

| ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು
ಜಗತ್ತು ವೈರ್ಲೆಸ್ ಯುಗವಾಗಿ ಪರಿವರ್ತನೆ ಆಗುತ್ತಿದೆ. ಲ್ಯಾಪ್ಟಾಪ್, ಮೊಬೈಲ್, ಸ್ಮಾರ್ಟ್ ಟಿವಿ, ಸ್ಮಾರ್ಟ್ ವಾಚ್, ಟ್ಯಾಬ್ ಹೀಗೆ ಒಂದರಿಂದ ಮತ್ತೊಂದು ಎಲೆಕ್ಟ್ರಾನಿಕ್ ಉಪಕರಣಕ್ಕೆ ಕನೆಕ್ಟ್ಗೆ ವೈಯರ್ ಬದಲು ಬ್ಲೂಟೂತ್ ಹೆಚ್ಚಾಗಿ ಬಳಸಲಾಗುತ್ತಿದೆ.
ಈ ಬ್ಲೂಟೂತ್ ಮೂಲಕ ಸೈಬರ್ ಕಳ್ಳರು ನಡೆಸುವ ದಾಳಿಗೆ ಬ್ಲೂಜಾಕಿಂಗ್ ಮತ್ತು ಬ್ಲೂಸ್ನಾರ್ಫಿಂಗ್ ಎನ್ನುತ್ತಾರೆ. ಅದಕ್ಕಾಗಿ ಸದಾಕಾಲ ಹ್ಯಾಕರ್ಸ್ ಸಕ್ರಿಯವಾಗಿರುತ್ತಾರೆ. ಸ್ವಲ್ಪ ಯಾಮಾರಿದರೂ ನಮ್ಮ ಮೊಬೈಲ್ ಅಥವಾ ಲ್ಯಾಪ್ಟಾಪ್ನಲ್ಲಿ ಇರುವ ಡೇಟಾ, ಫೋಟೋ, ಇಮೇಲ್ಗಳು ಕಳವಾಗಿ ಬ್ಯಾಂಕ್ ಖಾತೆಗೆ ಅಥವಾ ಅನಾಹುತುಗಳು ಸಂಭವಿಸುವ ಸಾಧ್ಯತೆ ಹೆಚ್ಚು. ಇಲ್ಲವೇ ನಮ್ಮ ಹೆಸರಿನಲ್ಲಿ ಬೇರೆಯವರಿಗೆ ಬೇನಾಮಿ ಸಂದೇಶ ಕಳುಹಿಸಿ ಸಂಕಷ್ಟಕ್ಕೆ ಸಿಲುಕಿಸುತ್ತಾರೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕೆಂಬುದು ಸೈಬರ್ ತಜ್ಞರ ಸಲಹೆ.
ಮೊಬೈಲ್ನಲ್ಲಿ ಸಂಗೀತ ಕೇಳಲು ಗಂಟುಕಟ್ಟಿರುವ ವೈಯರ್ಗಳನ್ನು ಬಿಡಿಸಿ ಇಯರ್ಫೋನ್ ಮತ್ತು ಹೆಡ್ಫೋನ್ಗಳನ್ನು ಮೊಬೈಲ್ಗೆ ಚುಚ್ಚಿ ಕಿವಿಗೆ ಸಿಕ್ಕಿಸಿಕೊಳ್ಳುವುದು ದೊಡ್ಡ ಸಹಾಸವೇ ಆಗುತ್ತಿತ್ತು. ಅದೇ ರೀತಿ ಲ್ಯಾಪ್ಟಾಪ್ ಮತ್ತು ಫೋನ್ ನಡುವೆ ಫೈಲ್ ವರ್ಗಾವಣೆ ಮಾಡಲು ಹಾಗೂ ಕಾರಿನಲ್ಲಿ ಮೊಬೈಲ್ ಸ್ವೀಕರ್ ಕನೆಕ್ಟ್ ಮಾಡಲು ಕೇಬಲ್ ಅಗತ್ಯವಾಗಿತ್ತು. ತಂತ್ರಜ್ಞಾನ ಬೆಳೆದಂತೆ ಬ್ಲೂಟೂತ್ ಡಿವೈಸ್ ಹೆಚ್ಚು ಬಳಕೆಗೆ ಬಂದಿದೆ. ಬ್ಲೂಟೂತ್ ಸುಲಭ ಮಾರ್ಗವಾಗಿದ್ದು, ಎಚ್ಚರಿಕೆ ವಹಿಸದಿದ್ರೆ ಅಷ್ಟೇ ಅಪಾಯಕಾರಿ.
