ನೈಕ್ ಮತ್ತು ಮುಂಬಯಿ ಇಂಡಿಯನ್ಸ್ ನಡುವೆ ಬಹು-ವರ್ಷಗಳ ಕಿಟ್ ಪಾಲುದಾರಿಕೆ ಘೋಷಣೆ!

ವಿಶ್ವ ಕ್ರಿಕೆಟ್ ಜಗತ್ತಿನ ಅತ್ಯಂತ ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದಾದ ಮುಂಬಯಿ ಇಂಡಿಯನ್ಸ್ ಮತ್ತು ಜಾಗತಿಕ ಕ್ರೀಡಾ ಪರಿಕರಗಳ ದಿಗ್ಗಜ ಸಂಸ್ಥೆಯಾದ ನೈಕ್ ಇಂದು ಬಹು-ವರ್ಷಗಳ ಪಾಲುದಾರಿಕೆಯನ್ನು ಅಧಿಕೃತವಾಗಿ ಘೋಷಿಸಿವೆ. ಇದರನ್ವಯ, 2027ರ ಸೀಸನ್‌ನಿಂದ ಆರಂಭಗೊಂಡು ಮುಂಬಯಿ ಇಂಡಿಯನ್ಸ್ ನ ಪುರುಷರ ಮತ್ತು ಮಹಿಳಾ ತಂಡಗಳೆರಡಕ್ಕೂ ನೈಕ್ ಅಧಿಕೃತ ಕಿಟ್ ಪಾಲುದಾರರಾಗಲಿದೆ.
ನೈಕ್ ಮತ್ತು ಮುಂಬಯಿ ಇಂಡಿಯನ್ಸ್ ನಡುವೆ ಬಹು-ವರ್ಷಗಳ ಕಿಟ್ ಪಾಲುದಾರಿಕೆ ಘೋಷಣೆ!
ನೈಕ್ ಮತ್ತು ಮುಂಬಯಿ ಇಂಡಿಯನ್ಸ್ ನಡುವೆ ಬಹು-ವರ್ಷಗಳ ಕಿಟ್ ಪಾಲುದಾರಿಕೆ ಘೋಷಣೆ!
Published on: 

ಮುಂಬೈ: ವಿಶ್ವ ಕ್ರಿಕೆಟ್ ಜಗತ್ತಿನ ಅತ್ಯಂತ ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದಾದ ಮುಂಬಯಿ ಇಂಡಿಯನ್ಸ್ ಮತ್ತು ಜಾಗತಿಕ ಕ್ರೀಡಾ ಪರಿಕರಗಳ ದಿಗ್ಗಜ ಸಂಸ್ಥೆಯಾದ ನೈಕ್ ಇಂದು ಬಹು-ವರ್ಷಗಳ ಪಾಲುದಾರಿಕೆಯನ್ನು ಅಧಿಕೃತವಾಗಿ ಘೋಷಿಸಿವೆ. ಇದರನ್ವಯ, 2027ರ ಸೀಸನ್‌ನಿಂದ ಆರಂಭಗೊಂಡು ಮುಂಬಯಿ ಇಂಡಿಯನ್ಸ್ ನ ಪುರುಷರ ಮತ್ತು ಮಹಿಳಾ ತಂಡಗಳೆರಡಕ್ಕೂ ನೈಕ್ ಅಧಿಕೃತ ಕಿಟ್ ಪಾಲುದಾರರಾಗಲಿದೆ.

ಈ ಸಂದರ್ಭ ರಿಲಯನ್ಸ್ ಸ್ಪೋರ್ಟ್ಸ್ ನ ಮುಖ್ಯಸ್ಥರಾದ ದೇವಂಗ್ ಭೀಮ್‌ಜಿಯಾನಿ ಅವರು ಮಾತನಾಡಿ, "ಮುಂಬಯಿ ಇಂಡಿಯನ್ಸ್ ಎಂದರೆ ಕೇವಲ ಕ್ರಿಕೆಟ್ ಮಾತ್ರವಲ್ಲ. ನಾವು ಒಂದು ಕುಟುಂಬ — ನಮ್ಮ ಆಟಗಾರರು, ನಮ್ಮ 'ಪಲ್ಟಾನ್' (ಅಭಿಮಾನಿಗಳು), ಎಂದಿಗೂ ನಿಲ್ಲದ ಮುಂಬಯಿ ನಗರಕ್ಕಾಗಿ ಆಡುವ ಛಲ ನಮ್ಮದು. ಕ್ರೀಡೆಯ ಶಕ್ತಿಯನ್ನು ಮತ್ತು ಅಥ್ಲೀಟ್‌ಗಳನ್ನು ನಂಬುವ ವಿಷಯದಲ್ಲಿ ನೈಕ್ ಕೂಡ ನಮ್ಮಂತೆಯೇ ಚಿಂತಿಸುತ್ತದೆ. ಈ ಒಪ್ಪಂದದ ಮೂಲಕ ಕ್ರಿಕೆಟ್ ಮತ್ತು ಸಂಸ್ಕೃತಿಯನ್ನು ಬೆಸೆಯಲು, ಮುಂದಿನ ಪೀಳಿಗೆಗೆ ಸ್ಫೂರ್ತಿ ತುಂಬಲು ಮತ್ತು ಮುಂಬಯಿ ಹಾಗೂ ಎಂಐ ಸ್ಫೂರ್ತಿಯನ್ನು ಜಗತ್ತಿನಾದ್ಯಂತದ ಅಭಿಮಾನಿಗಳಿಗೆ ತಲುಪಿಸಲು ನಮಗೆ ಉತ್ತಮ ಅವಕಾಶ ದೊರೆತಿದೆ" ಎಂದಿದ್ದಾರೆ.

