blank

ದಟ್ಟಡವಿಯೊಳಗೆ ದಾರಿಯ ಕೂಗು: ಮೂಲನಿವಾಸಿ ಕುಟುಂಬಕ್ಕೆ ಬೇಕಿದೆ ಮಾನವೀಯ ಕಾಳಜಿ

ರಾಜೇಶ್ ಶೆಟ್ಟಿ ದೋಟ, ಮಂಗಳೂರು

ದಟ್ಟ ಕಾನನದ ಮಧ್ಯೆ ಮೂಲಸೌಕರ್ಯದಿಂದ ವಂಚಿತವಾಗಿರುವ ಕುಟುಂಬದ ಇವರು ಕೇಳುತ್ತಿರುವುದು ಬರೀ ರಸ್ತೆಯಷ್ಟೇ. ಅದೂ ದೊಡ್ಡ ರಸ್ತೆ ಬೇಕಿಲ್ಲ, ಅನಾರೋಗ್ಯಕ್ಕೊಳಗಾದವರನ್ನು ತುರ್ತು ಸಾಗಿಸಲು ಆಟೋ ಸಾಗಲೊಂದು ದಾರಿ ಸಾಕು.

– ಅರಣ್ಯ ಮಧ್ಯದ ಇವರ ಈ ಕೂಗು ಈವರೆಗೂ ಅರಣ್ಯರೋದನವಾಗಿಯೇ ಉಳಿದಿದೆ.

ಕಾರ್ಕಳದಿಂದ ಹೆಬ್ರಿ ಮಾರ್ಗವಾಗಿ ಮುನಿಯಾಲುವಿನಲ್ಲಿ ಬಲಕ್ಕೆ ಮುಟ್ಲುಪಾಡಿ ರಸ್ತೆಯಲ್ಲಿ ಸಾಗಿದರೆ ಅಂಡಾರು ರಕ್ಷಿತಾರಣ್ಯ ತೆರೆದುಕೊಳ್ಳುತ್ತದೆ. ಇಲ್ಲಿಂದ ಮೂರು ಕಿ.ಮೀ ದೂರದಲ್ಲಿ ಕುದುರೆಮುಖ ರಕ್ಷಿತಾರಣ್ಯದೊಳಗೆ ಮೂರು ಕುಟುಂಬಗಳು ವಾಸವಾಗಿವೆ. ಹೆಬ್ರಿ ತಾಲೂಕಿನ ಅಂಡಾರು ಗ್ರಾಮ ಪಂಚಾಯಿತಿಗೊಳಪಟ್ಟ ಮೊರಂಟೆಬೈಲು ಎಂಬ ಸ್ಥಳವಿದು. ಸಕಲ ಮೂಲಸೌಕರ್ಯ ವಂಚಿತವಾಗಿರುವ, ನಕ್ಸಲ್ ಬಾಧಿತ ಪ್ರದೇಶದ ಈ ಕುಟುಂಬದ ದುಸ್ಥಿತಿ ನಗರದ ಮಂದಿಯ ಕಲ್ಪನೆಗೂ ನಿಲುಕದು.

19 ಮಂದಿ ವಾಸವಾಗಿರುವ ಈ ಮಲೆಕುಡಿಯರ ಕುಟುಂಬದಲ್ಲಿ ನಡೆದಾಡಲು ಅಶಕ್ತೆಯಾದ 13 ವರ್ಷ ಪ್ರಾಯದ ಬಾಲಕಿಯಿದ್ದಾಳೆ. ಮೂರನೇ ತರಗತಿ ತನಕ ಎಲ್ಲರಂತಿದ್ದ ಹುಡುಗಿ ಏಕಾಏಕಿ ಜ್ವರಕ್ಕೆ ತುತ್ತಾದವಳು ಮತ್ತೆ ಚೇತರಿಸಿಕೊಳ್ಳಲೇ ಇಲ್ಲ. ಶಸ್ತ್ರಕ್ರಿಯೆ ನಡೆದರೂ ಸೊಂಟದ ಬಲ ಕಳೆದುಕೊಂಡು 9 ವರ್ಷದಿಂದ ನೆಲಕ್ಕಂಟಿದ್ದಾಳೆ. ಪದೇಪದೆ ಅಸೌಖ್ಯಕ್ಕೀಡಾಗುವ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುವುದು ಸವಾಲು. ಬಡಿಗೆಗೆ ಬಟ್ಟೆ ಕಟ್ಟಿ ಅದರಲ್ಲಿ ಕುಳ್ಳಿರಿಸಿ ಕೊಂಡೊಯ್ಯಬೇಕಾದ ದುಸ್ಥಿತಿ. ಮನೆಯಲ್ಲಿ ಇನ್ನೂ ಇಬ್ಬರು ಮಕ್ಕಳಿದ್ದು, ಕಾಡುತ್ಪತ್ತಿಯೇ ಕುಟುಂಬಕ್ಕೆ ಜೀವನಾಧಾರ.

