ಸಂತ್ರಸ್ತರಿಗೆ ಹೆಗಲಾದ ಯುವಕರ ತಂಡ

blm (2)
Published on

ಹರಿಪ್ರಸಾದ್ ನಂದಳಿಕೆ ಕಾರ್ಕಳ

ಇತ್ತೀಚೆಗಷ್ಟೇ ಭಾರಿ ಬಿರುಗಾಳಿ ಸಹಿತ ಮಳೆಯಿಂದ ವ್ಯಾಪಕ ಹಾನಿಗೊಳಗಾದ ಬೆಳ್ಮಣ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಂತ್ರ ಪುನಾರು ಪ್ರದೇಶದ ಸುಮಾರು 35ಕ್ಕೂ ಅಧಿಕ ಮನೆಗಳ ದುರಸ್ತಿಗೆ ಜಂತ್ರ ಫ್ರೆಂಡ್ಸ್ ಕ್ಲಬ್ ಮುಂದಾಗಿದ್ದು, ಈ ಮೂಲಕ ಪ್ರಾಕೃತಿಕ ವಿಕೋಪಕ್ಕೆ ತುತ್ತಾದ ಕುಟುಂಬಗಳ ನೆರವಿಗೆ ಕ್ಲಬ್ ಹೆಗಲಾಗಿ ನಿಂತಿದೆ.

ಬಿರುಗಾಳಿಯ ಹೊಡೆತಕ್ಕೆ ಜಂತ್ರ ಪುನಾರು ಭಾಗದ ಹಲವು ಮನೆಗಳ ಹೆಂಚುಗಳೇ ಹಾರಿಹೋಗಿದ್ದು, ಹಲವು ಮನೆಗಳ ಸಿಮೆಮಟ್‌ಶೀಟ್‌ಗಳು ಹಾಗೂ ಗೋಡೆಗಳು ಪುಡಿಯಾಗಿದ್ದವು. ಇದರಿಂದ ಜಂತ್ರ ಪುನಾರು ಭಾಗದ ಸಂತ್ರಸ್ತರು ಸೂರು ಕಳೆದುಕೊಂಡಿದ್ದು, ಈ ಪೈಕಿ ಹಲವರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದರು. ಇದನ್ನು ಮನಗಂಡ ಫ್ರೆಂಡ್ಸ್ ಕ್ಲಬ್ ಸದಸ್ಯರು ಸ್ಥಳೀಯ ಯುವಕರ ತಂಡ ಕಟ್ಟಿ ಮನೆಗಳ ದುರಸ್ತಿಗೆ ಕೂಡಲೇ ಕಾರ್ಯಪ್ರವೃತ್ತರಾಗಿದ್ದಾರೆ.

ದಾನಿಗಳ ನೆರವು: ಸ್ಥಳೀಯ ದಾನಿಗಳು, ಸದಸ್ಯರು ಹಾಗೂ ಸಂಘಗಳ ನೆರವಿನಿಂದ ದುರಸ್ತಿಗೆ ಅವಶ್ಯಕತೆಯಿದ್ದ ಸಾಮಗ್ರಿಗಳನ್ನು ಪಡೆದ ಫ್ರೆಂಡ್ಸ್ ಕ್ಲಬ್ ಯುವಕರ ತಂಡ ಸತತ ಮೂರು ನಾಲ್ಕು ದಿನ ಶ್ರಮಿಸಿ ಹಾನಿಗೊಳಗಾದ ಮನೆಗಳನ್ನು ಸಂಪೂರ್ಣ ದುರಸ್ತಿ ಮಾಡಿದೆ. ಸ್ಥಳೀಯ ಜನರು, ಪ್ರಮುಖರು ಸಹಕರಿಸಿದ್ದಾರೆ.

