ಯೂಕ್ರೇನ್​ನಿಂದ ಸುರಕ್ಷಿತವಾಗಿ ಬೆಂಗ್ಳೂರಿಗೆ ಬಂದ 12 ವಿದ್ಯಾರ್ಥಿಗಳು! ಕುಟುಂಬಸ್ಥರ ಮೊಗದಲ್ಲಿ ಸಂತೋಷ

ukraine karntaka students
Published on

ಬೆಂಗಳೂರು: ಯುದ್ಧಪೀಡಿತ ಯೂಕ್ರೇನ್​ನಿಂದ ಭಾರತೀಯರ ಏರ್​ಲ್ಟಿಫ್ಟ್​​ ಕಾರ್ಯಾಚರಣೆಗೆ ಚಾಲನೆ ಸಿಕ್ಕಿದ್ದು, ಮೊದಲ ತಂಡ ವಿಶೇಷ ವಿಮಾನದ ಮೂಲಕ ಶನಿವಾರ ರಾತ್ರಿ ಮುಂಬೈಗೆ ಬಂದಿಳಿದಿದೆ. ಮತ್ತೊಂದು ವಿಮಾನ ಭಾನುವಾರ ಬೆಳಗ್ಗೆ ದೆಹಲಿ ತಲುಪಿದ್ದು, ಮುಂಬೈಗೆ ಆಗಮಿಸಿರುವ ವಿಮಾನದಲ್ಲಿ 12 ಮಂದಿ ಹಾಗೂ ದೆಹಲಿ ವಿಮಾನದಲ್ಲಿ ಐವರು ಕನ್ನಡಿಗ ವಿದ್ಯಾರ್ಥಿಗಳು ಸುರಕ್ಷಿತವಾಗಿ ಬಂದಿದ್ದಾರೆ. ಈ ಪೈಕಿ ಮುಂಬೈನಿಂದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 12 ವಿದ್ಯಾರ್ಥಿಗಳು ಭಾನುವಾರ ಬೆಳಗ್ಗೆ ಬಂದಿಳಿಯುತ್ತಿದ್ದಂತೆ ಪಾಲಕರು ಮತ್ತು ಸಂಬಂಧಿಕರು ಆನಂದಬಾಷ್ಪ ಸುರಿಸಿದರು. ತಮ್ಮ ಮಕ್ಕಳನ್ನು ತಬ್ಬಿ ಮುದ್ದಾಡುತ್ತಿದ್ದ ದೃಷ್ಯ ಕಂಡು ಬಂತು.

12 ವಿದ್ಯಾರ್ಥಿಗಳನ್ನೂ ವಿಮಾನ ನಿಲ್ದಾಣದಲ್ಲಿ ಸಚಿವ ಆರ್​. ಅಶೋಕ್​ ಸ್ವಾಗತಿಸಿದರು. ಯೂಕ್ರೇನ್​ನಿಂದ ಬೆಂಗಳೂರಿಗೆ ಬಂದ ವಿದ್ಯಾರ್ಥಿನಿ ಇಂಚರಾ ಇದೇ ವೇಳೆ ಸುದ್ದಿಗಾರರ ಜತೆ ಮಾತನಾಡುತ್ತಾ, ಸಂಕಷ್ಟದಲ್ಲಿದ್ದ ನಮಗೆ ಕರ್ನಾಟಕ ಮತ್ತು ಭಾರತ ಸರ್ಕಾರ ತುಂಬಾ ಸಹಕಾರ ನೀಡಿದೆ. ನಮ್ಮನ್ನು ಸುರಕ್ಷಿತವಾಗಿ ದೇಶಕ್ಕೆ ಕರೆಸಿಕೊಂಡಿದೆ. ಯೂಕ್ರೇನ್​ನಲ್ಲಿ ನನ್ನ ಹಲವು ಭಾರತೀಯ ಸ್ನೇಹಿತರು ಇದ್ದಾರೆ. ದಯವಿಟ್ಟು ಅವರನ್ನೂ ಸುರಕ್ಷಿತವಾಗಿ ದೇಶಕ್ಕೆ ವಾಪಸ್​ ಕರೆಸಿಕೊಳ್ಳಬೇಕು ಎಂದರು.

ಮಕ್ಕಳು ಬರ್ತಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ವಿಮಾನ ನಿಲ್ದಾಣದ ಬಳಿ ಜಮಾವಣೆ ಮಾಡಿದ್ದ ಪಾಲಕರು, ವಾರದಿಂದ ನಿದ್ರೆ ಹತ್ತಿಲ್ಲ. ಮನೆಯಲ್ಲಿ ಹಿರಿಯರು ಊಟ ತಿಂಡಿ ಬಿಟ್ಟಿದ್ದಾರೆ. ಯುದ್ದದ ಮುನ್ಸೂಚನೆ ಇದ್ದರೂ ಯೂಕ್ರೇನ್​ ಸರ್ಕಾರ ನಿರ್ಲಕ್ಷ್ಯ ಮಾಡಿದೆ. ನಮ್ಮ ಮಕ್ಕಳನ್ನು ಸುರಕ್ಷಿತವಾಗಿ ಕಳಿಸಿಕೊಟ್ಟುಬಿಡಿ. ಯಾವುದೇ ಎಜುಕೇಷನ್ ಬೇಡ ಏನೂ ಬೇಡ ಎಂದು ಆಕ್ರೋಶ ಹೊರಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net