗೆ ಹೋಗ್ತೀನಿ. ಏನೇನು ಬೆಳವಣಿಗೆ ಆಗುತ್ತೆ ನೋಡೋಣ. ನಾನು ಇದುವರೆಗೆ ಪಕ್ಷಕ್ಕೆ ಮತ ನೀಡ್ಬೇಕು ಅಂತ ಅಂದುಕೊಂಡಿರುವೆ. ಕೊನೇ ಕ್ಷಣದಲ್ಲಿ ಏನ್ ಆಗುತ್ತೆ ನೋಡ್ಬೇಕು. ನಮ್ಮ‌ ನಾಯಕರೇ ನಮ್ಮನ್ನ ನಿರ್ಲಕ್ಷ್ಯ ಮಾಡಿದ್ದಾರೆ. ನನ್ನ ಕ್ಷೇತ್ರದಲ್ಲಿ ಬೇರೆ ಅಭ್ಯರ್ಥಿಯನ್ನ ತಂದಿದ್ದಾರೆ. ನನ್ನ ಅವಶ್ಯಕತೆ ಜೆಡಿಎಸ್​ಗೆ ಇಲ್ಲ ಅನ್ಸುತ್ತೆ. ಅವರೇ ಪಕ್ಷದಿಂದ ನನ್ನನ್ನು ಹೊರ ಹಾಕಿದ್ದಾರೆ. ಹೀಗಾಗಿ ಅವರಿಗೆ ಮತ ಕೇಳೋಕೆ ಎಷ್ಟರ ಮಟ್ಟಿಗೆ ನೈತಿಕತೆ ಇದಿಯೋ ಇಲ್ಲ ಗೊತ್ತಿಲ್ಲ. ಈ ಬಗ್ಗೆ ಆತ್ಮ ವಿಮರ್ಶೆ ಮಾಡ್ಕೋಬೇಕು. ರಾಜ್ಯಸಭೆ ಚುನಾವಣೆಯ ಮತದಾನಕ್ಕೆ ಇನ್ನೊಂದು ದಿನ ಬಾಕಿ ಇದೆ. ನಾನು ಯಾವ ನಿರ್ಧಾರ ತಗೋತೀನಿ ಅಂತ ಗೊತ್ತಿಲ್ಲ ಎಂದರು.

ಕಾಂಗ್ರೆಸ್ ಪಕ್ಷದ ಯಾವ ಮುಖಂಡರೂ ಇದುವರೆಗೆ ನನ್ನ‌ನ್ನು ಸಂಪರ್ಕ ಮಾಡಿಲ್ಲ. ಆದ್ದರಿಂದ ಆತ್ಮಸಾಕ್ಷಿಗೆ ಅನುಗುಣವಾಗಿ ಏನ್ ಮಾಡ್ಬೇಕೋ ಅದನ್ನೇ ಮಾಡ್ತೀನಿ. ಖಂಡಿತ ಬಿಜೆಪಿ ಗೆಲುವು ಸಾಧಿಸುತ್ತೆ. ಅಂಕಿ ಸಂಖ್ಯೆಗಳ ಆಧಾರದ ಮೇಲೆ ಹೇಳೋದಾದ್ರೆ ಬಿಜೆಪಿಗೆ ಅವಕಾಶ ಇದೆ. ಎರಡು ರಾಷ್ಟ್ರೀಯ ಪಕ್ಷಗಳು ಮೊದಲೇ ‌ಮನಗಂಡು ಕೆಲವರನ್ನ ದೂರ ಇಡ್ತೀವಿ ಅನ್ನೋ ಧೋರಣೆಯನ್ನ ವ್ಯಕ್ತಪಡಿಸ್ತಾರೆ. ಇದರ ಬಗ್ಗೆ ಮಾತನಾಡಿ ನಿರ್ಧಾರ ತಗೋಬೇಕಿತ್ತು. ಈ ಬಗ್ಗೆ ನಮಗೂ ಅಸಮಾಧಾನ ಇದೆ. ಇದರ ಲಾಭ ಬಿಜೆಪಿ ಪಡೆಯುತ್ತೆ‌. ಯಾರಾದ್ರು ಸಂಪರ್ಕ ಮಾಡಿದ್ರೆ ಮತ ಹಾಕುತ್ತಿದ್ದೇನೋ ಗೊತ್ತಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net