ಇಂದು ಭಾರತ-ವಿಂಡೀಸ್ ಮೊದಲ ಏಕದಿನ ಹಣಾಹಣಿ: ದಾಖಲೆಯ ಸನಿಹ ರೋಹಿತ್-ಕೊಹ್ಲಿ

ಎರಡು ತಿಂಗಳ ನಂತರ ರೋ-ಕೊ ಕಣಕ್ಕೆ, ಮುಂದಿನ ವರ್ಷದ ಐಸಿಸಿ ವಿಶ್ವಕಪ್ ಟೂರ್ನಿಗೆ ತಯಾರಿ
cricket
ಆಧುನಿಕ ಕ್ರಿಕೆಟ್ ದಿಗ್ಗಜರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮ
Published on: 

ತಿರುವನಂತಪುರ: ಮುಂದಿನ ವರ್ಷ ದ.ಆಫ್ರಿಕಾ, ಜಿಂಬಾಬ್ವೆ ಹಾಗೂ ನಮೀಬಿಯಾ ಸಂಯುಕ್ತ ಆಶ್ರಯದಲ್ಲಿ ನಿಗದಿಯಾಗಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಪೂರ್ವ ತಯಾರಿ ಆರಂಭಿಸಲು ಭಾರತ ತಂಡ ಸಜ್ಜಾಗಿದೆ. ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ 3 ಪಂದ್ಯಗಳ ಏಕದಿ ಸರಣಿಯ ಮೊದಲ ಕಾದಾಟ ಗ್ರೀನ್‌ಫೀಲ್ಡ್ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿದ್ದು, ಶುಭಮಾನ್ ಗಿಲ್ ಬಳಗ ಶುಭಾರಂಭದ ನಿರೀಕ್ಷೆಯಲ್ಲಿದೆ. ಆಧುನಿಕ ಕ್ರಿಕೆಟ್ ದಿಗ್ಗಜರಾದ ರೋಹಿತ್ ಶರ್ಮ ಹಾಗೂ ವಿರಾಟ್ ಕೊಹ್ಲಿ ಎರಡು ತಿಂಗಳ ನಂತರ ಬ್ಲೂ ಜೆರ್ಸಿಯಲ್ಲಿ ಕಣಕ್ಕಿಳಿಯಲಿದ್ದಾರೆ.

ಜಾಗತಿಕ ಕ್ರಿಕೆಟ್ ಟೂರ್ನಿಗೆ ಯುವ ಹಾಗೂ ಅನುಭವಿ ಆಟಗಾರರ ಮಿಶ್ರಿತ 15 ಆಟಗಾರರ ಬಲಿಷ್ಠ ತಂಡ ಸಜ್ಜುಗೊಳಿಸಲು, ಈ ಸರಣಿ ಮೊದಲ ಹೆಜ್ಜೆ ಆಗಿರಲಿದೆ. 2027ರ ನವೆಂಬರ್ ವಿಶ್ವಕಪ್‌ಗೆ ಮುನ್ನ ಭಾರತ ತಂಡ 14 ರಿಂದ 20 ಏಕದಿನ ಪಂದ್ಯಗಳನ್ನಾಡುವ ನಿರೀಕ್ಷೆ ಇದೆ. ಹಾಲಿ ವರ್ಷ ಆಡಿರುವ 3 ಏಕದಿನ ಸರಣಿಗಳ ಪೈಕಿ 2ರಲ್ಲಿ ಸೋತಿರುವ ಗಿಲ್ ಪಡೆ, ಇಂಗ್ಲೆಂಡ್‌ನಲ್ಲಿ ಕೊನೆಯದಾಗಿ ಆಡಿತ್ತು. ಆಟಗಾರರ ಗಾಯದ ಸಮಸ್ಯೆಯಿಂದ ಪೂರ್ಣ ಪ್ರಮಾಣದ ಆಡುವ 11ರ ಬಳಗದೊಂದಿಗೆ ಆಡದ ಭಾರತ, ವಿಂಡೀಸ್ ವಿರುದ್ಧವೂ ಏಷ್ಯಾಡ್ ತಂಡದಲ್ಲಿರುವ ಶ್ರೇಯಸ್ ಅಯ್ಯರ್, ಜಸ್‌ಪ್ರೀತ್ ಬುಮ್ರಾ ಗೈರಿನಲ್ಲಿ ಆಡಲಿದೆ. ಮೀಸಲು ಆಲ್ರೌಂಡರ್ ಆಗಿರುವ ನಿತೀಶ್ ಕುಮಾರ್ ರೆಡ್ಡಿ ನಿರ್ವಹಣೆ ಸರಣಿಯ ಪ್ರಮುಖ ಅಂಶವಾಗಿರಲಿದೆ. ಮುಂದಿನ ವರ್ಷದ ಏಕದಿನ ವಿಶ್ವಕಪ್‌ಗೆ ನೇರ ಅರ್ಗತೆ ಪಡೆಯಲು ವಿಲವಾಗಿರುವ ವಿಂಡೀಸ್, ಅರ್ಹತಾ ಸುತ್ತಿನಲ್ಲಿ ಆಡುವ ಮುನ್ನ ತಂಡದ ಸಂಯೋಜನೆ ರೂಪಿಸಿಕೊಳ್ಳುವ ಸವಾಲು ಹೊಂದಿದೆ.

