ಎಲಾನ್​ ಮಸ್ಕ್​ನಿಂದಾಗಿ ಅಶ್ಲೀಲ ವಿಡಿಯೋಗಳಿಗೆ ದಾಸರಾದ ಬುಡಕಟ್ಟು ಯುವಕರು! ಮಹಿಳೆಯರ ಸ್ಥಿತಿ ಹೇಳತೀರದು

Elon Musk
Published on

ಬ್ರಾಸಿಲಿಯಾ: ಎಲಾನ್ ಮಸ್ಕ್ ಅವರು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು. ಅವರು ಎಕ್ಸ್, ಸ್ಪೇಸ್ ಎಕ್ಸ್, ದಿ ಬೋರಿಂಗ್ ಕಂಪನಿ ಹಾಗೂ ನ್ಯೂರಾಲಿಂಕ್ ಮುಂತಾದ ವಿವಿಧ ಕಂಪನಿಗಳನ್ನು ನಡೆಸುತ್ತಿದ್ದಾರೆ. ಟೆಸ್ಲಾ ಕಂಪನಿಯ ಸಿಇಒ ಆಗಿದ್ದಾರೆ. ಮಸ್ಕ್ ನಡೆಸುತ್ತಿರುವ ಪ್ರಮುಖ ಕಂಪನಿಗಳಲ್ಲಿ ಒಂದು ಸ್ಟಾರ್‌ಲಿಂಕ್ ಕೂಡ ಒಂದು.

ಈ ಸ್ಟಾರ್​ ಲಿಂಕ್​ ಕಂಪನಿಯ ಪ್ರಮುಖ ಉದ್ದೇಶವೇನೆಂದರೆ, ಸ್ಯಾಟಲೈಟ್​ ಮೂಲಕ ದೂರದ ಹಳ್ಳಿಗಳಿಗೆ ಇಂಟರ್ನೆಟ್ ಸೇವೆಯನ್ನು ಒದಗಿಸುವುದು. ಈಗಾಗಲೇ ಸ್ಟಾರ್‌ಲಿಂಕ್, ಪ್ರಪಂಚದ ಅನೇಕ ಭಾಗಗಳಿಗೆ ಇದೇ ರೀತಿಯ ಇಂಟರ್ನೆಟ್ ಸೇವೆಯನ್ನು ಒದಗಿಸಿದೆ.

ದಕ್ಷಿಣ ಅಮೆರಿಕಾದ ಅಮೆಜಾನ್ ಕಾಡಿನಲ್ಲಿ ಮಾರುಬೊ ಬುಡಕಟ್ಟುವಿದೆ. ಇಲ್ಲಿ ಸುಮಾರು 2000 ಮಂದಿ ವಾಸ ಮಾಡುತ್ತಿದ್ದಾರೆ. ಈ ಬುಡಕಟ್ಟು ಜನಾಂಗದ್ದು ವಿಶಿಷ್ಟವಾದ ಭಾಷೆ ಮತ್ತು ಸಂಸ್ಕೃತಿ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸ್ಟಾರ್‌ಲಿಂಕ್ ಕಂಪನಿ ಈ ಬುಡಕಟ್ಟು ಜನರಿಗೆ ಮೊದಲ ಬಾರಿಗೆ ಇಂಟರ್ನೆಟ್ ಸೇವೆಯನ್ನು ಒದಗಿಸಿದೆ. ಎಲಾನ್​ ಮಸ್ಕ್​ ಮಾಡಿದ ಈ ಒಳ್ಳೆಯ ಕೆಲಸಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇದೀಗ ಈ ಇಂಟರ್ನೆಟ್​ ಸೌಲಭ್ಯ ಯಾರೂ ನಿರೀಕ್ಷಿಸದ ಪರಿಣಾಮವನ್ನು ಬುಡಕಟ್ಟು ಜನಾಂಗದ ಮೇಲೆ ಬೀರಿದೆ. ಈ ವಿಚಾರವನ್ನು ಅಲ್ಲಿಗೆ ತೆರಳಿದ್ದ ಅಂತಾರಾಷ್ಟ್ರೀಯ ಪತ್ರಕರ್ತರಿಗೆ ಆ ಗ್ರಾಮದ 73 ವರ್ಷದ ಚೈನಾಮ ಮಾರುಬೊ ಎಂಬ ವೃದ್ಧರೊಬ್ಬರು ತಿಳಿಸಿದ್ದಾರೆ.

ಈ ಇಂಟರ್ನೆಟ್ ಸೇವೆ ಆರಂಭದಲ್ಲಿ ಎಲ್ಲರ ಹುಬ್ಬೇರಿಸಿದರೂ ಈಗ ಚಿಂತೆಗೀಡು ಮಾಡಿದೆ. ಇಂಟರ್ನೆಟ್ ಸೇವೆ ಸಿಕ್ಕಾಗ ದೂರದ ಬಂಧುಗಳೊಂದಿಗೆ ವಿಡಿಯೋ ಕಾಲ್ ಮಾಡಿ ಮಾತನಾಡುತ್ತಿದ್ದರು. ಆದರೆ ಈಗ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಇಂಟರ್ನೆಟ್ ಸೌಲಭ್ಯ ಯುವಕರನ್ನು ಕಾಡಿದೆ ಮತ್ತು ಸೋಮಾರಿಗಳನ್ನಾಗಿ ಮಾಡಿದೆ ಎಂದು ಚೈನಾಮ ಮಾರುಬೊ ಹೇಳಿದ್ದಾರೆ.

