

ಭೋಪಾಲ್: ಭಾರತೀಯ ಸಂಪ್ರದಾಯದಲ್ಲಿ ಒಂದು ಹೆಣ್ಣು ಹಾಗೂ ಒಂದು ಗಂಡು ಮದುವೆಯಾಗುವುದು ವಾಡಿಕೆ. ಆದರೆ ವಿಶೇಷ ಸಂದರ್ಭದಲ್ಲಿ ಇದು ಉಲ್ಟಾ ಆಗುತ್ತಿರುವುದನ್ನು ಕಾಣಬಹುದು. ಕೆಲ ಮದುವೆಗಳು ವಿಚಿತ್ರವೆನಿಸಿದರೂ ಭಾರೀ ಸುದ್ದಿಯಲ್ಲಿರುತ್ತವೆ. ಅಂತಹವುಗಳಲ್ಲಿ ಮಧ್ಯಪ್ರದೇಶದಲ್ಲಿ ನಡೆದಿರುವ ಮದುವೆ ಇದೀಗ ಭಾರೀ ಸುದ್ದಿಯಾಗಿದೆ.
ಇನ್ನು ಒಬ್ಬ ಪುರುಷ ಮೂವರು ಮಹಿಳೆಯರನ್ನು ಅದೂ ತಮ್ಮ ಮಕ್ಕಳ ಮುಂದೆಯೇ ಮದುವೆಯಾಗಿರುವ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.
ಹೌದು.. ಇದು ನಿಜವಾಗಿಯೂ ನಡೆದ ಘಟನೆಯಾಗಿದ್ದು, ಮಧ್ಯಪ್ರದೇಶದ ಬಹುಲ್ ಅಲಿರಾಜ್ಪುರ ಜಿಲ್ಲೆಯಲ್ಲಿ ಪುರುಷನೋರ್ವ ಮೂವರು ಮಹಿಳೆಯನ್ನು ಒಂದೇ ಮಂಟಪದಲ್ಲಿ ವರಿಸಿದ್ದಾನೆ. ಅದೂ ತನ್ನ 6 ಮಕ್ಕಳ ಮುಂದೆ ಈಗ ಮದುವೆ ಮಾಡಿಕೊಂಡಿದ್ದಾನೆ.
ಕಳೆದ 10 ವರ್ಷಗಳಿಂದ ಈ ಮೂವರು ಮಹಿಳೆಯರೊಂದಿಗೆ ಲಿವ್ ಇನ್ ರಿಲೇಷನ್ ಇಟ್ಟುಕೊಂಡಿದ್ದ ಈತನಿಗೆ ಮೂವರಿಂದ 6 ಮಕ್ಕಳೂ ಇದ್ದಾರೆ. ಮದುವೆಯಾಗದೇ ಕುಟುಂಬಹೊಂದಿದ್ದ ಈತನಿಗೆ ಈಗ ಈತನ ಸಮುದಾಯವರೆಲ್ಲಾ ಸೇರಿ ಮದುವೆ ಮಾಡಿಸಿದ್ದಾರೆ. ಮದುವೆ ಮಂಟಪದಲ್ಲಿ ಖುಷಿಯಿಂದ ಕುಣಿಯುತ್ತಿರುವ ವಿಡಿಯೋ ಈಗ ಭಾರೀ ವೈರಲ್ ಆಗುತ್ತಿದೆ.
ಮಧುಮಗನ ಹೆಸರು ಸಮರ್ಥ್ ಮೌರ್ಯ, 15 ವರ್ಷಗಳ ಹಿಂದೆ ಬಡವನಾಗಿದ್ದರಿಂದ ಮದುವೆಯಾಗಿರಲಿಲ್ಲವಂತೆ. ಈಗ ಸರಪಂಚ್ ಆಗಿರುವ ಈತ ಸ್ಥಿತಿವಂತನೂ ಆಗಿರುವುದರಿಂದ ಮದುವೆಯಾಗುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾನೆ.