ಕೊಹ್ಲಿ-ಗಿಲ್ ಶತಕದ ಕಮಾಲ್: ಏಕದಿನ ಇನಿಂಗ್ಸ್‌ನಲ್ಲಿ ಸರ್ವಾಧಿಕ ಸಿಕ್ಸರ್ ಬಾರಿಸಿದ ವಿರಾಟ್!

ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ (139* ರನ್, 88 ಎಸೆತ, 10 ಬೌಂಡರಿ, 9 ಸಿಕ್ಸರ್) ಸಿಡಿಸಿದ 55ನೇ ಏಕದಿನ ಶತಕದ ಜತೆಗೆ ನಾಯಕ ಶುಭಮಾನ್ ಗಿಲ್ (110 ರನ್, 108 ಎಸೆತ, 13 ಬೌಂಡರಿ, 1 ಸಿಕ್ಸರ್) ಅಮೋಘ ಶತಕದ ನೆರವಿನಿಂದ ಭಾರತ ತಂಡ, ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಗೆದ್ದು, ಶುಭಾರಂಭ ಕಂಡಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ ಶುಭಮಾನ್ ಗಿಲ್ ಪಡೆ 1-0ಯಿಂದ ಮುನ್ನಡೆ ಸಾಧಿಸಿದೆ.
ಕೊಹ್ಲಿ-ಗಿಲ್ ಶತಕದ ಕಮಾಲ್: ಏಕದಿನ ಇನಿಂಗ್ಸ್‌ನಲ್ಲಿ ಸರ್ವಾಧಿಕ ಸಿಕ್ಸರ್ ಬಾರಿಸಿದ ವಿರಾಟ್!
R Senthilkumar
Published on: 

ತಿರುವನಂತಪುರ: ‘ಚೇಸ್ ಮಾಸ್ಟರ್’ ವಿರಾಟ್ ಕೊಹ್ಲಿ (139* ರನ್, 88 ಎಸೆತ, 10 ಬೌಂಡರಿ, 9 ಸಿಕ್ಸರ್) ಸಿಡಿಸಿದ 55ನೇ ಏಕದಿನ ಶತಕದ ಜತೆಗೆ ನಾಯಕ ಶುಭಮಾನ್ ಗಿಲ್ (110 ರನ್, 108 ಎಸೆತ, 13 ಬೌಂಡರಿ, 1 ಸಿಕ್ಸರ್) ಅಮೋಘ ಶತಕದ ನೆರವಿನಿಂದ ಭಾರತ ತಂಡ, ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಗೆದ್ದು, ಶುಭಾರಂಭ ಕಂಡಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ ಶುಭಮಾನ್ ಗಿಲ್ ಪಡೆ 1-0ಯಿಂದ ಮುನ್ನಡೆ ಸಾಧಿಸಿದೆ.

ಭಾನುವಾರ ಗ್ರೀನ್‌ಫೀಲ್ಡ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ದುಕೊಂಡಿತು. ಜಸ್ಟೀನ್ ಗ್ರೀವ್ಸ್ (101 ರನ್, 108 ಎಸೆತ, 12 ಬೌಂಡರಿ, 1 ಸಿಕ್ಸರ್) ಹಾಗೂ ಜಾನ್ ಕ್ಯಾಂಪ್‌ಬೆಲ್ ಒದಗಿಸಿದ ಆರಂಭದ ನೆರವಿನಿಂದ ವಿಂಡೀಸ್ 20 ಓವರ್‌ಗಳಲ್ಲಿ 1 ವಿಕೆಟ್‌ಗೆ 135 ರನ್ ಕಲೆಹಾಕಿ ಸುಸ್ಥಿತಿಯಲ್ಲಿತ್ತು. ನಂತರ ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ (40ಕ್ಕೆ 4) ದಾಳಿಗೆ ನಲುಗಿ ಸಣ್ಣ ಕುಸಿತ ಕಂಡರೂ, ಸ್ಲಾಗ್ ಓವರ್‌ಗಳಲ್ಲಿ ಅಮಿರ್ ಜಾಂಗೋ (58* ರನ್, 43 ಎಸೆತ, 7 ಬೌಂಡರಿ, 1 ಸಿಕ್ಸರ್) ಉಪಯುಕ್ತ ಅರ್ಧಶತಕದ ಬಲದಿಂದ ವಿಂಡೀಸ್ 7 ವಿಕೆಟ್‌ಗೆ 295 ರನ್‌ಗಳ ಸವಾಲಿನ ಮೊತ್ತ ಪೇರಿಸಿತು.

