

ಬೆಳಗಾವಿ: ನಾನು ಆಸ್ಪತ್ರೆಯಲ್ಲಿ ತಪಾಸಣೆಗೆ ಸಹಕಾರ ನೀಡುತ್ತಿದ್ದೇನೆ, ಯಾವುದೇ ಕಿರಿಕ್ ಮಾಡುತ್ತಿಲ್ಲ. ಬಿಸಿನೀರಿಗಾಗಿ ಬೇಡುತ್ತಿಲ್ಲ, ಬಿರಿಯಾನಿಗೂ ಬೇಡಿಕೆ ಇಟ್ಟಿಲ್ಲ. ನೀರು, ಸೋಪು, ಟವಲ್, ಟೂಥ್ ಪೇಸ್ಟ್ ಸೇರಿದಂತೆ ಜನಸಾಮಾನ್ಯರಿಗೆ ಏನು ಮೂಲಸವಲತ್ತು ಬೇಕೋ ಅದನ್ನು ಕೇಳುತ್ತಿದ್ದೇನೆಯೇ ಹೊರತು ಯಾವುದೇ 5 ಸ್ಟಾರ್ ಹೋಟೆಲ್ನ ಸವಲತ್ತುಗಳನ್ನು ಕೇಳುತ್ತಿಲ್ಲ ಎಂದು ಕಾಂಗ್ರೆಸ್ನ ಯುವ ನಾಯಕಿ ನವ್ಯಶ್ರೀ ಸ್ಪಷ್ಟಪಡಿಸಿದ್ದಾರೆ.
ತೋಟಗಾರಿಕೆ ಇಲಾಖೆ ಅಧಿಕಾರಿ ರಾಜಕುಮಾರ ಟಾಕಳೆ ವಿರುದ್ಧ ಅತ್ಯಾಚಾರ ಕೇಸ್ ದಾಖಲಿಸಿರುವ ನವ್ಯಶ್ರೀ, ವೈದ್ಯಕೀಯ ತಪಾಸಣೆಗೆ ಸಹಕಾರ ನೀಡದೆ ಕಿರಿಕ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈ ಕುರಿತು ನವ್ಯಶ್ರೀ ಸ್ಪಷ್ಟನೆ ನೀಡಿದ್ದಾರೆ.
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಕಾಂಗ್ರೆಸ್ ಮುಖಂಡೆ ನವ್ಯಶ್ರೀ ರಾಮಚಂದ್ರರಾವ್ ಮತ್ತು ಈಕೆಯ ಆಪ್ತ ತಿಲಕ್ ರಾಜ್ ವಿರುದ್ಧ ತೋಟಗಾರಿಕೆ ಇಲಾಖೆ ಅಧಿಕಾರಿ ರಾಜಕುಮಾರ ಟಾಕಳೆ ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ಜು.18ರ ತಡರಾತ್ರಿ ಎಫ್ಐಆರ್ ದಾಖಲಿಸಿದ್ದರು. ‘2020ರಲ್ಲಿ ಬೆಂಗಳೂರಲ್ಲಿ ನನಗೆ ನವ್ಯಶ್ರೀ ಪರಿಚಯವಾದರು. ಇಬ್ಬರ ನಡುವೆ ಸಲುಗೆ ಬೆಳೆದಿತ್ತು. ನನಗೆ ಮದ್ವೆ ಆಗಿ ಮೂವರು ಮಕ್ಕಳಿದ್ದಾರೆ ಎಂಬುದು ಆಕೆಗೆ ಗೊತ್ತಿದ್ದರೂ ಪ್ರೀತಿ ಪ್ರೇಮ ಅಂದಳು. ನಮ್ಮಿಬ್ಬರ ನಡುವೆ ದೈಹಿಕ ಸಂಬಂಧವೂ ಬೆಳೆದಿತ್ತು. ನನ್ನೊಂದಿಗೆ ಚೆನ್ನಾಗಿಯೇ ಇದ್ದಳು. ಇದ್ದಕ್ಕಿದ್ದಂತೆ ಖಾಸಗಿ ಕ್ಷಣದ ವಿಡಿಯೋ ಚಿತ್ರೀಕರಿಸಿಕೊಂಡು ನವ್ಯಶ್ರೀ ಮತ್ತು ಈಕೆಯ ಆಪ್ತ ತಿಲಕ್ ಇಬ್ಬರೂ ನನ್ನ ಬಳಿ ಹಣಕ್ಕಾಗಿ ಡಿಮಾಂಡ್ ಇಟ್ಟರು. 