

ರಾಯಚೂರು: ಆಸ್ಪತ್ರೆಗೆ ತೆರಳುವ ಮಾರ್ಗಮಧ್ಯೆ ಆಂಬುಲೆನ್ಸ್ನಲ್ಲೇ ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮನೀಡಿದ್ದಾರೆ.
ಸಿರವಾರ ತಾಲೂಕಿನ ಚಾಗಬಾವಿ ಗ್ರಾಮದ ನಿರ್ಮಲಾ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಆಂಬುಲೆನ್ಸ್ ಮೂಲಕ ಅವರನ್ನು ತಾಲೂಕು ಆಸ್ಪತ್ರೆಗೆ ಕರೆತರಲಾಗುತ್ತಿತ್ತು. ಆದರೆ, ಮಾರ್ಗ ಮಧ್ಯೆ ಹೆರಿಗೆ ನೋವು ಹೆಚ್ಚಾಗಿದೆ. ಹಾಗಾಗಿ ಸಿಬ್ಬಂದಿ ವೀರೇಶ ಮತ್ತು ಚಾಲಕ ಬಸವರಾಜ ಅವರೇ ನಿರ್ಮಲಾಗೆ ಹೆರಿಗೆ ಮಾಡಿದ್ದಾರೆ. ಇದನ್ನೂ ಓದಿರಿ ಕುರಿಗಳಿಗೂ ಕ್ವಾರಂಟೈನ್, ಮಾಂಸ ಪ್ರಿಯರೇ ಜಾಗ್ರತೆ!
ಕರೊನಾ ಹಿನ್ನೆಲೆ ಸಿರವಾರ ಆಸ್ಪತ್ರೆ ಸೀಲ್ಡೌನ್ ಆಗಿದೆ. ಹಾಗಾಗಿ ತಾಯಿ ಮತ್ತು ಮಗುವನ್ನು ದೇವದುರ್ಗದ ಅರಕೇರಿ ಆಸ್ಪತ್ರೆ ದಾಖಲಿಸಲಾಗಿದೆ. ತಾಯಿ-ಮಗು ಸುರಕ್ಷಿತವಾಗಿದ್ದಾರೆ.
ಕರೊನಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ತುರ್ತು ಸಂದರ್ಭದಲ್ಲೂ ಆಂಬುಲೆನ್ಸ್ಗಳ ಸ್ಥಳಕ್ಕೆ ಬರುತ್ತಿಲ್ಲ, ಬಂದರೂ ವಿಳಂಬ ಎಂಬ ಆರೋಪ ಕೇಳಿಬರುತ್ತಿವೆ. ಈ ನಡುವೆ ಆಂಬುಲೆನ್ಸ್ ಸಿಬ್ಬಂದಿಯೇ ಮಹಿಳೆಗೆ ಹೆರಿಗೆ ಮಾಡುವ ಮೂಲಕ ತಾಯಿ-ಮಗುವನ್ನು ಉಳಿಸಿರುವ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ಕೇಳಿಬರುತ್ತಿವೆ.