ಹಾವೇರಿಯಲ್ಲಿ ಭೀಕರ ಅಪಘಾತ: ಜಮೀನಿನಲ್ಲಿ ಆಟವಾಡುತ್ತಿದ್ದ ಇಬ್ಬರು ಮಕ್ಕಳು, ಕಾರಲ್ಲಿದ್ದ ಶಿಕ್ಷಕ ದುರ್ಮರಣ

accident
Published on

ಹಾವೇರಿ: ಹಿರೇಕೆರೂರು ತಾಲೂಕಿನ ಸುತ್ತಕೋಟಿ ಗ್ರಾಮದ ಬಳಿ ಇಂದು(ಮಂಗಳವಾರ) ಬೆಳ್ಳಂಬೆಳಗ್ಗೆ ಭೀಕರ ಅಪಘಾತ ಸಂಭವಿಸಿದ್ದು, ಶಿಕ್ಷಕ ಮತ್ತು ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ.

ರಾಣೇಬೆನ್ನೂರು ನಗರದ ನಿವಾಸಿ, ಶಿಕ್ಷಕ ಜಯಪ್ರಕಾಶ್​(48) ಹಾಗೂ ಹಿರೇಕೆರೂರು ತಾಲೂಕಿನ ಸುತ್ತಕೋಟಿ ಗ್ರಾಮದ ಶಾಲಿನಿ(8) ಮತ್ತು ಯಶೋದಾ(8) ಮೃತ ದುರ್ದೈವಿಗಳು. ಜಯಪ್ರಕಾಶ್​ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದರು. ಮಕ್ಕಳಾದ ಶಾಲಿನಿ ಮತ್ತು ಯಶೋದಾ ಇಬ್ಬರೂ ಸುತ್ತಕೋಟಿ ಗ್ರಾಮದ ರಸ್ತೆಬದಿಯ ಜಮೀನೊಂದರಲ್ಲಿ ಆಟವಾಡುತ್ತಾ ಕೂತಿದ್ದರು. ಜವರಾಯನಂತೆ ಬಂದ ಕಾರು, ಏನೂ ಅರಿಯದ ಮಕ್ಕಳ ಮೇಲೆ ಹರಿದು ಪ್ರಾಣ ತೆಗೆದಿದೆ. ಕಾರಿನಲ್ಲಿದ್ದ ಶಿಕ್ಷಕರೂ ದುರಂತ ಅಂತ್ಯ ಕಂಡಿದ್ದಾರೆ.

ಸುತ್ತಕೋಟಿ ಗ್ರಾಮದ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಜಮೀನಿನತ್ತ ನುಗ್ಗಿದೆ, ಅಲ್ಲೇ ಆಟವಾಡುತ್ತಿದ್ದ ಮಕ್ಕಳ ಮೇಲೆ ಹರಿದು, ಮರಕ್ಕೆ ಹೋಗಿ ಡಿಕ್ಕಿ ಹೊಡೆದಿದೆ. ಮರಕ್ಕೆ ಕಾರು ಡಿಕ್ಕಿಯಾದ ರಭಸಕ್ಕೆ ಗಂಭೀರ ಗಾಯಗೊಂಡ ಶಿಕ್ಷಕ ಸ್ಥಳದಲ್ಲೇ ಮೃತಪಟ್ಟರು. ಅತ್ತ ಗಂಭೀರ ಗಾಯಗೊಂಡು ಸಾವು-ಬದುಕಿನ ನಡುವೆ ನರಳಾಡುತ್ತಿದ್ದ ಮಕ್ಕಳನ್ನು ಗ್ರಾಮಸ್ಥರು ತಕ್ಷಣ ಹಿರೇಕೆರೂರು ತಾಲೂಕು ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದರಾದರೂ ಮಕ್ಕಳು ಬದುಕಲಿಲ್ಲ.

ಸ್ಥಳಕ್ಕೆ ಭೇಟಿ ನೀಡಿದ ಹಂಸಭಾವಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬೆಳಗ್ಗೆ ಎದ್ದ ಕೂಡಲೇ ತಮ್ಮ ಪಾಡಿಗೆ ಆಟವಾಡಿಕೊಂಡಿದ್ದ ಮಕ್ಕಳ ಸಾವನ್ನು ಕಂಡ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net