ಚಿರು ಪುತ್ರನಿಗೆ ಹುಟ್ಟುಹಬ್ಬದ ಸಂಭ್ರಮ: ಮಗನೇ ನೀನೇ ನನ್ನ ಪ್ರಪಂಚ, ಐ ಲವ್​ ಯೂ ಕಂದ... ಎಂದು ಬರೆದ ಮೇಘನಾ

chiru meghana
Published on

ಬೆಂಗಳೂರು: ಸ್ಯಾಂಡಲ್​ವುಡ್​ ನಟ ದಿ. ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್​ ಅವರ ಪುತ್ರ ರಾಯನ್​ ರಾಜ್​ ಸರ್ಜಾನಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.

2020ರ ಅಕ್ಟೋಬರ್​ 22ರಂದು ಬೆಳಗ್ಗೆ 11 ಗಂಟೆ 7 ನಿಮಿಷಕ್ಕೆ ಜನಿಸಿದ್ದ ರಾಯನ್​ ರಾಜ್​ ಸರ್ಜಾಗೆ ಒಂದು ವರ್ಷ ತುಂಬಿದೆ. 2017ರ ಅಕ್ಟೋಬರ್ 22ರಂದು ಚಿರು ಮತ್ತು ಮೇಘನಾರ ಮದುವೆ ನಿಶ್ಚಿತಾರ್ಥ ನಡೆದಿತ್ತು. ಅಪ್ಪ-ಅಮ್ಮನ ನಿಶ್ಚಿತಾರ್ಥದ ದಿನವೇ ಜೂನಿಯರ್ ಚಿರು ಆಗಮಿಸಿದ್ದು, ಸರ್ಜಾ ಮತ್ತು ಸುದರ್​ ರಾಜ್​ ಕುಟುಂಬದಲ್ಲಿ ಖುಷಿಯ ಹೂರಣ ಉಣಬಡಿಸುತ್ತಿದ್ದಾರೆ.

ಮಗನ ಹುಟ್ಟುಹಬ್ಬ ಸುಸಂದರ್ಭದಲ್ಲಿ ಮಗನೊಂದಿಗೆ ತಾನಿರುವ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿರುವ ಮೇಘನಾ, 'ನಮ್ಮ ಮಗು, ನಮ್ಮ ಪ್ರಪಂಚ, ನಮ್ಮ ಜಗತ್ತು, ನಮ್ಮ ಸರ್ವಸ್ವ! ಚಿರು... ನಮ್ಮ ರಾಜಕುಮಾರನಿಗೆ ಈಗ ಒಂದು ವರ್ಷ... ಮಗನೇ ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ಪ್ರತಿಕ್ಷಣವೂ ಈ ನಿನ್ನ ಅಮ್ಮನ ಪ್ರೀತಿಯ ಅಪ್ಪುಗೆಯಲ್ಲೇ ಇರಬೇಕು ಎಂದು ಬಯಸುವೆ. ಹ್ಯಾಪಿ ಬರ್ತ್​ ಡೇ ರಾಯಣ್ಣ... ಅಪ್ಪ-ಅಮ್ಮನ ಪ್ರೀತಿ ಸದಾ ನಿನ್ನನ್ನು ಕಾಯಲಿದೆ. ಐ ಲವ್​ ಯೂ ಕಂದ' ಎಂದು ಬರೆದುಕೊಂಡಿದ್ದಾರೆ.

ಚಿರು ಮತ್ತು ಮೇಘನಾ ಇಬ್ಬರೂ 2018ರಲ್ಲಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾಗಿ ಎರಡೇ ವರ್ಷಕ್ಕೆ ಅಂದರೆ 2020ರ ಜೂನ್​ 7ರಂದು ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನರಾಗಿದ್ದರು. ಅಂದಿನಿಂದ ದುಃಖದ ಮಡುವಿನಲ್ಲೇ ಇದ್ದ ಎರಡೂ ಕುಟುಂಬಕ್ಕೀಗ ಜೂ.ಚಿರು ಖುಷಿಯ ಬುತ್ತಿ ತಂದಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net