ಪ್ರತಿಯಾಗಿ ‘ಪ್ರಿನ್ಸ್’ ಶುಭಮಾನ್ ಗಿಲ್ ಹಾಗೂ ‘ಕಿಂಗ್’ ಕೊಹ್ಲಿ ಎರಡನೇ ವಿಕೆಟ್‌ಗೆ 132 ಎಸೆತಗಳಲ್ಲಿ 151 ರನ್‌ಗಳಿಸಿ ಚೇಸಿಂಗ್‌ನಲ್ಲಿ ಭಾರತದ ಹಾದಿ ಸುಲಭಗೊಳಿಸಿದರು. ಅಂತಿಮವಾಗಿ ಭಾರತ 41.4 ಓವರ್‌ಗಳಲ್ಲಿ 2 ವಿಕೆಟ್‌ಗೆ 300 ರನ್‌ಗಳಿಸಿ, 50 ಎಸೆತ ಬಾಕಿಯಿರುವಂತೆಯೇ ಯಶಸ್ವಿ ಚೇಸಿಂಗ್ ನಡೆಸಿತು. 8 ರನ್ ಬೇಕಿದ್ದಾಗ ಸತತ ಎರಡು ಸಿಕ್ಸರ್ ಸಿಡಿಸಿದ ಕೊಹ್ಲಿ ಗೆಲುವು ಸಾರಿದರು. ಋತುರಾಜ್ ಗಾಯಕ್ವಾಡ್ (13*) ಜತೆ ಮುರಿಯದ ಮೂರನೇ ವಿಕೆಟ್‌ಗೆ 46 ಎಸೆತಗಳಲ್ಲಿ 75 ರನ್‌ಗಳಿಸಿದ ಕೊಹ್ಲಿ, ಈ ಪೈಕಿ ಏಕಾಂಗಿಯಾಗಿಯೇ 58 ರನ್ ಕಸಿದರು.

ವೆಸ್ಟ್ ಇಂಡೀಸ್: 7 ವಿಕೆಟ್‌ಗೆ 295 (ಜಾನ್ ಕ್ಯಾಂಪ್‌ಬೆಲ್ 62, ಜಸ್ಟೀನ್ ಗ್ರೀವ್ಸ್ 101, ಕೀಸ್ ಕಾರ್ಟಿ 13, ಶೈ ಹೋಪ್ 12, ಅಮಿರ್ ಜಾಂಗೋ 58*, ಆಂಡ್ರ್ಯೊ 0, ರೋಸ್ಟನ್ ಚೇಸ್ 24, ಮ್ಯಾಥ್ಯೂ ೆರ್ಡೆ 7, ಗುಡಕೇಶ್ ಮೋತಿ 4*, ಕುಲದೀಪ್ ಯಾದವ್ 40ಕ್ಕೆ 4, ಪ್ರಸಿದ್ಧ ಕೃಷ್ಣ 60ಕ್ಕೆ 2, ನಿತೀಶ್ ರೆಡ್ಡಿ 45ಕ್ಕೆ 1).

