ನಟಿ ಪ್ರಣೀತಾಗೆ ಹೆಣ್ಣು ಮಗು: ಅಮ್ಮ-ಮಗಳ ಫೋಟೋ ನೋಡಿ ಖುಷಿಯಾದ ಅಭಿಮಾನಿಗಳು

pranitha
Published on

ಬೆಂಗಳೂರು: ಬಹುಬೇಡಿಕೆಯ, ಬಹುಭಾಷಾ ನಟಿ ಪ್ರಣೀತಾ ಸುಭಾಷ್​ ಹೆಣ್ಣು ಮಗುವಿಗೆ ಜನ್ಮನೀಡಿದ್ದು, ಅಮ್ಮ-ಮಗುವಿನ ಫೋಟೋ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರಣೀತಾ ಅವರೇ ಮಗುವಿನ ಫೋಟೋವನ್ನು ಶೇರ್​ ಮಾಡಿದ್ದು, ನೆಟ್ಟಿಗರು ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಉದ್ಯಮಿ ನಿತಿನ್ ರಾಜು ಜತೆ ನಟಿ ಪ್ರಣೀತಾ ಕಳೆದ ವರ್ಷದ ಸದ್ದಿಲ್ಲದೆ ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದರು. ಆರಂಭದಲ್ಲಿ ಈ ಬಗ್ಗೆ ಸಾರ್ವಜನಿಕವಾಗಿ ನಟಿ ಹೇಳಿಕೆ ಕೊಟ್ಟಿರಲಿಲ್ಲ. ಇದು ವದಂತಿಯೇ? ಅಥವಾ ನಿಜಕ್ಕೂ ಮದುವೆ ಆಗಿದೆಯಾ? ಎಂಬ ಪ್ರಶ್ನೆಗಳು ಸಾರ್ವಜನಿಕವಲಯದಲ್ಲಿ ಮೂಡಿತ್ತು. ಅಷ್ಟರಲ್ಲಿ ಸ್ವತಃ ನಟಿಯೇ ತನ್ನ ಮದುವೆ ಆಗಿದೆ ಎಂದು ಸುದೀರ್ಘ ಪತ್ರ ಬರೆದಿರುವ ಪೋಸ್ಟ್ ಅನ್ನು ಪ್ರಣೀತಾ ದಂಪತಿ ಇನ್​ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿಕೊಂಡಿತ್ತು.

‘2021ರ ಮೇ 30ರಂದು ಅತ್ಯಾಪ್ತರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದೇವೆ. ಈ ಸಂತಸದ ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಮದುವೆಯ ದಿನಾಂಕ ಅರ್ಜೆಂಟಾಗಿ ನಿಗದಿಯಾಯಿತು. ಕರೊನಾ ಹಿನ್ನೆಲೆಯಲ್ಲಿ ಮದುವೆಗೆ ಯಾರನ್ನೂ ಆಮಂತ್ರಿಸಲು ಸಾಧ್ಯವಾಗಲಿಲ್ಲ. ಇದಕ್ಕಾಗಿ ಕ್ಷಮೆ ಇರಲಿ. ಕರೊನಾ ನಿಯಮವನ್ನ ಕಟ್ಟುನಿಟ್ಟಾಗಿ ನಾವೂ ಪಾಲಿಸಬೇಕಿದೆ. ದಯವಿಟ್ಟು ನಮ್ಮನ್ನು ಕ್ಷಮಿಸಿ ಬಿಡಿ’ ಎಂದು ಕೋರಿದ್ದರು.

ಸದಾ ಸಾಮಾಜಿಕ ಜಾಲತಣದಲ್ಲಿ ಸಕ್ರಿಯವಾಗಿರುವ ಪ್ರಣೀತಾ, ಅವರು ಗರ್ಭಿಣಿ ಆದಾಗಲೂ ಈ ಸುದ್ದಿಯನ್ನ ವಿಭಿನ್ನವಾಗಿ ಫೋಟೋಗಳ ಮೂಲಕ ಹಂಚಿಕೊಂಡಿದ್ದರು. ಪತಿ ಜತೆ ಇರುವ ಫೋಟೋಗಳನ್ನ ಇನ್​ಸ್ಟಾಗ್ರಾಂನಲ್ಲಿ ಶೇರ್ ಮಾಡಿ ತಾಯಿ ಆಗುತ್ತಿರುವ ಖುಷಿಯನ್ನು ವ್ಯಕ್ತಪಡಿಸಿದ್ದರು. ಒಂದು ಫೋಟೋದಲ್ಲಿ ಪ್ರಣೀತಾ ಮತ್ತು ನಿತಿನ್​ ಪ್ರಗ್ನೆಂಟ್​ ಕಿಟ್​ ಹಿಡಿದಿದ್ದರೆ, ಇನ್ನೊಂದು ಫೋಟೋದಲ್ಲಿ ಪ್ರಣೀತಾರನ್ನು ನಿತಿನ್​ ಎತ್ತಿಕೊಂಡಿದ್ದು, ಪ್ರಣೀತಾ ಸ್ಕ್ಯಾನ್​ ರಿಪೋರ್ಟ್​ ಅನ್ನು ಕ್ಯಾಮೆರಾಗೆ ಪ್ರದರ್ಶಿಸುವ ಮೂಲಕ ತಾಯಿಯಾಗುತ್ತಿರುವ ವಿಚಾರವನ್ನು ಬಹಿರಂಗಪಡಿಸಿದ್ದರು. ಬಳಿಕ ಬೇಬಿಬಂಪ್​ ಫೋಟೋಶೂಟ್​ ಮಾಡಿಸಿಕೊಂಡ ಫೋಟೋಗಳೂ ವೈರಲ್​ ಆಗಿದ್ದವು. ಇದೀಗ ಮಗುವನ್ನ ಮಡಿಲಲ್ಲಿ ಇಟ್ಟುಕೊಂಡ ಪ್ರಣೀತಾರ ಫೋಟೋ ನೋಡಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ದರ್ಶನ್​ ಅಭಿನಯದ ‘ಪೊರ್ಕಿ’ ಸಿನಿಮಾದ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಪ್ರಣೀತಾ ತೆಲುಗು, ತಮಿಳು ಸಿನಿಮಾಗಳಲ್ಲೂ ಮಿಂಚಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net