

ರಾಯಚೂರು: ಏಪ್ರಿಲ್‌ನಿಂದ ಆಗಸ್ಟ್‌ನೊಳಗೆ ಪಾಪ ಕೈ ಮೀರಿ ಹೋಗ್ತೈತಿ. ಕೈ ಬಳೆ ಒಡೆದಾವು, ಕಣ್ಣೀರು ಉದುರ್ಯಾವು.. ಕೀಟ ನಾಶ ಆದೀತು.. ಗಾಳಿ-ಸುನಾಮೀ ಆದೀತು.. ಏಳಾಣೆ ಮಳೆ, ಎಂಟಾಣೆ ಬೆಳಿ ಬರಲಿದೆ... ಯುರೋಪ ಅಮೆರಿಕ ಇರಾನ್ ರಷ್ಯಾದಲ್ಲಿ ಯುದ್ಧ ಹೆಚ್ಚಲಿದೆ... ನಾ ಮುಂದು-ತಾ ಮುಂದು ಎಂದ ಈ ರಾಷ್ಟ್ರಗಳ ಮಧ್ಯೆ ಅಸೂಯೆ ಕಲಹ ಹೆಚ್ಚಲಿದೆ...
ಇದು ಹೊಳೆ ಬಬಲಾದಿ ಸದಾಶಿವ ಶ್ರೀಮಠದಲ್ಲಿ ಶಿವರಾತ್ರಿ ಹಬ್ಬದ ಮೂರನೇ ದಿನವಾದ ಶುಕ್ರವಾರ ನಡೆದ ಜಾತ್ರೆಯಲ್ಲಿ ಪೀಠಾಧಿಪತಿ ಸಿದ್ರಾಮಯ್ಯ ಹೊಳಿಮಠ ಮುತ್ಯಾ ಅವರು ನುಡಿದ 2022ನೇ ವರ್ಷದ ಕಾಲಜ್ಞಾನ. ಕೈ ಬಳೆ ಒಡೆದಾವು, ಕಣ್ಣೀರು ಉದುರ್ಯಾವು ಎಂಬ ಗೂಡರ್ಥದೊಂದಿಗೆ ಭವಿಷ್ಯ ನುಡಿದಿದ್ದಾರೆ.
ಮುಂಗಾರಿ ಮಳೆಯಾಗಿ ಫಲ ಬರುತ್ತೋ, ಹಿಂಗಾರಿ ಮಧ್ಯಮ ಫಲ ಇರುತ್ತೆ, ಆದ್ರೂ ಬರ ಐತಿ. ಕೆಲವು ಕಡೆ ತಂತ್ರ-ಅತಂತ್ರವಾಗಲಿದೆ. ಜಗತ್ತಿನಲ್ಲಿ ಪಾಪ ಹೆಚ್ಚಾಗಿ ಕಲಿಪುರುಷನ ಆಟ ಭೀಕರವಾಗಲಿದೆ. ಅತೀವೃಷ್ಠಿ-ಅನಾವೃಷ್ಠಿ ಹೆಚ್ಚಾಗಲಿದೆ. ದೇಶದಲ್ಲಿ ಶಾಂತಿ ಸೌಹಾರ್ದತೆ ಕೊರತೆ ಐತೆ. ಪಡುವಣ ದಿಕ್ಕಿಗೆ ತ್ರಾಸ್ ಐತಿ. ಕೀಟ ನಾಶ ಆದೀತು, ಗಾಳಿ-ಸುನಾಮಿ ಆದೀತು. ಏಳಾಣೆ ಮಳೆ, ಎಂಟಾಣೆ ಬೆಳಿ ಬರಲಿದೆ ಎಂದು ಭವಿಷ್ಯ ನುಡಿದರು.
ಕರಾರುವಕ್ಕಾದ ಕಾಲಜ್ಞಾನ: ಶ್ರೀಮಠದಲ್ಲಿ ನುಡಿದ ಕಾಲಜ್ಞಾನದ ನುಡಿಗಳು ನೂರಕ್ಕೆ ನೂರರಷ್ಟು ಸತ್ಯವಾಗುವುದನ್ನು ಕಾಣಬಹುದು. ಈ ಭಾಗದಲ್ಲಿ ಕತ್ತೆ ನಿಂದು ಒದರಿದರೂ ಅದು ಸತ್ಯವಾಗುತ್ತದೆ ಎಂಬ ನಂಬಿಕೆ ಇದೆ. ಇಲ್ಲಿಯ ಭವಿಷ್ಯ ಕೇಳಲು ಉತ್ತರ ಕರ್ನಾಟಕ ಭಾಗದ ಜನರು ಕಾತುರತೆಯಿಂದ ಕಾದಿರುತ್ತಾರೆ. ಕಳೆದ ವರ್ಷ ನುಡಿದ್ದ ಯುದ್ಧದ ಭವಿಷ್ಯಕ್ಕೆ ಸಾಕ್ಷಿಯಾಗಿ ರಷ್ಯಾ-ಉಕ್ರೇನ್ ನಡುವೆ ಭೀಕರ ಕದನ ನಡೆಯುತ್ತಿದೆ. ಚಿಕ್ಕಯ್ಯಪ್ಪನ ಕಾಲಜ್ಞಾನದ ಹೊತ್ತಿಗೆಯಲ್ಲಿರುವ ಭವಿಷ್ಯವನ್ನು ಪೀಠಾಧಿಪತಿಗಳು ಓದಿ ಹೇಳುತ್ತಾರೆ.