IPL: ಮುಂಬೈ ಇಂಡಿಯನ್ಸ್ ಮುಖ್ಯ ಕೋಚ್​ ಆಗಿ ವೆಸ್ಟ್​ ಇಂಡೀಸ್​ ಮಾಜಿ ಆಲ್ರೌಂಡರ್​​ ನೇಮಕ

ಐದು ಬಾರಿ ಐಪಿಎಲ್​ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ತಂಡದ ನೂತನ ಕೋಚ್​ ಆಗಿ ಕೈರಾನ್​ ಪೊಲಾರ್ಡ್​ ನೇಮಕಗೊಂಡಿದ್ದಾರೆ. ಶ್ರೀಲಂಕಾದ ಮಹೇಲಾ ಜಯವರ್ಧನೆ ಅವರಿಂದ ತೆರವಾಗಿರುವ ಸ್ಥಾನವನ್ನು 39 ವರ್ಷದ ಪೊಲಾರ್ಡ್​ ತುಂಬಲಿದ್ದಾರೆ. 2010ರಿಂದಲೂ ಮುಂಬೈ ತಂಡದ ಭಾಗವಾಗಿರುವ ಅವರು, 2023ರಿಂದ ಬ್ಯಾಟಿಂಗ್​ ಕೋಚ್​ ಆಗಿದ್ದರು. ಇದೀಗ ಮುಖ್ಯ ತರಬೇತುದಾರ ಹುದ್ದೆಗೆ ಬಡ್ತಿ ಪಡೆದಿರುವ ಅವರು ಫ್ರಾಂಚೈಸಿ ಜತೆಗಿನ 16 ವರ್ಷಗಳ ಬಾಂಧವ್ಯವನ್ನು ಮುಂದುವರಿಸಿದ್ದಾರೆ.
ಕೈರಾನ್​ ಪೊಲಾರ್ಡ್​
ಕೈರಾನ್​ ಪೊಲಾರ್ಡ್​
Published on: 

ಮುಂಬೈ: ಐದು ಬಾರಿ ಐಪಿಎಲ್​ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ತಂಡದ ನೂತನ ಕೋಚ್​ ಆಗಿ ಕೈರಾನ್​ ಪೊಲಾರ್ಡ್​ ನೇಮಕಗೊಂಡಿದ್ದಾರೆ. ಶ್ರೀಲಂಕಾದ ಮಹೇಲಾ ಜಯವರ್ಧನೆ ಅವರಿಂದ ತೆರವಾಗಿರುವ ಸ್ಥಾನವನ್ನು 39 ವರ್ಷದ ಪೊಲಾರ್ಡ್​ ತುಂಬಲಿದ್ದಾರೆ. 2010ರಿಂದಲೂ ಮುಂಬೈ ತಂಡದ ಭಾಗವಾಗಿರುವ ಅವರು, 2023ರಿಂದ ಬ್ಯಾಟಿಂಗ್​ ಕೋಚ್​ ಆಗಿದ್ದರು. ಇದೀಗ ಮುಖ್ಯ ತರಬೇತುದಾರ ಹುದ್ದೆಗೆ ಬಡ್ತಿ ಪಡೆದಿರುವ ಅವರು ಫ್ರಾಂಚೈಸಿ ಜತೆಗಿನ 16 ವರ್ಷಗಳ ಬಾಂಧವ್ಯವನ್ನು ಮುಂದುವರಿಸಿದ್ದಾರೆ.

2020ರಲ್ಲಿ ಕೊನೆಯದಾಗಿ ಐಪಿಎಲ್​ ಟ್ರೋಫಿ ಜಯಿಸಿರುವ ಮುಂಬೈ ತಂಡದ ಪ್ರಶಸ್ತಿ ಬರ ನೀಗಿಸುವ ಸವಾಲು ಪೊಲಾರ್ಡ್​ ಮುಂದಿದೆ. ಮುಂಬೈ ಇಂಡಿಯನ್ಸ್​ ಪರ ಐಪಿಎಲ್​ನಲ್ಲಿ 189 ಪಂದ್ಯಗಳನ್ನಾಡಿರುವ ಅವರು 3,412 ರನ್​ ಕಲೆಹಾಕಿದ್ದಾರೆ. ಜತೆಗೆ ಬೌಲಿಂಗ್​ನಲ್ಲೂ 69 ವಿಕೆಟ್​ ಪಡೆದಿರುವ ಪೊಲಾರ್ಡ್​, ಮುಂಬೈ ಐದು ಟ್ರೋಫಿ ಜಯಿಸುವಲ್ಲಿ ಆಟಗಾರನಾಗಿ ಪ್ರಮುಖ ಪಾತ್ರವಹಿಸಿದ್ದರು.

