

ಶಿವಮೊಗ್ಗ: ಬಾಗಲಕೋಟೆಯ ನವನಗರದ ಶ್ರೀ ಜಗದ್ಗುರು ಸಿದ್ದರಾಮೇಶ್ವರ ಮಹಾಸಂಸ್ಥಾನ ಭೋವಿ ಗುರುಪೀಠದಲ್ಲಿ ಶ್ರೀ ಶರಣಬಸವ ಸ್ವಾಮಿಗಳ ಸಂಸ್ಮರಣೋತ್ಸವ, ಗದ್ದುಗೆ ಶಿಲಾಮಂಟಪ ಶಿಲಾನ್ಯಾಸ, ಗುರುಕುಟೀರ ಉದ್ಘಾಟನೆ ಹಾಗೂ ಜಿಲ್ಲಾಮಟ್ಟದ ಬೃಹತ್ ಸಮಾವೇಶ ನ.23ರಂದು ನಡೆಯಲಿದೆ ಎಂದು ಜಿಲ್ಲಾ ಭೋವಿ ಸಮಾಜದ ಅಧ್ಯಕ್ಷ ಎಸ್.ರವಿಕುಮಾರ್ ತಿಳಿಸಿದರು.
ಭೋವಿ ಗುರುಪೀಠದ ಮೂಲಕವೇ ಸಮಾಜದ ಸಂಘಟನೆ, ಶಕ್ತಿ ಪ್ರದರ್ಶನ ಮತು ಸಮಾಜದ ಜನರ ಸಮಸ್ಯೆಗಳ ಬಗ್ಗೆ ಗಮನ ಹರಿಸಲು ಬಾಗಲಕೋಟೆಯಲ್ಲಿ ಸಮಾವೇಶ ಆಯೋಜಿಸಲಾಗಿದೆ. ಜಿಲ್ಲಾಮಟ್ಟದ ಸಮಾವೇಶ ಆಗಿದ್ದರೂ ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ಸಮಾಜದ ಜನರು ಪಾಲ್ಗೊಳ್ಳಲಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಭೋವಿ ಗುರುಪೀಠದ ಪೀಠಾಧಿಪತಿ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಿಎಂ ಸಿದ್ದರಾಮಯ್ಯ ಸಮಾರಂಭ ಉದ್ಘಾಟಿಸುವರು. ಡಿಸಿಎಂ ಡಿ.ಕೆ.ಶಿವಕುಮಾರ್, ಹಿಂದುಳಿದ ವರ್ಗಗಳ ಸಚಿವ ಶಿವರಾಜ ತಂಗಡಗಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು. ಸಮಾಜದ ಮುಖಂಡ ಧೀರರಾಜ್ ಹೊನ್ನವಿಲೆ ಮಾತನಾಡಿ, ಬಾಗಲಕೋಟೆ ಸಮಾವೇಶಕ್ಕೆ ಒಂದು ಲಕ್ಷ ಜನರು ಸೇರುವ ನಿರೀಕ್ಷೆ ಇದ್ದು ಶಿವಮೊಗ್ಗ ಜಿಲ್ಲೆಯಿಂದ 5 ಸಾವಿರಕ್ಕೂ ಅಧಿಕ ಜನರು ಭಾಗಿಯಾಗಲಿದ್ದಾರೆ ಎಂದರು.
ಮೂರು ಎಂಪಿ ಟಿಕೆಟ್ಗೆ ಬೇಡಿಕೆ
ಸಮಾಜದ ಸಮಾವೇಶ ಹಲವು ಉದ್ದೇಶಗಳೊಂದಿಗೆ ನಡೆಯುತ್ತಿದೆ. ಮುಖ್ಯವಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ವಿಜಯಪುರ, ಚಿತ್ರದುರ್ಗ ಮತ್ತು ಕೋಲಾರ ಕ್ಷೇತ್ರಗಳಲ್ಲಿ ಸಮಾಜದ ಒಬ್ಬರಿಗೆ ಟಿಕೆಟ್ ನೀಡಬೇಕು. ಪಕ್ಷಾತೀತವಾಗಿ ಟಿಕೆಟ್ ಬೇಡಿಕೆ ಇಟ್ಟಿದ್ದು ಮೂರರಲ್ಲಿ ಯಾವುದೇ ಕ್ಷೇತ್ರಕ್ಕೆ ಕೊಟ್ಟರೂ ಸಮಾಜದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವ ಶಕ್ತಿ ಸಮಾಜಕ್ಕಿದೆ ಎಂದು ಎಸ್.ರವಿಕುಮಾರ್ ಹೇಳಿದರು. ಮೀಸಲಾತಿ ಆಧಾರದ ಮೇಲೆ ಮೂರು ಕ್ಷೇತ್ರಗಳಲ್ಲಿ ಒಂದನ್ನು ಕೇಳುತ್ತಿದ್ದೇವೆ. ಮೂರು ಕ್ಷೇತ್ರಕ್ಕೆ ಟಿಕೆಟ್ ಕೊಟ್ಟರೂ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಜಕೀಯವಾಗಿ ಸಮಾಜಕ್ಕೆ ಸೂಕ್ತ ಸ್ಥಾನಮಾನ ಇದುವರೆಗೂ ಸಿಕ್ಕಿಲ್ಲ. ಸಮಾಜಕ್ಕೆ ಸಾಮಾಜಿಕ ಅನ್ಯಾಯವಾಗಿದ್ದು ಈ ಬಾರಿಯಾದರೂ ಎಲ್ಲ ಮೂರು ಪಕ್ಷಗಳು ಸರಿಪಡಿಸಬೇಕಿದೆ ಎಂದರು.