ದಟ್ಟಡವಿಯೊಳಗೆ ದಾರಿಯ ಕೂಗು: ಮೂಲನಿವಾಸಿ ಕುಟುಂಬಕ್ಕೆ ಬೇಕಿದೆ ಮಾನವೀಯ ಕಾಳಜಿ
ಅನಾರೋಗ್ಯಕ್ಕೊಳಗಾದ ಬಾಲಕಿಯನ್ನು ಜೋಲಿಯಲ್ಲಿ ಆಸ್ಪತ್ರೆಗೆ ಹೊತ್ತೊಯ್ಯುತ್ತಿರುವುದು.

ರಸ್ತೆ ನಿರ್ಮಾಣ ಅಸಾಧ್ಯವಲ್ಲ

ಮೊರಂಟೆಬೈಲಿನಲ್ಲಿ ಹರಿಯುವ ತೊರೆಗಳಿಗೆ ಕಾರ್ಕಳ ವನ್ಯಜೀವಿ ವಲಯ ವತಿಯಿಂದ ಗಲ್ಲಿಚೆಕ್ಸ್ ನಿರ್ಮಿಸಿದೆ. ಅದರ ನಿರ್ವಹಣೆ, ಪರಿಶೀಲನೆಗೆ ಸಿಬ್ಬಂದಿ ಆಗಾಗ್ಗೆ ಭೇಟಿ ನೀಡುತ್ತಾರೆ. ಕಾರ್ಕಳ ಸಾಮಾಜಿಕ ಅರಣ್ಯ ಹಾಗೂ ವನ್ಯಜೀವಿ ವ್ಯಾಪ್ತಿಯಲ್ಲಿ ಕಾಲುದಾರಿಯಿದ್ದು, ಇರುವ ದಾರಿಯನ್ನೇ ಸ್ವಲ್ಪ ವಿಸ್ತರಿಸಿ ಪ್ಯಾಟ್ರೋಲಿಂಗ್ ಪಾಥ್ ನಿರ್ಮಿಸಿದರೆ ಈ ಕುಟುಂಬಗಳಿಗೆ ಅನುಕೂಲವಾಗುತ್ತದೆ. ಆದರೆ ಮೇಲಾಧಿಕಾರಿಗಳು ಇಚ್ಛಾಶಕ್ತಿ ತೋರಬೇಕಿದೆ ಎಂದು ಇಲಾಖೆ ಸಿಬ್ಬಂದಿಯೇ ಹೇಳುತ್ತಾರೆ.

ಇಲ್ಲಗಳ ನಡುವೆಯೇ ಬದುಕು

ದಿನಸಿ ಸಾಮಗ್ರಿಗಳನ್ನು ತಿಂಗಳಿಗೊಮ್ಮೆ ಮುನಿಯಾಲಿನಿಂದ ಹೊತ್ತು ತರುತ್ತೇವೆ. ಮಕ್ಕಳನ್ನು ಶಾಲೆಗೆ ಹೆಗಲ ಮೇಲೆ ಕೂರಿಸಿ ಕರೆದೊಯ್ಯಬೇಕು. ಅನಾರೋಗ್ಯವಾದರೆ ಜೋಲಿ ಕಟ್ಟಿ ಕಾಡುದಾರಿಯಲ್ಲಿ ಹೊತ್ತೊಯ್ಯಬೇಕು. ಮೊಬೈಲ್ ನೆಟ್‌ವರ್ಕ್ ಕೂಡ ಸರಿಯಾಗಿ ಸಿಗುತ್ತಿಲ್ಲ. ಈ ಪ್ರದೇಶದಲ್ಲಿ ಚಿರತೆ, ಕರಡಿಗಳ ಸಂಖ್ಯೆ ಹೆಚ್ಚಿದ್ದು ಸಂಜೆ ಬಳಿಕ ಮನೆಯಿಂದ ಹೊರ ಬರುವುದೂ ಅಪಾಯ ಎನ್ನುತ್ತಾರೆ ಇಲ್ಲಿನ ನಿವಾಸಿ ಸುಂದರ ಗೌಡ.