ಫೋನ್, ಟ್ಯಾಬ್ ಮತ್ತು ಲ್ಯಾಟ್ಟಾಪ್ನಲ್ಲಿ ಇರುವ ಸಂದೇಶ, ಇಮೇಲ್, ಫೋಟೋ ಮತ್ತು ಗೌಪ್ಯ ಮಾಹಿತಿ ಮಾಡಿ ಅವುಗಳನ್ನು ಬಳಸಿಕೊಂಡು ಬ್ಯಾಂಕ್ ಖಾತೆಗೆ ಕನ್ನ ಹಾಕುವ ಎಲ್ಲ ಸಾಧ್ಯತೆಗಳಿವೆ. ಇಲ್ಲವೇ ನಮ್ಮ ಖಾಸಗಿ ಫೋಟೋ ಅಥವಾ ಇಮೇಲ್ಗಳನ್ನು ಅಸ್ತ್ರವಾಗಿ ಮಾಡಿಕೊಂಡು ಹಣ ವಸೂಲಿಗೆ ಬ್ಲ್ಯಾಕ್ಮೇಲ್ ಸಹ ಮಾಡುತ್ತಾರೆ. ಇಂತಹ ಕೃತ್ಯಕ್ಕೆ ಬ್ಲೂಸ್ನಾರ್ಫಿಂಗ್ ಎನ್ನುತ್ತಾರೆ.
ಮತ್ತೊಂದು 'ಬ್ಲೂಜಾಕಿಂಗ್'. ಆನ್ ಆಗಿರುವ ಬ್ಲೂಟೂತ್ ಡಿವೈಸ್ಗೆ ಹ್ಯಾಕರ್ಸ್ಗಳು ಕನೆಕ್ಷನ್ ಮಾಡಿಕೊಂಡು ನಿಮ್ಮ ಫೋನ್ಗೆ ಅಕ್ಸೆಸ್ ಪಡೆದು ಸುತ್ತಮುತ್ತಲಿನ ಇತರ ಡಿವೈಸ್ಗಳಿಗೆ ಅಶ್ಲೀಲ ಅಥವಾ ಬೆದರಿಕೆ ಸಂದೇಶ ಕಳುಹಿಸಬಹುದು. ಇದಕ್ಕೆ ಬ್ಲೂಜಾಕಿಂಗ್ ಎಂದು ಸೈಬರ್ ತಜ್ಞರು ಹೇಳುತ್ತಾರೆ. ಇದಲ್ಲದೆ, ಸಾರ್ವಜನಿಕರ ಡಿವೈಸ್ ಬಳಸಿಕೊಂಡು ಮತ್ತೊಬ್ಬರಿಗೆ ಡೇಟಾ ವರ್ಗಾವಣೆ ಮಾಡುವ ಸಾಧ್ಯತೆಗಳು ಸಹ ಹೆಚ್ಚಾಗಿರುತ್ತದೆ. ಒಂದು ವೇಳೆ ಅನಾಹುತ ಸಂಭವಿಸಿ ಪೊಲೀಸ್ ಕೇಸ್ ದಾಖಲಾದರೇ ಸೈಬರ್ ಕಳ್ಳರು ಯಾರ ಬ್ಲೂಟೂತ್ ಬಳಸಿಕೊಂಡಿರುತ್ತಾರೋ ಅವರೇ ಆರೋಪಿ ಸ್ಥಾನದಲ್ಲಿ ನಿಲ್ಲಬೇಕಾಗುವ ಸಂಕಷ್ಟ ಎದುರಾಗುತ್ತದೆ. ಅದಕ್ಕಾಗಿ ಬ್ಲೂಟೂತ್ ಬಳಸುವ ಮೊದಲು ಕೆಲ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲವಾದರೆ, ಅಪಾಯ ತಪ್ಪಿದ್ದಲ್ಲ ಎಂದು ಸಿಐಡಿ ಸೈಬರ್ ಕ್ರೈಂ ವಿಭಾಗದ ಅಧಿಕಾರಿಗಳು ಕಿವಿ ಮಾತು ಹೇಳಿದ್ದಾರೆ.