ಭಾರತ: 41.4 ಓವರ್‌ಗಳಲ್ಲಿ 2 ವಿಕೆಟ್‌ಗೆ 300 (ರೋಹಿತ್ ಶರ್ಮ 32, ಶುಭಮಾನ್ ಗಿಲ್ 110, ವಿರಾಟ್ ಕೊಹ್ಲಿ 139*, ಋತುರಾಜ್ ಗಾಯಕ್ವಾಡ್ 13*, ಚೇಸ್ 64ಕ್ಕೆ 1).

ಗಿಲ್-ಕೊಹ್ಲಿ ಶತಕದ ಕಮಾಲ್

ಮಾಜಿ ನಾಯಕ ರೋಹಿತ್ ಶರ್ಮ (32) ಹಾಗೂ ಶುಭಮಾನ್ ಗಿಲ್ ಚೇಸಿಂಗ್‌ನಲ್ಲಿ ಮೊದಲ ವಿಕೆಟ್‌ಗೆ 72 ಎಸೆತಗಳಲ್ಲಿ 74 ರನ್‌ಗಳಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟರು. ಲಯದಲ್ಲಿದ್ದ 39 ವರ್ಷದ ರೋಹಿತ್, 12ನೇ ಓವರ್‌ನಲ್ಲಿ ಅಲ್ಜಾರಿ ಜೋಸ್ೆಗೆ ವಿಕೆಟ್ ಒಪ್ಪಿಸಿದರು. ನಂತರ ಗಿಲ್ ಜತೆಗೂಡಿದ ಕೊಹ್ಲಿ ವಿಂಡೀಸ್ ಬೌಲರ್‌ಗಳನ್ನು ಕಾಡಿದರು. ಸರಾಗವಾಗಿ ಬ್ಯಾಟಿಂಗ್ ನಡೆಸಿದ ಇವರಿಬ್ಬರು ಭಾರತದ ಹಾದಿ ಸುಲಭಗೊಳಿಸಿದರು. ಶುಭಮಾನ್ 96 ಎಸೆತಗಳಲ್ಲಿ ಶತಕ ಬಾರಿಸಿ ನಿರ್ಗಮಿಸಿದರು. 2025ರ ಚಾಂಪಿಯನ್ಸ್ ಟ್ರೋಫಿ ನಂತರ ರನ್‌ಗಳಿಕೆಯ ವೇಗ ಹೆಚ್ಚಿಸಿಕೊಂಡಿರುವ ವಿರಾಟ್ ಕೊಹ್ಲಿ ಚೇಸಿಂಗ್‌ಗೂ ಚುರುಕು ನೀಡಿದರು. 74 ಎಸೆತಗಳಲ್ಲಿ ವಿಂಡೀಸ್ 10ನೇ ಏಕದಿನ ಶತಕ ಸಿಡಿಸಿದ ಕೊಹ್ಲಿ ಎರಡು ತಿಂಗಳ ನಂತರ ಯಶಸ್ವಿ ಪುನರಾಗಮನ ಕಂಡರು.

60. ವಿರಾಟ್ ಕೊಹ್ಲಿ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಸರ್ವಾಧಿಕ ಶತಕ ಗಳಿಸಿದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ (60) ದಾಖಲೆ ಸರಿಗಟ್ಟಿದರು.

55. ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಸಿಡಿಸಿದ 55ನೇ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 86ನೇ ಶತಕ ಗಳಿಸಿದರು.

9. ವಿರಾಟ್ ಕೊಹ್ಲಿ ಇದೇ ಮೊದಲ ಬಾರಿಗೆ ಏಕದಿನ ಪಂದ್ಯದ ಇನಿಂಗ್ಸ್‌ವೊಂದರಲ್ಲಿ 9 ಸಿಕ್ಸರ್ ಬಾರಿಸಿದರು. ಇದಕ್ಕೆ ಮುನ್ನ 2023ರಲ್ಲಿ ಶ್ರೀಲಂಕಾ ಎದುರು 8 ಸಿಕ್ಸರ್ ಗಳಿಸಿದ್ದು ಸರ್ವಾಧಿಕ ಎನಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net