ದಟ್ಟಡವಿಯೊಳಗೆ ದಾರಿಯ ಕೂಗು: ಮೂಲನಿವಾಸಿ ಕುಟುಂಬಕ್ಕೆ ಬೇಕಿದೆ ಮಾನವೀಯ ಕಾಳಜಿ
ಮೊರಂಟೆಬೈಲು ಪ್ರದೇಶಕ್ಕೆ ಸಾಗುವ ಕಾನನದ ಹಾದಿ.

ಕತ್ತಲು ನೀಗಿಸಲು ಸಾಧ್ಯವಾಗಿಲ್ಲ

ಕಾರ್ಕಳ ತಾಲೂಕಿನ ರೆಂಜಾಳ, ಈದು ಗ್ರಾಪಂನ ನೂರಾಲ್‌ಬೆಟ್ಟು ಕನ್ಯಾಲು, ಹೆಬ್ರಿ ತಾಲೂಕಿನ ಮೊರಂಟೆಬೈಲು, ಪೀತುಬೈಲು, ತಿಂಗಳಮಕ್ಕಿ, ತೆಂಗುಮಾರು, ಕಬ್ಬಿನಾಲೆ ಗ್ರಾಮ ವ್ಯಾಪ್ತಿಯ ಮುಂಡಾಣಿ, ಖಜಾನೆ, ಬಲ್ಲಾಡಿ, ನಾಡ್ಪಾಲು ಗ್ರಾಮ ವ್ಯಾಪ್ತಿಯ ಸುಮಾರು 40,  ದ.ಕ.ಜಿಲ್ಲೆ ಬೆಳ್ತಂಗಡಿ ತಾಲೂಕಿನ ನಾರಾವಿ, ಕುತ್ಲೂರು, ಸುಲ್ಕೇರಿಮೊಗ್ರು, ನಾವರ, ಸವಣಾಲು, ನಾವೂರು, ಮಲವಂತಿಗೆ ಗ್ರಾಮಗಳ ಸುಮಾರು 120 ಮೂಲನಿವಾಸಿ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಇನ್ನೂ ಮರೀಚಿಕೆಯಾಗಿದೆ.

ದಟ್ಟಡವಿಯೊಳಗೆ ದಾರಿಯ ಕೂಗು: ಮೂಲನಿವಾಸಿ ಕುಟುಂಬಕ್ಕೆ ಬೇಕಿದೆ ಮಾನವೀಯ ಕಾಳಜಿ
ಮೊರಂಟೆಬೈಲು ಮಲೆಕುಡಿಯ ಕುಟುಂಬದ ಮನೆ.

ಐದು ವರ್ಷದ ಹಿಂದೆ ಸೋಲಾರ್ ಅಳವಡಿಸಲಾಗಿದ್ದರೂ, ಬಹುತೇಕ ಸಂದರ್ಭ ಅದು ಚಾರ್ಜ್ ಆಗುವುದಿಲ್ಲ. ಈಗ ಒಂದು ಬಲ್ಬ್ ಕೂಡ ಉರಿಯುತ್ತಿಲ್ಲ. ಬ್ಯಾಟರಿ ಹಾಗೂ ಇತರ ಉಪಕರಣ ಪದೇಪದೆ ದುರಸ್ತಿಗೆ ಬರುತ್ತದೆ. ಚಿಮಿಣಿ ಬೆಳಕಿನಲ್ಲಿ ದಿನ ಕಳೆಯುತ್ತಿದ್ದೇವೆ. ನಮ್ಮ ಮನವಿಗೆ ಬೆಲೆ ಇಲ್ಲ ಎನ್ನುತ್ತಾರೆ ಮೊರಂಟೆಬೈಲು ನಿವಾಸಿ ಭಾರತಿ.

