

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ವ್ಯಕ್ತಿಯ ಹಣೆಗೆ ಬಂದೂಕಿಟ್ಟು ಬೆದರಿಸುವ ವಿಕೃತಿ ಇನ್ನೂ ಜೀವಂತ ಇದೆಯೇ?
ಹೌದು ಇದೆ. ಇಲ್ಲಿಯ ಕೇಶ್ವಾಪುರ ಠಾಣೆಯಲ್ಲಿ ಡಿ. 20ರಂದು ದಾಖಲಾದ ಪ್ರಕರಣದಲ್ಲಿ ವ್ಯಕ್ತಿಯೊಬ್ಬರು ನೀಡಿದ ದೂರಿನಲ್ಲಿ ಇದೆಲ್ಲವೂ ಉಲ್ಲೇಖವಾಗಿದೆ.
ಗೋಪನಕೊಪ್ಪದ ಸಿದ್ರಾಮನಗರದ ನಿವಾಸಿ, ಗುತ್ತಿಗೆದಾರ ಶ್ರೀಧರ ನರಗುಂದ ಎಂಬಾತ ಪ್ರಕರಣ ದಾಖಲಿಸಿದ್ದು, ಸುಂದರಪೌಲ್, ಚಂದರಪೌಲ್, ಫಿಲೋಮಿನ್ ಗೋಟಿಮುಕ್ಕಲ, ರಮೇಶ ಕೊಠಾರಿ, ಚೇತನ ಕೊಠಾರಿ ಹಾಗೂ ಸಮೀರ ಚಾವೂಸ್ ಅವರ ನಡೆಗಳನ್ನು ಎಳೆ ಎಳೆಯಾಗಿ ವಿವರಿಸಿದ್ದಾರೆ.
ತನ್ನದೇ ಜಮೀನು ಕೊಟ್ಟು ಹಣ ಪಡೆದು ಅದಕ್ಕೆ ಬಡ್ಡಿ ಕಟ್ಟಿದ ಶ್ರೀಧರ, ನಂತರ ಹೆಚ್ಚುವರಿ ಬಡ್ಡಿ ಕೊಡುವುದಿಲ್ಲ ಎಂದಾಗ ಮಕ್ಕಳನ್ನು ಒತ್ತೆ ಇಟ್ಟುಕೊಳ್ಳುವುದಾಗಿ ಚಂದ್ರಪೌಲ್ ಹೇಳಿದರೆ, ಹಣೆಗೆ ಗುಂಡಿಟ್ಟು ಕೊಲೆ ಮಾಡುವುದಾಗಿ ಫಿಲೋಮಿನ್ ಬೆದರಿಸಿರುವುದು ದೂರಿನಲ್ಲಿ ಉಲ್ಲೇಖವಾಗಿದೆ.
ಘಟನೆ ಏನಾಗಿದೆ?: ಸುಳ್ಳ ರಸ್ತೆಯ ಪಟಾಕ್ಷಿ ಫ್ಯಾಕ್ಟರಿ ಹತ್ತಿರದ ಗೋಪ್ಪನಕೊಪ್ಪ ಗ್ರಾಮದ ಸರ್ವೇ ನಂ. 120/1, 121/1 , 120/3 121/3, 121/4ರಲ್ಲಿ ಒಟ್ಟು 6 ಎಕರೆ ನನ್ನ ಹೊಲ ಇದೆ.
2020ರ ಜನವರಿ 1ನೇ ವಾರದಲ್ಲಿ ಸುಂದರಪಾಲ ಗೋಟಿಮುಕ್ಕಲ, ಚೇತನ ಕೊಠಾರಿ ಭೇಟಿಯಾದರು. ನಿಮ್ಮ ಹೊಲ ನಮಗೆ ಜಾಯಿಂಟ್ ವೆಂಚರ್ ಕೊಡುತ್ತಿರಾ? ಅದನ್ನು ಡೆವಲಪ್ಮೆಂಟ್ ಮಾಡಿ ನಿಮಗೆ ಅದರಲ್ಲಿ ಅರ್ದ ಪ್ಲಾಟ್ ಕೊಡುತ್ತೇವೆ. ಎಕರೆಗೆ 30 ಲಕ್ಷದಂತೆ 6 ಎಕರೆಗೆ ಒಟ್ಟು 1 ಕೋಟಿ 80 ಲಕ್ಷ ರೂ. ಕೊಡುತ್ತೇವೆ ಎಂದಿದ್ದರು. ಹೊಲಕ್ಕೆ ಮುಖ್ಯ ರಸ್ತೆ ಇಲ್ಲ ಎಂದಾಗ ಕೆಲವರೊಂದಿಗೆ ಮಾತನಾಡಿ ಸರಿ ಮಾಡಿಕೊಡುತ್ತೇವೆ ಎಂದರು. ಕೆಲ ದಿನಗಳ ನಂತರ ನನಗೆ ಹಣದ ಅಡಚಣೆಯಾದಾಗ ಈ ಮಾತಿಗೆ ಒಪ್ಪಿಕೊಂಡೆ.
