

ಬೆಂಗಳೂರು: ಇತ್ತೀಚೆಗೆ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಅನುಭವಿ ವೇಗಿ ಮೊಹಮದ್ ಶಮಿ ಐಪಿಎಲ್ 20ನೇ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ಪರ ಕಣಕ್ಕಿಳಿಯಲಿದ್ದಾರೆ. ಅವರು ಲಖನೌ ತಂಡದಿಂದ 8 ಕೋಟಿ ರೂ.ಗೆ ಆರ್‌ಆರ್ ತಂಡಕ್ಕೆ ವರ್ಗಾವಣೆಯಾಗಿದ್ದಾರೆ. ಜತೆಗೆ ಸ್ಪಿನ್ನರ್ ಎಂ. ಸಿದ್ದಾರ್ಥ್ (75 ಲಕ್ಷ ರೂ.) ಕೂಡ ರಾಜಸ್ಥಾನ ತಂಡಕ್ಕೆ ವರ್ಗಾವಣೆಯಾಗಿದ್ದಾರೆ. ಇದಕ್ಕೆ ಪ್ರತಿಯಾಗಿ ಇಂಗ್ಲೆಂಡ್ ಆಲ್ರೌಂಡರ್ ಸ್ಯಾಮ್ ಕರ‌್ರನ್ (2.4 ಕೋಟಿ ರೂ.) ಲಖನೌಗೆ ವರ್ಗಾವಣೆಯಾಗಿದ್ದಾರೆ. ವೇಗಿ ಹರ್ಷಲ್ ಪಟೇಲ್ 4 ಕೋಟಿ ರೂ.ಗೆ ಸನ್‌ರೈಸರ್ಸ್ ತಂಡದಿಂದ ಗುಜರಾತ್ ಟೈಟಾನ್ಸ್‌ಗೆ ವರ್ಗಾವಣೆ ಆಗಿದ್ದಾರೆ.
36 ವರ್ಷದ ಶಮಿ ಕಳೆದ ವರ್ಷ ಸನ್‌ರೈಸರ್ಸ್‌ನಿಂದ ಲಖನೌಗೆ ₹10 ಕೋಟಿ ಸಂಭಾವನೆಯೊಂದಿಗೆ ವರ್ಗಾವಣೆ ಆಗಿದ್ದರು. ಆದರೆ, ಈ ಬಾರಿ ವೇತನ ಕಡಿತದೊಂದಿಗೆ ಅಂದರೆ, ₹8 ಕೋಟಿಗೆ ರಾಜಸ್ಥಾನ ತಂಡ ಸೇರಿದ್ದಾರೆ. ಸಿದ್ದಾರ್ಥ್ ಮೂಲಬೆಲೆ ₹75 ಲಕ್ಷಕ್ಕೆ ಟ್ರೇಡ್ ಆಗಿದ್ದಾರೆ. 28 ವರ್ಷದ ಸ್ಯಾಮ್ ಕರ‌್ರನ್ 2.4 ಕೋಟಿ ರೂ.ಗೆ ಲಖನೌ ತಂಡ ಸೇರಿದ್ದು, 2026ರ ಆವೃತ್ತಿಗೆ ಮುನ್ನ ಸಿಎಸ್‌ಕೆಯಿಂದ ರವೀಂದ್ರ ಜಡೇಜಾ ಜತೆಗೆ ರಾಜಸ್ಥಾನಕ್ಕೆ ವರ್ಗಾವಣೆಯಾಗಿದ್ದರು.
ಗುಜರಾತ್ ಹರ್ಷಲ್ ವರ್ಗ ಅಧಿಕೃತ
2025ರ ಮೆಗಾ ಹರಾಜಿನಲ್ಲಿ ₹8 ಕೋಟಿಗೆ ಸೇಲಾಗಿದ್ದ 35 ವರ್ಷದ ಹರ್ಷಲ್ ಪಟೇಲ್, ಮುಂದಿನ ಆವೃತ್ತಿಯಲ್ಲಿ ₹4 ಕೋಟಿ ಸಂಭಾವನೆಗೆ ಮಾಜಿ ಚಾಂಪಿಯನ್ ಗುಜರಾತ್ ಪರ ಆಡಲಿದ್ದಾರೆ. ಇದು ಸಂಪೂರ್ಣ ಹಣದ ವ್ಯವಹಾರ ಆಗಿದ್ದು, ಗುಜರಾತ್‌ನಿಂದ ಬೇರೆ ಆಟಗಾರ ಸನ್‌ರೈಸರ್ಸ್‌ಗೆ ವರ್ಗಾವಣೆ ಆಗಿಲ್ಲ. ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ಪರ ಆಡಿರುವ ಅನುಭವ ಹೊಂದಿರುವ ಹರ್ಷಲ್ ಪಟೇಲ್, 2021, 2024ರಲ್ಲಿ ಪರ್ಪಲ್ ಕ್ಯಾಪ್ ಗೆದ್ದಿದ್ದರು. ಇದುವರೆಗೆ ಅವರು ಆಡಿರುವ 124 ಪಂದ್ಯಗಳಲ್ಲಿ 151 ವಿಕೆಟ್ ಪಡೆದಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲೂ ಗುಜರಾತ್ ತಂಡ ಪ್ರತಿನಿಧಿಸುತ್ತಿದ್ದಾರೆ.
ಸನ್‌ಗೆ ಹೆಡ್ ಅಲಭ್ಯ
ಆಸ್ಟ್ರೇಲಿಯಾ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡದ ಸ್ಫೋಟಕ ಬ್ಯಾಟರ್ ಟ್ರಾವಿಸ್ ಹೆಡ್ ಮುಂದಿನ ವರ್ಷದ ಐಪಿಎಲ್ ಆವೃತ್ತಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನ ಬಿಡುವಿಲ್ಲದ ವೇಳಾಪಟ್ಟಿ ಜತೆಗೆ ಕಾರ್ಯದೊತ್ತಡ ನಿರ್ವಹಣೆಯಿಂದ ಮುಂಬರುವ ಆವೃತ್ತಿಯಿಂದ ಹಿಂದೆಸರಿಯುತ್ತಿರುವುದಾಗಿ ಸನ್‌ರೈಸರ್ಸ್ ಫ್ರಾಂಚೈಸಿಗೆ ಮಾಹಿತಿ ನೀಡಿದ್ದಾರೆ. 2025ರ ಮೆಗಾ ಹರಾಜಿನಗೆ ಮುನ್ನ ₹14 ಕೋಟಿ ನೀಡಿ ಸನ್‌ರೈಸರ್ಸ್ ತಂಡ ಅವರನ್ನು ರಿಟೇನ್ ಮಾಡಿಕೊಂಡಿತ್ತು. ಸನ್‌ರೈಸರ್ಸ್ ಪರ ಆಡಿರುವ 43 ಪಂದ್ಯಗಳಲ್ಲಿ 1, 351 ರನ್‌ಗಳಿಸಿದ್ದಾರೆ.