ಆರಂಭ: ಮಧ್ಯಾಹ್ನ 2.00

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್

ಭಾರತ 24 ವರ್ಷಗಳಿಂದ ಅಜೇಯ

ಭಾರತ ತಂಡ ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿಯಲ್ಲಿ 24 ವರ್ಷಗಳಿಂದ ಅಜೇಯವಾಗಿದೆ. ವಿಂಡೀಸ್ ತಂಡ 2002ರಲ್ಲಿ ಕೊನೆಯದಾಗಿ ಕಾರ್ಲ್ ಹೂಪರ್ ಸಾರಥ್ಯದಲ್ಲಿ ಭಾರತದಲ್ಲಿ ಏಕದಿನ ಸರಣಿ ಗೆದ್ದಿತ್ತು. ಇನ್ನು ದ್ವಿಪಕ್ಷೀಯ ಏಕದಿನ ಸರಣಿಗಳಲ್ಲಿ ಭಾರತ 2006ರಿಂದಲೂ ವಿಂಡೀಸ್ ವಿರುದ್ಧ ಸರಣಿ ಸೋಲು ಕಂಡಿಲ್ಲ.

ಟೀಮ್ ನ್ಯೂಸ್

ಭಾರತ: ಅಭ್ಯಾಸದ ವೇಳೆ ಮೊಣಕೈಗೆ ಪೆಟ್ಟು ಮಾಡಿಕೊಂಡಿದ್ದ ಗಿಲ್ ಫಿಟ್ ಆಗಿದ್ದಾರೆ. ಕೆಲ ಪ್ರಮುಖ ಆಟಗಾರರು ಏಷ್ಯನ್ ಗೇಮ್ಸ್ ತಂಡದ ಭಾಗವಾಗಿದ್ದು, ಸಮತೋಲಿತ ಆಡುವ 11ರ ಬಳಗ ಆಯ್ಕೆ ಸವಾಲೆನಿಸಿದೆ. ಶ್ರೇಯಸ್ ಅಯ್ಯರ್ ಬದಲಿಗೆ ಋತುರಾಜ್ ಗಾಯಕ್ವಾಡ್ 4ನೇ ಕ್ರಮಾಂಕದಲ್ಲಿ ಅವಕಾಶ ಪಡೆಯಲಿದ್ದು, ಹಾರ್ದಿಕ್, ಅಕ್ಷರ್ ಗೈರಿನಲ್ಲಿ ನಿತೀಶ್ ಕುಮಾರ್ ರೆಡ್ಡಿ ವೇಗದ ಬೌಲಿಂಗ್ ಆಲ್ರೌಂಡರ್ ಸ್ಥಾನ ತುಂಬಲಿದ್ದಾರೆ. ಮೂರನೇ ವೇಗಿ ಸ್ಥಾನಕ್ಕೆ ಗುರುನೂರ್ ಬ್ರಾರ್, ನಮನ್‌ಧೀರ್, ಅಕಿಬ್ ನಬಿ ನಡುವೆ ಸ್ಪರ್ಧೆ ಏರ್ಪಟ್ಟಿದೆ.

