

ಚಿಕ್ಕಮಗಳೂರು: ಗಂಡನ ಮನೆಯಲ್ಲಿದ್ದ ಹಿರಿಮಗಳಿಗೆ ಬಾಗಿನ ಕೊಟ್ಟು ವಾಪಸ್ ಸ್ವಗ್ರಾಮಕ್ಕೆ ತೆರಳುತ್ತಿದ್ದ ತಂದೆ ಮತ್ತು ಕಿರಿಮಗಳಿಬ್ಬರು ಮಾರ್ಗಮಧ್ಯೆ ದುರಂತ ಅಂತ್ಯಕಂಡಿದ್ದಾರೆ. ತವರಿನಿಂದ ಬಾಗಿನ ಬಂದ ಖುಷಿಗೆ ಕ್ಷಣಾರ್ಧದಲ್ಲೇ ಜವರಾಯ ಕೊಳ್ಳಿ ಇಟ್ಟ ಧಾರುಣ ಘಟನೆ ಗುರುವಾರ ಸಂಭವಿಸಿದೆ.
ಮುಗುಳವಳ್ಳಿ ಮೂಲದ ಜಯಣ್ಣ(58) ಮತ್ತು ರಕ್ಷಿತಾ (19) ಮೃತ ದುರ್ದೈವಿಗಳು. ಗೌರಿಹಬ್ಬದ ಪ್ರಯುಕ್ತ ಜಯಣ್ಣ ಅವರು ತನ್ನ ಕಿರಿಮಗಳ ಜತೆ ಪಿಳ್ಳೇನಹಳ್ಳಿಯಲ್ಲಿದ್ದ ಹಿರಿಮಗಳಿಗೆ ಬಾಗಿನ ಕೊಡಲು ಹೋಗಿದ್ದರು. ಮಗಳಿಗೆ ಬಾಗಿನ ಕೊಟ್ಟು ಇಬ್ಬರೂ ಪಿಳ್ಳೇನಹಳ್ಳಿಯಿಂದ ಮುಗುಳವಳ್ಳಿಗೆ ದ್ವಿಚಕ್ರ ವಾಹನದಲ್ಲಿ ವಾಪಸ್ ಆಗುತ್ತಿದ್ದರು.
ಮಾರ್ಗಮಧ್ಯೆ ಚಿಕ್ಕಮಗಳೂರು ತಾಲೂಕಿನ ಉದ್ದೇಬೋರನಹಳ್ಳಿಯಲ್ಲಿ ದ್ವಿಚಕ್ರ ವಾಹನ ಮತ್ತು ಗ್ಯಾಸ್ ಲಾರಿ ನಡುವೆ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಅಪ್ಪ-ಮಗಳು ಪ್ರಾಣಬಿಟ್ಟಿದ್ದಾರೆ. ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.