ಸಾಮಾಜಿಕ ಕಾರ್ಯದಲ್ಲಿ ಮುಂದು: ಬೆಳ್ಮಣ್ ಜಂತ್ರ ಪರಿಸರದ ಸಮಾನ ಮನಸ್ಕ ಯುವಕರು ಜತೆಗೂಡಿ ಫ್ರೆಂಡ್ಸ್ ಕ್ಲಬ್ ಕಟ್ಟಿಕೊಂಡಿದ್ದು, ಸ್ವಚ್ಛತೆ, ಶ್ರಮದಾನ, ಪ್ರಾಕೃತಿಕ ವಿಕೋಪಗಳ ಸಂದರ್ಭ ನೆರವು ಸಹಿತ ಅಗತ್ಯ ಸಂದರ್ಭಗಳಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ಮುಂಚೂಣಿಯಲ್ಲಿರುತ್ತದೆ. ಕಳೆದ ಮೂರು ತಿಂಗಳಲ್ಲಿ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಯಿಂದ ಹಾನಿಗಳಾದ ಬೆಳ್ಮಣ್, ಜಂತ್ರ ಸಹಿತ ಹಲವು ಪ್ರದೇಶಗಳಲ್ಲಿ ಸತತವಾಗಿ ಫ್ರೆಂಡ್ಸ್ ಕ್ಲಬ್ ಸದಸ್ಯರು ಕಾರ್ಯನಿರ್ವಹಿಸಿ ತಾಲೂಕಿನ ಜನರ ಮೆಚ್ಚುಗೆ ಪಡೆದಿದ್ದಾರೆ.

ಆಕಸ್ಮಿಕವಾಗಿ ಬೀಸಿದ ಭಾರಿ ಬಿರುಗಾಳಿಯಿಂದ ಬೆಳ್ಮಣ್-ಜಂತ್ರ ಭಾಗದಲ್ಲಿ ಸಾಕಷ್ಟು ಮನೆಗಳಿಗೆ ಹಾನಿಯಾಗಿತ್ತು ಫ್ರೆಂಡ್ಸ್ ಕ್ಲಬ್ ಯುವಕರ ತಂಡ ಕೂಡಲೇ ಸ್ಪಂದಿಸಿ ಹಾನಿಗೊಳಗಾದ ಮನೆಗಳನ್ನು ದುರಸ್ತಿಗೊಳಿಸುವ ಕಾರ್ಯ ವಾಡಿರುವುದು ನಿಜಕ್ಕೂ ಶ್ಲಾನೀಯ. -ವಿಶ್ವನಾಥ್ ಪಾಟ್ಕರ್, ಗ್ರಾಮಸ್ಥರು. ಪ್ರತಿ ಬಾರಿಯೂ ಪ್ರಾಕೃತಿಕ ವಿಕೋಪಗಳಾದಾಗ ಮುಂದೆ ನಿಂತು ನೆರವು ನೀಡುವುದು ಫ್ರೆಂಡ್ಸ್ ಕ್ಲಬ್‌ನ ಹೆಗ್ಗಳಿಕೆ. ಈ ಕ್ಲಬ್ ನಿಜಕ್ಕೂ ಶ್ಲಾಘನೆಗೆ ಅರ್ಹವಾಗಿದೆ. ತಮ್ಮ ನಿತ್ಯ ಕಾರ್ಯ ಬದಿಗಿರಿಸಿ ಕ್ಲಬ್ ಸದಸ್ಯರು ಮೂರು ನಾಲ್ಕು ದಿನ ಶ್ರಮಿಸಿ ಅನೇಕ ಮನೆಗಳನ್ನು ದುರಸ್ತಿ ಮಾಡಿಕೊಟ್ಟಿರುವುದು ಪ್ರಶಂಸನೀಯ. -ರಂಜಿತ್, ಸ್ಥಳೀಯ ಬಿರುಗಾಳಿ ಸಹಿತ ಮಳೆಯಿಂದ ಮನೆಗಳಿಗೆ ಹಾನಿಯಾಗಿರುವ ಸುದ್ದಿ ಬೆಳಗ್ಗೆಯೇ ನಮ್ಮ ಗಮನಕ್ಕೆ ಬಂದಿದ್ದು, ಕೂಡಲೇ ಕಾರ್ಯಪ್ರವೃತ್ತರಾದ ನಮ್ಮ ತಂಡ ಹಲವು ಮನೆಗಳನ್ನು ಈಗಾಗಲೇ ದುರಸ್ತಿ ಮಾಡಿಕೊಟ್ಟಿದ್ದೇವೆ. ಸ್ಥಳೀಯರೂ ನಮಗೆ ಅತ್ಯುತ್ತಮವಾಗಿ ಸಹಕರಿಸಿದರು. -ಶೈಲೇಶ್, ಜಂತ್ರ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ. https://www.vijayavani.net/agricultural-achiever-honored-with-panchavarna https://www.vijayavani.net/religious-history-of-varunatirtha-lake

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net