

ಲಂಡನ್: ಲಂಡನ್‌ನಲ್ಲಿರುವ ಖ್ಯಾತ ಅಂತಾರಾಷ್ಟ್ರೀಯ ಹರಾಜು ಸಂಸ್ಥೆ ಸೋಥೆಬಿಸ್ ಆಯೋಜಿಸಿದ್ದ ಹರಾಜಿನಲ್ಲಿ ವಿಸ್ಕಿ ಬಾಟಲಿಯೊಂದು ಅತ್ಯಧಿಕ ಬೆಲೆಗೆ ಮಾರಾಟವಾಗಿದೆ. ಸುಮಾರು 97 ವರ್ಷಗಳ ಹಿಂದೆ ಮಕಲನ್ ಕಂಪನಿ ತಯಾರಿಸಿದ್ದ ಸಿಂಗಲ್ ಮಾಲ್ಟ್ ವಿಸ್ಕಿ ಹರಾಜಿನಲ್ಲಿ 22.5 ಕೋಟಿ ರೂ.ಗೆ ಮಾರಾಟವಾಗಿ ದಾಖಲೆ ಸೃಷ್ಟಿಸಿದೆ. ಹೌದು, ಮಕಲನ್ ಬ್ರಾಂಡ್ ನ ಪ್ರೀಮಿಯಂ ಸ್ಕಾಚ್ ಬಾಟಲ್ ಅತ್ಯಧಿಕ ಬೆಲೆಗೆ ಮಾರಾಟವಾಗುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ನವೆಂಬರ್ 18 (ಶನಿವಾರ)ರಂದು ನಡೆದ ಹರಾಜಿನಲ್ಲಿ ತಜ್ಞರು ಈ ವಿಸ್ಕಿ ಬಾಟಲಿಯ ಬೆಲೆ 12 ಕೋಟಿ ರೂಪಾಯಿ ಎಂದು ಅಂದಾಜಿಸಿದ್ದರು. ಆದರೆ ಈ ಪುರಾತನ ಬಾಟಲಿಯ ವಿಸ್ಕಿಯ ಬೆಲೆ ರೂ. 22.5 ಕೋಟಿಗೆ ಮಾರಾಟವಾಗಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಇದು ವಿಶ್ವದ ಅತ್ಯಂತ ದುಬಾರಿ ವಿಸ್ಕಿ ಎಂಬ ಹೊಸ ದಾಖಲೆಯನ್ನು ಸೃಷ್ಟಿಸಿದೆ. ಆದರೆ 2019ರಲ್ಲಿ ಇದೇ ಕಂಪನಿ ತಯಾರಿಸಿದ ವಿಸ್ಕಿಯನ್ನು 15 ಕೋಟಿ ರೂ. ಮಾರಾಟ ಮಾಡಲಾಗಿತ್ತು. ಇದೀಗ ಈ ಹರಾಜಿನಲ್ಲಿಯೂ ಮಕಲನ್ ಕಂಪನಿಯು ಪುನಃ ದಾಖಲೆಯನ್ನು ಬರೆದಿದೆ.
ಮಕಲನ್ ಕಂಪನಿಯು 1926 ರಲ್ಲಿ ಈ ವಿಸ್ಕಿಯನ್ನು ತಯಾರಿಸಿತು. ಕಂಪನಿಯು ಇಂತಹ 40 ಬಾಟಲಿಗಳನ್ನು ಮಾತ್ರ ಉತ್ಪಾದಿಸಿತು. ಇವುಗಳನ್ನು 1986ರಲ್ಲಿ ಹೊರತರುವ ಮೊದಲು ಡಾರ್ಕ್ ಓಕ್ವುಡ್ ಪೆಟ್ಟಿಗೆಗಳಲ್ಲಿ 60 ವರ್ಷಗಳ ಕಾಲ ಒಟ್ಟಿಗೆ ಸಂಗ್ರಹಿಸಲಾಗಿತ್ತು. ಈ ಬಾಟಲಿಗಳಲ್ಲಿ ಕೆಲವು ಮಕಲನ್‌ಗೆ ಭೇಟಿ ನೀಡುವ ವಿಐಪಿ ಗ್ರಾಹಕರಿಗೆ ಮಾತ್ರ ಲಭ್ಯವಾಗುವಂತೆ ಮಾಡಲಾಗಿತ್ತು.