

ಬೆಂಗಳೂರು: ಸುಮಾರು 40 ಮಂದಿ ಪ್ರಯಾಣಿಸುತ್ತಿದ್ದ ಬಿಎಂಟಿಸಿ ಬಸ್ವೊಂದು ನಡುರಸ್ತೆಯಲ್ಲೇ ಹೊತ್ತಿ ಉರಿದ ಘಟನೆ ಕೆ.ಆರ್.ಮಾರುಕಟ್ಟೆ ಸಮೀಪದ ಚಾಮರಾಜಪೇಟೆಯ ಮಕ್ಕಳಕೂಟ ಬಳಿ ಸಂಭವಿಸಿದೆ.
ದೀಪಾಂಜಲಿನಗರ ಡಿಪೋಗೆ ಸೇರಿದ KA57 F1592 ನಂಬರ್ನ ಬಸ್ ಹೊಸಕೆರೆಹಳ್ಳಿಯಿಂದ ಕೆ.ಆರ್.ಮಾರುಕಟ್ಟೆಗೆ ಸಂಚರಿಸುತ್ತಿತ್ತು. ಚಾಮರಾಜಪೇಟೆಯ ಮಕ್ಕಳಕೂಟ ಬಳಿ ಬಸ್ ಬರುತ್ತಿದ್ದಂತೆ ಇಂಜಿನಿಂದ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ.. ಬೆಂಕಿ... ಎಂದು ಡ್ರೈವರ್ ಕೂಗಿದರು. ಕೂಡಲೇ ಬಸ್ ನಿಲ್ಲಿಸಿ ಡ್ರೈವರ್ ಮತ್ತು ಕಂಡಕ್ಟರ್ ಇಬ್ಬರೂ ಕೆಳಗಿಳಿದು, ಪ್ರಯಾಣಿಕರಿಗೆ ಕೆಳಗೆ ಇಳಿಯಲು ನೆರವಾದರು. ನೋಡನೋಡುತ್ತಿದ್ದಂತೆ ಬಸ್ನಲ್ಲಿ ಬೆಂಕಿಯ ಜ್ವಾಲೆ ವ್ಯಾಪಸಿತ್ತು. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದೆ. ಪ್ರಯಾಣಿಕರಿಗೆ ಬೇರೆ ಬಸ್ ವ್ಯವಸ್ಥೆ ಮಾಡಿ ಕಳುಹಿಸಲಾಯಿತು. ಸ್ಥಳದಲ್ಲಿ ಕೆಲ ಹೊತ್ತು ಆತಂಕಕಾರಿ ವಾತಾವಾರಣ ನಿರ್ಮಾಣವಾಗಿತ್ತು.