ಮಗಳಿಗೆ ಲೈಂಗಿಕ ಕಿರುಕುಳ ಕೊಟ್ಟ ತಂದೆಗೆ 107 ವರ್ಷ ಜೈಲು ಶಿಕ್ಷೆ! ಕೇರಳ ಇತಿಹಾಸದಲ್ಲೇ ಗರಿಷ್ಠ ಸೆರೆಮನೆವಾಸ

08012021 court
Published on

ಕಾಸರಗೋಡು: ಹದಿನಾರರ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಮಲತಂದೆಗೆ ಬರೋಬ್ಬರಿ 107 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಕೇರಳದ ಇತಿಹಾಸದಲ್ಲಿ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿ ನೀಡಿರುವ ಗರಿಷ್ಠ ಜೈಲುಶಿಕ್ಷೆ ಇದು. ಇಡುಕ್ಕಿ ಜಿಲ್ಲೆ ಮೂಲದ, ಉದುಮ ಬಾರ ಕುಳಿಕ್ಕುನ್ನಿಲ್​ ಎಂಬಲ್ಲಿ ವಾಸವಿದ್ದ ವ್ಯಕ್ತಿಗೆ ಈ ಶಿಕ್ಷೆ ವಿಧಿಸಲಾಗಿದೆ. ಬಾಲಕಿ 10ನೇ ತರಗತಿ ವಿದ್ಯಾಭ್ಯಾಸದಲ್ಲಿದ್ದಾಗ ತಲೆಸುತ್ತು ಹಾಗೂ ಅಸೌಖ್ಯ ಕಾಣಿಸಿಕೊಂಡಿತ್ತು. ವೈದ್ಯಕೀಯ ತಪಾಸಣೆ ನಡೆಸಿದಾಗ ಈಕೆ ಮೇಲೆ ಮಲತಂದೆಯೇ ಲೈಂಗಿಕ ಕಿರುಕುಳ ಕೊಡುತ್ತಿದ್ದ ಕಟುಸತ್ಯ ಬಯಲಾಗಿತ್ತು.

2012ರಿಂದ 2018ರ ಅವಧಿಯಲ್ಲಿ ಬಾಲಕಿಗೆ ಈತ ನಿರಂತರ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಮೇಲ್ಪರಂಬ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಠಾಣೆಯ ಅಂದಿನ ಎಸ್​ಐ ಪಿ.ಪ್ರಮೋದ್​ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಕಾಸರಗೋಡು ಜಿಲ್ಲೆಯ ಹೊಸದುರ್ಗ ಹೆಚ್ಚುವರಿ ಜಿಲ್ಲಾ ವಿಶೇಷ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶ ಸುರೇಶ್​ ಕುಮಾರ್​ ಅವರು ಅಪರಾಧಿಗೆ ಶಿಕ್ಷೆ ಪ್ರಕಟಿಸಿದ್ದಾರೆ. ಒಟ್ಟು ಐದು ಸೆಕ್ಷನ್​ಗಳಲ್ಲಿ ಅಪರಾಧಿಗೆ ತಲಾ 20 ವರ್ಷದಂತೆ 100 ವರ್ಷ ಹಾಗೂ ಪೋಕ್ಸೋ ಅನ್ವಯ 7 ವರ್ಷ ಸಹಿತ ಒಟ್ಟು 107 ವರ್ಷಗಳ ಜೈಲು ಶಿಕ್ಷೆ ಹಾಗೂ 4.25 ಲಕ್ಷ ರೂ. ದಂಡ ವಿಧಿಸಿದ್ದಾರೆ. ದಂಡ ಪಾವತಿಸದಿದ್ದಲ್ಲಿ ಆರು ತಿಂಗಳ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕಾಗಿದೆ. ಶಿಕ್ಷೆಯನ್ನು ಒಟ್ಟಾಗಿ ಅನುಭವಿಸುವಂತೆ ಆದೇಶ ಹೊರಡಿಸಿರುವುದರಿಂದ ಆರೋಪಿ ಒಟ್ಟು 27 ವರ್ಷ ಜೈಲಲ್ಲಿ ಕಳೆಯಬೇಕಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net