ದಟ್ಟಡವಿಯೊಳಗೆ ದಾರಿಯ ಕೂಗು: ಮೂಲನಿವಾಸಿ ಕುಟುಂಬಕ್ಕೆ ಬೇಕಿದೆ ಮಾನವೀಯ ಕಾಳಜಿ
ಅರಣ್ಯ ಇಲಾಖೆ ನಿರ್ಮಿಸಿರುವ ಗಲ್ಲಿಚೆಕ್ಸ್.

ಪುನರ್ವಸತಿಗೂ ಇದೆ ತೊಡಕು

ಅತಿಕ್ರಮಿತ ಕೃಷಿ ಭೂಮಿ ಸಹಿತ ಪಟ್ಟಾ ಭೂಮಿಯನ್ನು ಕುದುರೆಮುಖ ರಾಷ್ಟ್ರೀಯ ಉದ್ಯಾನಕ್ಕೆ ವರ್ಗಾಯಿಸಲು ಒಪ್ಪಿಗೆ ಸೂಚಿಸಿ ಅರ್ಜಿ ಸಲ್ಲಿಸಿದ ದ.ಕ. ಜಿಲ್ಲೆಯ ಸಿಂಗನಾರು, ಪರ್ಲ, ಮಕ್ಕಿ, ಎಲ್ಯರಕಂಡ ವ್ಯಾಪ್ತಿಯ 32 ಕುಟುಂಬಗಳಿಗೆ ಈವರೆಗೂ ಪುನರ್ವಸತಿ ವ್ಯವಸ್ಥೆ ಆಗಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಕಾರಣ ಎನ್ನಲಾಗಿದ್ದು, ಇದರಿಂದ ಇನ್ನುಳಿದ ಕುಟುಂಬಗಳೂ ಆತಂಕಗೊಂಡಿವೆ. ಈಗ ಇರುವ ಪುನರ್ವಸತಿ ಪರಿಹಾರ ಅವೈಜ್ಞಾನಿಕ. 10 ಲಕ್ಷ ರೂ.ನಲ್ಲಿ ಮರಳಿ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಇದನ್ನು ಮರು ಪರಿಷ್ಕರಿಸಬೇಕು. ಕನಿಷ್ಠ 20-25 ಲಕ್ಷ ರೂ.ಆದರೂ ಸಿಗಬೇಕು ಎನ್ನುತ್ತಾರೆ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸಂಚಾಲಕ ಶೇಖರ್ ಲಾಲ.

ದಟ್ಟಡವಿಯೊಳಗೆ ದಾರಿಯ ಕೂಗು: ಮೂಲನಿವಾಸಿ ಕುಟುಂಬಕ್ಕೆ ಬೇಕಿದೆ ಮಾನವೀಯ ಕಾಳಜಿ
ಮನೆಗಳಿಗೆ ಅಳವಡಿಸಿರುವ ಸೋಲಾರ್ ಪ್ಯಾನೆಲ್.
ದಟ್ಟಡವಿಯೊಳಗೆ ದಾರಿಯ ಕೂಗು: ಮೂಲನಿವಾಸಿ ಕುಟುಂಬಕ್ಕೆ ಬೇಕಿದೆ ಮಾನವೀಯ ಕಾಳಜಿ
ಅನಾರೋಗ್ಯಕ್ಕೊಳಗಾದ ಬಾಲಕಿ ವಾಸವಾಗಿರುವ ಬಿಡಾರ.
ದಟ್ಟಡವಿಯೊಳಗೆ ದಾರಿಯ ಕೂಗು: ಮೂಲನಿವಾಸಿ ಕುಟುಂಬಕ್ಕೆ ಬೇಕಿದೆ ಮಾನವೀಯ ಕಾಳಜಿ
ಅಂಡಾರು ರಕ್ಷಿತಾರಣ್ಯ.