ನೈಕ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ತರುಣ್‌ದೀಪ್ ಸಿಂಗ್ ಅವರು ಪ್ರತಿಕ್ರಿಯಿಸಿ, "ಕ್ರಿಕೆಟ್ ಭಾರತೀಯರಿಗೆ ಹೃದಯದ ಮಿಡಿತದಷ್ಟು ಸಹಜ. ಮತ್ತು ಮುಂಬಯಿ ಇಂಡಿಯನ್ಸ್ ತಂಡದಷ್ಟು ಶಕ್ತಿಯನ್ನು ಹಿಡಿದಿಟ್ಟುಕೊಂಡಿರುವ ತಂಡಗಳು ಬಹಳ ವಿರಳ. ಈ ಕ್ಲಬ್ ಮಹತ್ವಾಕಾಂಕ್ಷೆಯನ್ನು ಬಿಂಬಿಸುತ್ತದೆ. ಅಥ್ಲೀಟ್‌ಗಳಿಗೆ ಸೇವೆ ಸಲ್ಲಿಸಲು, ಆಟವನ್ನು ಸಂಭ್ರಮಿಸಲು ಮತ್ತು ಯುವ ಪೀಳಿಗೆಗೆ ಸ್ಫೂರ್ತಿ ತುಂಬಲು ನಾವು ಮಾಡುತ್ತಿರುವ ಪ್ರಯತ್ನದ ಭಾಗವೇ ಈ ಪಾಲುದಾರಿಕೆ" ಎಂದು ತಿಳಿಸಿದ್ದಾರೆ.

ಮುಂಬಯಿ ಇಂಡಿಯನ್ಸ್ ಪುರುಷರ ತಂಡದ ಆಟಗಾರ ಹಾಗೂ ನೈಕ್ ಅಥ್ಲೀಟ್ ತಿಲಕ್ ವರ್ಮಾ ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಾ, "ಮುಂಬಯಿ ಇಂಡಿಯನ್ಸ್ ನನಗೆ ದೊಡ್ಡ ವೇದಿಕೆಯಲ್ಲಿ ಅವಕಾಶ ನೀಡಿತು. ನೈಕ್ ಕೂಡ ನನ್ನ ಕ್ರೀಡಾ ಪಯಣದ ಒಂದು ಭಾಗವಾಗಿದೆ. ಹೀಗಾಗಿ ಈ ಎರಡು ಕುಟುಂಬಗಳು ಒಂದಾಗುತ್ತಿರುವುದು ನನಗೆ ತುಂಬಾ ವೈಯಕ್ತಿಕವೆನಿಸುತ್ತಿದೆ. ನೈಕ್ ಲಾಂಚ್ ಇರುವ ಎಂಐ ಜೆರ್ಸಿ ಧರಿಸುವುದು ನಾನು ಎಷ್ಟು ದೂರ ಬಂದಿದ್ದೇನೆ ಮತ್ತು ಇನ್ನು ಸಾಧಿಸಬೇಕಾಗಿರುವುದು ಎಷ್ಟಿದೆ ಎಂಬುದನ್ನು ನೆನಪಿಸುತ್ತದೆ. ನೀಲಿ ಮತ್ತು ಗೋಲ್ಡ್ ಬಣ್ಣದ ಜೆರ್ಸಿಯಲ್ಲಿ ಆಡಲು ಕನಸು ಕಾಣುತ್ತಿರುವ ಯಾವುದೋ ಒಬ್ಭ ಹುಡುಗ ನಮ್ಮನ್ನು ನೋಡಿ, 'ನಾನೂ ಕೂಡ ಹೀಗೆ ಆಡಬಲ್ಲೆ' ಎಂದು ಭಾವಿಸುವಂತಾಗಬೇಕು" ಎಂದಿದ್ದಾರೆ.

ಆಟಗಾರರು ಮತ್ತು ಸಿಬ್ಬಂದಿ ಈ ತಿಂಗಳಿನಿಂದಲೇ ನೈಕ್ ತಂಡದ ಉಡುಪುಗಳನ್ನು ಧರಿಸಲಿದ್ದು, ಮಹಿಳಾ ಮತ್ತು ಪುರುಷರ ತಂಡಗಳು ತಮ್ಮ 2027ರ ಸೀಸನ್‌ಗೂ ಮುಂಚಿತವಾಗಿ ಹೊಸ ನೈಕ್ ಕಿಟ್‌ಗಳನ್ನು ಅನಾವರಣಗೊಳಿಸಲಿವೆ. ಅಭಿಮಾನಿಗಳು ಶೀಘ್ರದಲ್ಲೇ ನೈಕ್‌ನ ಅಧಿಕೃತ ಕಿಟ್‌ಗಳು ಹಾಗೂ ಮುಂಬಯಿನ ಸಂಸ್ಕೃತಿ ಮತ್ತು ಶಕ್ತಿಯನ್ನು ಬಿಂಬಿಸುವ ವಿಶೇಷ ವಿನ್ಯಾಸದ ಉಡುಪುಗಳನ್ನು ಖರೀದಿಸಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net