50 ಲಕ್ಷ ರೂ. ಕೊಡಬೇಕು. ಇಲ್ಲವಾದಲ್ಲಿ ವಿಡಿಯೋವನ್ನು ನಿನ್ನ ಹೆಂಡ್ತಿಗೆ ಕಳುಹಿಸುವೆ ಎಂದು ಬೆದರಿಕೆ ಹಾಕಿದ್ದಾರೆ. ಮಾನಸಿಕ ಚಿತ್ರಹಿಂಸೆ ನೀಡಿದ್ದಾರೆ. ಸುಳ್ಳು ಕೇಸ್ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಹೇಳುತ್ತಿದ್ದಾರೆ. ದಯವಿಟ್ಟು ನನಗೆ ರಕ್ಷಣೆ ಕೊಡಿ’ ಎಂದು ದೂರಿನಲ್ಲಿ ವಿವರಿಸಿದ್ದರು.
ಇದಾದ ಬಳಿಕ ಪ್ರತಿಕ್ರಿಯಿಸಿದ್ದ ನವ್ಯಶ್ರೀ, 'ರಾಜಕುಮಾರ ಟಾಕಳೆ ನನ್ನ ಗಂಡ. ನಮ್ಮಿಬ್ಬರಿಗೂ ಮದುವೆಯಾಗಿದೆ. ನಾನು ಹಣಕ್ಕಾಗಿ ಬೇಡಿಕೆ ಇಟ್ಟಿಲ್ಲ. ನನಗೆ ಅನ್ಯಾಯ ಆಗಿದೆ. ಗಂಡ-ಹೆಂಡತಿ ನಡುವಿನ ಖಾಸಗಿ ದೃಶ್ಯವನ್ನ ವೈರಲ್ ಮಾಡಿ ಮರ್ಯಾದೆ ತೆಗೆದಿದ್ದಾರೆ...' ಎಂದು ನವ್ಯಶ್ರೀ ಪ್ರತಿ ದೂರು ದಾಖಲಿಸಿದ್ದರು. ಎಪಿಎಂಸಿ ಪೊಲೀಸರ ಸೂಚನೆ ಮೇರೆಗೆ ಬೆಳಗಾವಿ ಭೀಮ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಹಾಜರಾಗಿದ್ದ ನವ್ಯಶ್ರೀ, ಆಸ್ಪತ್ರೆಯಲ್ಲಿ ಬಿಸಿ ನೀರಿಲ್ಲ, ಊಟದ ವ್ಯವಸ್ಥೆ ಸರಿಯಾಗಿಲ್ಲ ಎಂದು ತಗಾದೆ ತೆಗೆಯುವ ಜತೆ ವೈದ್ಯಕೀಯ ಪರೀಕ್ಷೆಗೂ ವೈದ್ಯರ ಜತೆ ಸಹಕರಿಸುತ್ತಿಲ್ಲ ಎಂಬ ಸುದ್ದಿ ಹರಿದಾಡಿತ್ತು. ಈ ಸಂಬಂಧ ಸ್ಪಷ್ಟನೆ ನೀಡಿರುವ ನವ್ಯಶ್ರೀ, ವೈದ್ಯಕೀಯ ಪರೀಕ್ಷೆಗೆ ಸಹಕಾರ ನೀಡುತ್ತಿದ್ದೇನೆ. ನಾನು ಕನಿಷ್ಠ ಸೌಲಭ್ಯ ಕೊಡಿ ಎಂದಿದ್ದೇನೆ ಅಷ್ಟೇ. ಬಿರಿಯಾನಿ ಬಗ್ಗೆ ಪ್ರಸ್ತಾಪಿಸಿಯೇ ಇಲ್ಲ. ಫಲಾವ್ ತಿಂದಿದ್ದೇನೆ ಎಂದರು.