ನಮಗೆ ಈವರೆಗೆ ಸರ್ಕಾರದ ಸೌಲಭ್ಯ ದೊರೆತಿಲ್ಲ. ತಲೆತಲಾಂತರದಿಂದ ಬದುಕಿದ ಭೂಮಿಯ ನಂಟನ್ನು ಕಳೆದುಕೊಂಡು ಬಂದರೆ ಮುಂದೇನು ಎಂಬ ಚಿಂತೆ ಕಾಡುತ್ತಿದೆ. ರಸ್ತೆ ಆದರೆ ಬಹಳಷ್ಟು ಉಪಕಾರ.
– ರಾಜು ಗೌಡ, ಮೊರಂಟೆಬೈಲು ನಿವಾಸಿ

ಮೊರಂಟೆಬೈಲು ನಿವಾಸಿಗಳ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿ ಸಭೆಯಲ್ಲೂ ಚರ್ಚಿಸಿದ್ದೇನೆ. ಪ್ಯಾಟ್ರೋಲಿಂಗ್ ಪಾಥ್‌ನಲ್ಲಿ ಮೋಟರಿಂಗ್ ರೋಡ್ ಮಾಡಿಕೊಡುವ ಭರವಸೆ ನೀಡಿದ್ದೇನೆ. ಶೀಘ್ರದಲ್ಲೇ ಕಾರ್ಯಪ್ರವೃತ್ತರಾಗುತ್ತೇವೆ.
ಶಿವರಾಂಬಾಬು
– ನಿರ್ದೇಶಕ, ಕುದುರೆಮುಖ ರಾಷ್ಟ್ರೀಯ ಉದ್ಯಾನ

ಕಾರ್ಕಳ ಹಾಗೂ ಬೆಳ್ತಂಗಡಿ ತಾಲೂಕಿನ ಅರಣ್ಯದಂಚಿನ ಆದಿವಾಸಿ ಕುಟುಂಬಗಳಿಗೆ ವಿದ್ಯುತ್ ಹಾಗೂ ಪುನರ್ವಸತಿ ಸೌಲಭ್ಯ ಕಲ್ಪಿಸುವ ಕುರಿತು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಭೆ ನಡೆದಿದೆ. ಸೂಕ್ತ ಅನುದಾನ ಮಂಜೂರು ಮಾಡಿ ಯೋಜನೆ ರೂಪಿಸಲಾಗುವುದು.
– ಈಶ್ವರ ಖಂಡ್ರೆ, ಅರಣ್ಯ ಸಚಿವ

28ರಿಂದ ಆದಿಲಿಂಗೇಶ್ವರ ಕ್ಷೇತ್ರ ಉತ್ಸವ

https://www.vijayavani.net/minister-eshwar-khandre-visits-kulkunda-temple

Share This Article

ಹೊಕ್ಕುಳಿದೆ ಪ್ರತಿನಿತ್ಯ ಸಾಸಿವೆ ಎಣ್ಣೆ ಹಚ್ಚಿ! ಹೀಗೆ ಮಾಡುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ? Navel Oiling

Navel Oiling: ಸಾಸಿವೆ ಎಣ್ಣೆಯಲ್ಲಿ ಕಂಡುಬರುವ ಎಲ್ಲಾ ಅಂಶಗಳು ನಿಮ್ಮ ಆರೋಗ್ಯಕ್ಕೆ ವರದಾನವಾಗಿದೆ. ನೀವು ಸಾಸಿವೆ…

ವಿಪರೀತ ಬೆನ್ನು ನೋವು ಇದೆಯಾ? ಮಲಗುವಾಗ ನೀವಿದನ್ನು ಮಾಡಿದ್ರೆ ಸಾಕು ಉತ್ತಮ ಪರಿಹಾರ ಸಿಗುತ್ತೆ! Back Pain

Back Pain : ಬೆನ್ನುನೋವು ಅಥವಾ ಬೆನ್ನುಮೂಳೆಯಲ್ಲಿ ನೋವು ಇದ್ದರೆ, ನೀವು ಕೆಲವು ಆಸನಗಳನ್ನು ಮಾಡಿದರೆ…

ಹುಡುಗಿಯರೇ.. ಬೇಸಿಗೆಯಲ್ಲಿ ಸುಂದರವಾಗಿ ಕಾಣಬೇಕಾದರೆ ಈ ತಪ್ಪುಗಳನ್ನು ಮಾಡಬೇಡಿ! Beauty Tips

Beauty Tips: ಬೇಸಿಗೆ ಸಮೀಪಿಸುತ್ತಿರುವುದರಿಂದ, ಅನೇಕ ಜನರು ತಮ್ಮ ಚರ್ಮವನ್ನು ರಕ್ಷಿಸಲು ಹೆಣಗಾಡುತ್ತಿದ್ದಾರೆ. ಹುಡುಗಿಯರು ಹೊರಗೆ…