2020ರ ಡಿ. 17ರಂದು ಜಾಯಿಂಟ್ ವೆಂಚರ್ ಮಾಡಿಸದೇ 6ರ ಪೈಕಿ 3 ಎಕರೆ ಹೊಲ ರಿ.ನಂ. 120/1, 121/1 ರಮೇಶ ಕೊಠಾರಿ ಇವರಿಗೆ ಮಾರಾಟ ಮಾಡಿದಂತೆ ಸೇಲ್ ಡೀಡ್ ಮಾಡಿಸಿಕೊಂಡರು. ಈ ಕಾಲಕ್ಕೆ ನನಗೆ 48 ಲಕ್ಷ ರೂ. ಚೆಕ್ ಮೂಲಕ ಮಾರನೇ ದಿನ 52 ಲಕ್ಷ ರೂ. ನಗದು ರೂಪದಲ್ಲಿ ಒಟ್ಟು 1 ಕೋಟಿ ರೂ. ಕೊಟ್ಟರು.
ಆದರೆ, ಬಡ್ಡಿ ಕೊಡುವಂತೆ ದುಂಬಾಲು ಬಿದ್ದರು. ಆಗ ನಾನು ಒಟ್ಟು 70 ಲಕ್ಷ ರೂ.ವರೆಗೆ ಬಡ್ಡಿ ಕೊಟ್ಟೆ. ಬಾಜು ಹೊಲದಿಂದ ಜಿಪಿಎ ಪಡೆದು ಸಮೀರ್ ಚಾವೂಸ್ ಹತ್ತಿರ ಕರೆದುಕೊಂಡು ಹೋದರು. ರಸ್ತೆಗೆ ಹೊಲ ಕೊಡುತ್ತೇನೆ 25 ಲಕ್ಷ ರೂ. ಕೊಡಿ ಎಂದರು. 5 ಲಕ್ಷ ರೂ. ಮುಂಗಡ ಸಮೀರ್ಗೆ ಕೊಟ್ಟಿದ್ದೇನೆ.
ಇವರೆಲ್ಲ ಸೇರಿ ನನ್ನ ಜಮೀನು ಡೆವೆಲಪ್ಮೆಂಟ್ ಮಾಡಿಲ್ಲ. ಆದರೆ, ತಾವು ಕೊಟ್ಟದ್ದು ಹಣವಲ್ಲ ಸಾಲವಂತೆ. ಇದುವರೆಗೆ ಇದಕ್ಕೆ 1 ಕೋಟಿ 70 ಲಕ್ಷ ರೂ. ಬಡ್ಡಿ ವಸೂಲಿ ಮಾಡಿದ್ದಾರೆ.
2022ರ ಅಕ್ಟೋಬರ್ನಲ್ಲಿ ನಾನು ಇಲ್ಲದ ವೇಳೆ ಮನೆಗೆ ಬಡ್ಡಿ ವಸೂಲು ಮಾಡಲು ಚಂದರಪೌಲ್ ಗೋಟಿಮುಕ್ಕಲ ಹೋಗಿದ್ದ. ನನ್ನ ಮಕ್ಕಳಾದ ತುಷಾರ ಮತ್ತು ಆದರ್ಶ ಇಬ್ಬರೂ ಇದ್ದಾಗ ನಿಮ್ಮಪ್ಪ ಇದೇ ರೀತಿ ಬಡ್ಡಿ ಕೊಡದೇ ಹೋದರೆ, ನಿಮ್ಮನ್ನು ಉಳಿಸುವುದಿಲ್ಲ. ನಿಮ್ಮಪ್ಪ ಬರುವವರೆಗೆ ಒತ್ತೆಯಾಳಾಗಿಟ್ಟುಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿ ಹೋಗಿದ್ದಾರೆ.
2023ರ ಡಿ. 24ರಂದು ನನ್ನ ಗೆಳೆಯ ಮಾರುತಿ ಸುಳ್ಳದ ಜತೆಗೆ ಹೋಗಿ ನನ್ನ ಹೊಲ ನನಗೆ ಮರಳಿ ಕೊಡಿಸಿ ಎಂದೆ. ಇಲ್ಲವೇ ಇವತ್ತಿನ ಮಾರುಕಟ್ಟೆ ಬೆಲೆಗೆ ನೀವೇ ಖರೀದಿಗೆ ತೆಗೆದುಕೊಳ್ಳಲು ಹೇಳಿದೆ. ಆಗ ಸುಂದರಪೌಲ್, ತನ್ನ ಬಳಿಯ ಬಂದೂಕು ತೆಗೆದು ನನ್ನ ಹಣೆಗಿಟ್ಟು ನಿನ್ನ ಹೊಲ ಮರಳಿ ಕೊಡುವುದಿಲ್ಲ. ಬೇರೆಯವರಿಗೆ ಮಾರಾಟ ಮಾಡುತ್ತೇನೆ. ಇನ್ನೊಮ್ಮೆ ಕೇಳಿದರೆ ಹಣೆಗೆ ಗುಂಡು ಹೊಡೆದು ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ.
2024ರ ಮಾರ್ಚ್ ಮೊದಲ ವಾರದಲ್ಲಿ ರಮೇಶ ಕೊಠಾರಿ ಮತ್ತು ಚೇತನ ಕೊಠಾರಿ ಮನೆಗೆ ನಾನು ಮತ್ತು ನನ್ನ ಪತ್ನಿ ಹೋಗಿದ್ದೆವು. ನನ್ನ ಹೊಲದ ವ್ಯವಹಾರ ಮುಗಿಸಿಕೊಡಿ ಎಂದು ಕೇಳಿದಾಗ, ಜಾತಿ ನಿಂದನೆ ಮಾಡಿದ್ದಾರೆ ಎಂದು ಶ್ರೀಧರ ದೂರಿನಲ್ಲಿ ವಿವರಿಸಿದ್ದಾರೆ.