

ಬೆಂಗಳೂರು: ಕರ್ನಾಟಕ ಹೈಕೋರ್ಟ್ನಲ್ಲಿ ಪ್ರಸ್ತುತ ಇರುವ ಹಾಗೂ ಬ್ಯಾಕ್ಲಾಗ್ ಹುದ್ದೆಗಳೂ ಸೇರಿದಂತೆ ಸಿವಿಲ್ ನ್ಯಾಯಾಧೀಶರ 56 ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಆನ್ಲೈನ್ ಅರ್ಜಿಗಳಿಗೆ ಮಾತ್ರ ಮಾನ್ಯತೆ ಎಂದು ತಿಳಿಸಲಾಗಿದೆ.
56 ಹುದ್ದೆಗಳಲ್ಲಿ 19 ಬ್ಯಾಕ್ಲಾಗ್ ಹುದ್ದೆಗಳಾಗಿವೆ. ಭಾರತದ ಅಂಗೀಕೃತ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದ ಅಭ್ಯರ್ಥಿಗಳು ಅರ್ಹರಾಗಿದ್ದು, ಕಡ್ಡಾಯವಾಗಿ ವಕೀಲರಾಗಿ ನೋಂದಾಯಿತರಾಗಿರಬೇಕು. ಆಯ್ಕೆಯಾಗುವ ಅಭ್ಯರ್ಥಿಗಳು ಆರಂಭದಲ್ಲಿ 2 ವರ್ಷ ಅದಕ್ಕಿಂತ ಹೆಚ್ಚಿನ ಅವಧಿಗೆ ಪ್ರೊಬೆಷನ್ ಅವಧಿಯಲ್ಲಿ ಇರುತ್ತಾರೆ. ಅಭ್ಯರ್ಥಿಗಳು ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರದಿದ್ದರೆ ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು.
ಅರ್ಜಿ ಸಲ್ಲಿಕೆ ಕೊನೇ ದಿನಕ್ಕೆ ಅನ್ವಯವಾಗುವಂತೆ ಗರಿಷ್ಠ 35-40 ವರ್ಷ ವಯೋಮಿತಿ ನಿಗದಿ ಪಡಿಸಲಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ ಗರಿಷ್ಠ 38-45 ವರ್ಷ, ಮಾಜಿ ಸೈನಿಕರಿಗೆ 3 ವರ್ಷ ವಯೋ ಸಡಿಲಿಕೆ ಇದೆ.
ಮಹಿಳಾ ಅಭ್ಯರ್ಥಿಗಳಿಗೆ 18 ಸ್ಥಾನ, ಗ್ರಾಮೀಣ ಅಭ್ಯರ್ಥಿಗೆ 19, ಕನ್ನಡ ಮಾಧ್ಯಮ ಅಭ್ಯರ್ಥಿಗೆ 3, ಮಾಜಿ ಸೈನಿಕರಿಗೆ 6, ಅಂಗವಿಕಲರಿಗೆ 1 ಸ್ಥಾನ ಮೀಸಲಿರಿಸಿದ್ದು, ಇದರಲ್ಲಿ ಜಾತಿ ಮೀಸಲಾತಿಯೂ ಇದೆ.
ಅರ್ಜಿ ಶುಲ್ಕ: ಪೂರ್ವಭಾವಿ ಪರೀಕ್ಷೆಗೆ ಎಸ್ಸಿ, ಎಸ್ಟಿ, ಪ್ರವರ್ಗ 1ಕ್ಕೆ ಸೇರಿದ ಅಭ್ಯರ್ಥಿಗಳು 250 ರೂ. ಹಾಗೂ ಉಳಿದ ಅಭ್ಯರ್ಥಿಗಳು 500 ರೂ. ಶುಲ್ಕ ಪಾವತಿಸಬೇಕು. ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಫಲಿತಾಂಶ ಘೋಷಿಸಿದ 15 ದಿನದೊಳಗೆ ಮುಖ್ಯ ಲಿಖಿತ ಪರೀಕ್ಷೆ ಶುಲ್ಕ ಎಸ್ಸಿ, ಎಸ್ಟಿ, ಪ್ರವರ್ಗ1ರ ಅಭ್ಯರ್ಥಿಗಳು 500 ರೂ., ಉಳಿದ ಅಭ್ಯರ್ಥಿಗಳು 1000 ರೂ. ಪಾವತಿಸಬೇಕಿದೆ.
ಆಯ್ಕೆ ಪ್ರಕ್ರಿಯೆ: ಸ್ಪರ್ಧಾತ್ಮಕ ಪರೀಕ್ಷೆಯು 3 ಹಂತದಲ್ಲಿ ನಡೆಯುತ್ತದೆ. ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನ ಇರಲಿದೆ. ಪೂರ್ವಭಾವಿ ಪರೀಕ್ಷೆಯ ಅಂಕಗಳನ್ನು ಮುಖ್ಯ ಪರೀಕ್ಷೆಗೆ ಅರ್ಹತೆ ಹೊಂದಲು ಮಾತ್ರ ಪರಿಗಣಿಸಲಾಗುವುದು. ಮುಖ್ಯ ಪರೀಕ್ಷೆಯಲ್ಲಿ ಭಾಷಾಂತರ ಪತ್ರಿಕೆ, ಕಾನೂನು ಪತ್ರಿಕೆಗಳಿರುತ್ತವೆ. ಮೌಖಿಕ ಪರೀಕ್ಷೆಯಲ್ಲಿ ಸಾಮಾನ್ಯ ಜ್ಞಾನ, ಕಾನೂನು ತತ್ವಗಳ ಗ್ರಹಿಕೆ ಮತ್ತು ಸಿವಿಲ್ ನ್ಯಾಯಾಧೀಶರಾಗಿ ನೇಮಕವಾಗಲು ಇರುವ ಅರ್ಹತೆಗಳನ್ನು ಪರೀಕ್ಷಿಸಲಾಗುವುದು. ಕಂಪ್ಯೂಟರ್ ಜ್ಞಾನದ ಪರೀಕ್ಷೆಯನ್ನು 25 ಅಂಕಗಳಿಗೆ ನಡೆಸಲಾಗುವುದು. ಕನ್ನಡದಲ್ಲೂ ಪರೀಕ್ಷೆ ಬರೆಯಲು ಅವಕಾಶ ಇರುತ್ತದೆ.
ವೇತನ: ಮಾಸಿಕ 27,700-44,770 ರೂ. ಇದೆ.
ಅರ್ಜಿ ಸಲ್ಲಿಸಲು ಕೊನೇ ದಿನ: 23.5.2022
ಶುಲ್ಕ ಪಾವತಿಸಲು ಕೊನೇ ದಿನ: 26.5.2022
ಅಧಿಸೂಚನೆಗೆ: https://bit.ly/3EJR2jm
ಮಾಹಿತಿಗೆ: karnatakajudiciary.kar.nic.in