

ಕಾರಟಗಿ: ಬಣಜಿಗ ಸಮಾಜದ ಸಮುದಾಯ ಭವನಕ್ಕೆ ನಿವೇಶನ ಮಂಜೂರು ಮಾಡಿಸುವ ಜತೆಗೆ ನಿರ್ಮಾಣಕ್ಕೆ ಒಂದು ಕೋಟಿ ರೂ. ಅನುದಾನ ನೀಡುವುದಾಗಿ ಸಚಿವ ಶಿವರಾಜ ತಂಗಡಗಿ ಘೋಷಿಸಿದರು.
ಪಟ್ಟಣದ ಪದ್ಮಶ್ರೀ ಕನ್ವೆನ್ಷನ್ ಹಾಲ್ನಲ್ಲಿ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.
ಬಣಜಿಗ ಸಮಾಜದ ಬಂಧುಗಳು ಸ್ವಾಭಿಮಾನದಿಂದ ಬದುಕುವವರು. 12ನೇ ಶತಮಾನದ ಬಸವಣ್ಣನವರ ಕಾಲದಿಂದಲೂ ಎಲ್ಲರೊಂದಿಗೆ ಪ್ರೀತಿ, ವಿಶ್ವಾಸದಿಂದ ಇದ್ದಾರೆ. ಈ ಸಮಾಜದ ಏಳು ನಾಯಕರು ಮುಖ್ಯಮಂತ್ರಿಗಳಾಗಿ ರಾಜ್ಯಭಾರ ನಡೆಸಿದ್ದಾರೆ. ಲೆಕ್ಕದ ವಿಷಯದಲ್ಲಿ ಜಾಣರಾಗಿರುವುದರಿಂದ ಎಲ್ಲ ಮಠ, ಸಂಸ್ಥೆಗಳಲ್ಲಿ ಹಣಕಾಸಿನ ವ್ಯವಹಾರವನ್ನು ಈ ಸಮುದಾಯದವರಿಗೆ ನೀಡಲಾಗಿದೆ.
ಸಮುದಾಯ ಭವನ ನಿರ್ಮಾಣಕ್ಕೆ ಪುರಸಭೆಯಿಂದ ನಿವೇಶನ ಮಂಜೂರು ಮಾಡಿಸುತ್ತೇನೆ. ನಿವೇಶನದ ಸ್ವಲ್ಪ ಹಣವನ್ನು ಸಮಾಜದವರು ಭರಿಸಬೇಕು. ಒಂದು ಕೋಟಿ ರೂ. ಅನುದಾನ ನೀಡುವುದು ನನ್ನ ಜವಾಬ್ದಾರಿ ಎಂದು ಭರವಸೆ ನೀಡಿದರು.
ಗಂಗಾವತಿ ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಬಣಜಿಗ ಸಮಾಜ ಕಾಯಕ ಮತ್ತು ದಾಸೋಹಕ್ಕೆ ಮಹತ್ವ ನೀಡುತ್ತಾ ಬಂದಿದೆ. ಸಾಮಾಜಿಕ, ರಾಜಕೀಯವಾಗಿ ಬೆಳೆಯುತ್ತಿದ್ದೇವೆ. ಆದರೆ ಇನ್ನು ಅನೇಕರು ಆರ್ಥಿಕವಾಗಿ ಹಿಂದುಳಿದಿದ್ದು, ಅಂತವರನ್ನು ಮೇಲೆತ್ತುವ ಕೆಲಸ ಮಾಡಬೇಕಿದೆ ಎಂದರು.
ಮುಖಂಡ ಶರಣಪ್ಪ ಗದ್ದಿ , ಉಪನ್ಯಾಸಕಿ ಸಂಗೀತಾ ಪಟ್ಟಣಶೆಟ್ಟಿ ಮಾತನಾಡಿದರು. ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು, ಸಚಿವ ಶಿವರಾಜ ತಂಗಡಗಿ ಹಾಗೂ ಪಿಡಬ್ಲುಡಿ ಇಲಾಖೆಯ ವಿಶ್ವನಾಥ ಜಂಭುನಾಥನಹಳ್ಳಿ ಅವರನ್ನು ಸನ್ಮಾನಿಸಲಾಯಿತು.
ಕನಸು ನಾಟ್ಯ ಶಾಲೆಯ ಮಕ್ಕಳ ಭರತ ನಾಟ್ಯ, ಪುಟ್ಟರಾಜ ಸಂಗೀತ ಪಾಠ ಶಾಲೆ ವಿದ್ಯಾರ್ಥಿಗಳ ಪ್ರಾರ್ಥನೆ ಗೀತೆ ಜನಮನಸೊರೆಗೊಂಡಿತು.
ಜರ್ಮನ್ನಿನ ರಾಜ್ಯಶಾಸ್ತ್ರಜ್ಞ ಎಡ್ವರ್ಡ್ ಬರ್ನೆಟ್ ತನ್ನ ‘ಝವಾರಿಯರ್ ಮರ್ಚಂಟ್ಸ್ ’ಪುಸ್ತಕದಲ್ಲಿ ಬಣಜಿಗರು ವರ್ಣಾಶ್ರಮದ ಕೈಗೆ ಸಿಕ್ಕು ಮೂಲೆಗುಂಪಾದರೆಂದು ಉಲ್ಲೇಖಿಸಿದ್ದಾನೆ. ಆದರೆ, ವರ್ಣಾಶ್ರಮದಲ್ಲಿ ಶೂದ್ರರನ್ನು ಅಸ್ಪೃಶ್ಯರನ್ನಾಗಿ ಮಾಡಿರುವುದು ದುರಂತ. ಬಣಜಿಗರು ವ್ಯಾಪಾರದ ಜತೆಗೆ ಶಸ್ತ್ರಾಸ್ತ್ರ ಹಿಡಿದಿದ್ದಾರೆ ಎಂದು ಬದಾಮಿಯ ತಾಲೂಕು ಬಣಜಿಗ ಅಧ್ಯಕ್ಷ ಡಾ.ಅವಿನಾಶ ಮಮದಾಪುರ ಹೇಳಿದರು.