ಸಂಭಾವ್ಯ ತಂಡ: ರೋಹಿತ್ ಶರ್ಮ, ಶುಭಮಾನ್ ಗಿಲ್ (ನಾಯಕ), ವಿರಾಟ್ ಕೊಹ್ಲಿ, ಋತುರಾಜ್ ಗಾಯಕ್ವಾಡ್, ಕೆಎಲ್ ರಾಹುಲ್ (ವಿ.ಕೀ), ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ, ನಮನ್‌ಧೀರ್/ ಗುರುನೂರ್ ಬ್ರಾರ್, ಕುಲದೀಪ್ ಯಾದವ್, ಪ್ರಸಿದ್ಧ ಕೃಷ್ಣ, ಮೊಹಮದ್ ಸಿರಾಜ್.

ವೆಸ್ಟ್ ಇಂಡೀಸ್: ಆರ್ಥಿಕ ಸ್ಥಿರತೆ ತರಲು ವಿಂಡೀಸ್ ಕ್ರಿಕೆಟ್ ಮಂಡಳಿ ಆಟಗಾರರ ಶೇ.25 ವೇತನ ಕಡಿತ ಘೋಷಿಸಿರುವ ನಡುವೆ ಶೈ ಹೋಪ್ ಬಳಗ ಅಂಗಣದಲ್ಲಿ ಸ್ಥಿರ ನಿರ್ವಹಣೆ ತೋರಬೇಕಿದೆ. ಜಾನ್ ಕ್ಯಾಂಪ್‌ಬೆಲ್ ಪುನರಾಗಮನ ಮಾಡಲಿದ್ದು, ವೇಗಿ ಶಮರ್ ಜೋಸೆಫ್​ 11ರ ಬಳಗದಲ್ಲಿ ಸ್ಥಾನದ ಕುತೂಹಲ ಎನಿಸಿದೆ. 2024ರಿಂದ 9 ಪಂದ್ಯ ಆಡಿರುವ ಜೋಸ್ೆ, ಒಮ್ಮೆ ಮಾತ್ರ ಸಂಪೂರ್ಣ 10 ಓವರ್ ಕೋಟಾ ಬೌಲಿಂಗ್ ಪೂರೈಸಿದ್ದಾರೆ.

ಸಂಭಾವ್ಯ ತಂಡ: ಜಾನ್ ಕ್ಯಾಂಪ್‌ಬೆಲ್, ಜಸ್ಟೀನ್ ಗ್ರೀವ್ಸ್, ಕೀಸ್ ಕಾರ್ಟಿ, ಶೈ ಹೋಪ್ (ನಾಯಕ, ವಿ.ಕೀ), ಶೆಾರ್ನೆ ರುದರ್‌ಫೋರ್ಡ್, ರೋಸ್ಟನ್ ಚೇಸ್, ಮ್ಯಾಥ್ಯೂ ಫೋರ್ಡೆ, ಗುಡಕೇಶ್ ಮೋತಿ, ಜೈಡೆನ್ ಸೀಲ್ಸ್/ಶಮರ್ ಜೋಸೆಫ್​, ಅಲ್ಜರಿ ಜೋಸೆಫ್​, ವಿಟೆಲ್ ಲೇವ್ಸ್.

59. ವಿರಾಟ್ ಕೊಹ್ಲಿ ಇನ್ನು 59 ರನ್‌ಗಳಿಸಿದರೆ ಏಕದಿನ ಕ್ರಿಕೆಟ್‌ನಲ್ಲಿ 15 ಸಾವಿರ ರನ್ ಪೂರೈಸಿದ ಎರಡನೇ ಕ್ರಿಕೆಟಿಗ ಎನಿಸಲಿದ್ದಾರೆ. ಸಚಿನ್ ತೆಂಡುಲ್ಕರ್ (18, 426) ಮೊದಲಿಗರು.

105. ರೋಹಿತ್ ಶರ್ಮ ಇನ್ನು 105 ರನ್‌ಗಳಿಸಿದರೆ ಏಕದಿನ ಕ್ರಿಕೆಟ್‌ನಲ್ಲಿ 12 ಸಾವಿರ ರನ್‌ಗಳಿಸಿದ ಮೂರನೇ ಭಾರತೀಯ ಹಾಗೂ ವಿಶ್ವದ 7ನೇ ಬ್ಯಾಟರ್ ಎನಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net