ಇಂಟರ್ನೆಟ್​ ನಮ್ಮ ಸಂಸ್ಕೃತಿಯನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಇಲ್ಲಿನ ಯುವಕರು ಈಗ ಮೊಬೈಲ್‌ಗೆ ದಾಸರಾಗಿದ್ದಾರೆ ಮತ್ತು ದಿನದ 24 ಗಂಟೆಯೂ ಮೊಬೈಲ್​ನಲ್ಲೇ ಮುಳುಗಿರುತ್ತಾರೆ. ಅದರಲ್ಲೂ ಪೋರ್ನ್​ ವಿಡಿಯೋಗಳಿಗೆ ಅಡಿಕ್ಟ್ ಆಗಿದ್ದಾರೆ ಎಂದು ಚೈನಾಮ ಮಾರುಬೊ ನೋವಿನಿಂದ ಹೇಳಿದರು.

ಇದೇ ಸಂದರ್ಭದಲ್ಲಿ ಮಾರುಬೊ ಅಸೋಸಿಯೇಷನ್ ​​ಅಧ್ಯಕ್ಷ ಆಲ್ಫ್ರೆಡೊ ಮಾರುಬೊ ಮಾತನಾಡಿ, ಈಗ ಅನೇಕರು ಅಶ್ಲೀಲ ವಿಡಿಯೋಗಳಿಗೆ ವ್ಯಸನಿಯಾಗಿದ್ದಾರೆ. ಯುವಕರು ಗ್ರೂಪ್ ಚಾಟ್‌ನಲ್ಲಿ ಅಶ್ಲೀಲ ವಿಡಿಯೋಗಳನ್ನು ಬಹಿರಂಗವಾಗಿ ಹಂಚಿಕೊಳ್ಳುತ್ತಿದ್ದಾರೆ ಮತ್ತು ಅಶ್ಲೀಲ ವಿಡಿಯೋಗಳಿಂದಾಗಿ ಯುವಕರು ಮಹಿಳೆಯರ ಮೇಲೆ ಆಕ್ರಮಣಕಾರಿಯಾಗುತ್ತಿದ್ದಾರೆ ಎಂಬ ಸುದ್ದಿಯನ್ನು ನಾವು ಕೇಳಿದ್ದೇವೆ ಎಂದಿದ್ದಾರೆ.

ಈ ಇಂಟರ್ನೆಟ್​ ಸೇವೆಯಿಂದಾಗಿ ಅಶ್ಲೀಲ ವಿಡಿಯೋ ವ್ಯಸನಿಗಳಾಗಿದ್ದರೂ ಗ್ರಾಮಸ್ಥರಿಗೆ ಅನೇಕ ಒಳ್ಳೆಯ ಸಂಗತಿಗಳು ಕೂಡ ಇಂಟರ್ನೆಟ್​ನಿಂದ ಲಭಿಸಿವೆ. ಅಲ್ಲಿನ ಅನೇಕ ಮಕ್ಕಳು ಇಂಟರ್ನೆಟ್​ ಮೂಲಕ ಕಲಿಯಲು ಆರಂಭಿಸಿದ್ದಾರೆ. ಹಾವು ಕಡಿತದಂತಹ ಅಪಾಯಕಾರಿ ಸಂದರ್ಭಗಳಲ್ಲಿ ಅವರು ತಕ್ಷಣ ವೈದ್ಯರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿದೆ. ಕೆಲವರ ಜೀವವನ್ನು ಈಗಾಗಲೇ ಉಳಿಸಲಾಗಿದೆ. ಅಲ್ಲದೆ, ಅಲ್ಲಿನ ಹಳ್ಳಿಗರು ಇಂಟರ್ನೆಟ್​ ಮೂಲಕ ಅನೇಕ ಹೊಸ ವಿಷಯಗಳನ್ನು ಕಲಿಯುತ್ತಿದ್ದಾರೆ. ಆದ್ದರಿಂದ, ಇಂಟರ್ನೆಟ್ ಕೆಟ್ಟದ್ದಲ್ಲ, ಅದು ಅನೇಕ ಒಳ್ಳೆಯ ವಿಷಯಗಳನ್ನು ಒಳಗೊಂಡಿದೆ. ನಾವು ಇಂಟರ್ನೆಟ್ ಅನ್ನು ಯಾವುದಕ್ಕಾಗಿ ಬಳಸುತ್ತೇವೆ ಎಂಬುದು ಮುಖ್ಯ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net