"ಪೊಲಾರ್ಡ್ ತಮ್ಮ 22ನೇ ವಯಸ್ಸಿನಲ್ಲಿ ಆಟಗಾರನಾಗಿ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡರು. ಕಳೆದ ಹದಿನಾರು ವರ್ಷಗಳಲ್ಲಿ ಅವರು ನಮ್ಮ ಎಂಐ ಕುಟುಂಬದ (#OneFamily)ಅವಿಭಾಜ್ಯ ಅಂಗವಾಗಿದ್ದಾರೆ. ಆಟಗಾರನಾಗಿ ಅವರು ನಮಗೆ ಅನೇಕ ಅವಿಸ್ಮರಣೀಯ ಕ್ಷಣಗಳನ್ನು ನೀಡಿದ್ದಾರೆ. ತರಬೇತುದಾರರಾಗಿ ತಮ್ಮ ಅನುಭವ, ಉತ್ಸಾಹ ಮತ್ತು ಆಟದ ಬಗೆಗಿನ ಆಳವಾದ ತಿಳುವಳಿಕೆಯನ್ನು ತಂಡದೊಂದಿಗೆ ಹಂಚಿಕೊಳ್ಳುತ್ತಾ ಬಂದಿದ್ದಾರೆ. ಅವರು ಈಗ ಮುಖ್ಯ ತರಬೇತುದಾರರಾಗಿ ಈ ಹೊಸ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಿರುವುದು ನಮಗೆ ಅತ್ಯಂತ ಸಂತೋಷದ ವಿಷಯ.

'ಎಂಐ' ಜೆರ್ಸಿಯನ್ನು ಧರಿಸುವುದು ಮತ್ತು ತಂಡದ ಅಭಿಮಾನಿ ಬಳಗದ(ಪಲ್ಟಾನ್) ಪರವಾಗಿ ಆಡುವುದು ಎಂದರೆ ಏನು ಎಂಬುದು ಪೊಲಾರ್ಡ್‌ಗೆ ಚೆನ್ನಾಗಿ ತಿಳಿದಿದೆ. ಅವರು ಈ ಹೊಸ ಪಾತ್ರದಲ್ಲೂ ಅದೇ ಬದ್ಧತೆ, ನಂಬಿಕೆ ಮತ್ತು ದೃಢನಿಶ್ಚಯವನ್ನು ಪ್ರದರ್ಶಿಸುತ್ತಾರೆ ಎಂಬ ವಿಶ್ವಾಸ ನನಗಿದೆ. ತಂಡವನ್ನು ಮುಂದಿನ ಅಧ್ಯಾಯದತ್ತ ಮುನ್ನಡೆಸಲಿರುವ ಅವರಿಗೆ ನಾನು ಶುಭ ಹಾರೈಸುತ್ತೇನೆ" ಎಂದು ಮುಂಬೈ ಇಂಡಿಯನ್ಸ್‌ನ ಸಹ-ಮಾಲೀಕರಾದ ಶ್ರೀಮತಿ ನೀತಾ ಎಂ. ಅಂಬಾನಿ ಹೇಳಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡದ ಸಂಸ್ಕೃತಿ ಮತ್ತು ಅದು ಉನ್ನತ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಬೇಕಾದ ಅಗತ್ಯತೆಗಳ ಬಗ್ಗೆ ಪೊಲಾರ್ಡ್‌ಗೆ ಅಸಾಧಾರಣ ತಿಳುವಳಿಕೆಯಿದೆ. ಟಿ20 ಕ್ರಿಕೆಟ್‌ನ ವಿಕಾಸದ ಭಾಗವಾಗಿದ್ದ ಅವರು, ಈ ಆಟದಲ್ಲಿನ ಬದಲಾಗುತ್ತಿರುವ ಗತಿ, ತಂತ್ರಗಾರಿಕೆಯ ಬೇಡಿಕೆಗಳು ಮತ್ತು ಹೆಚ್ಚುತ್ತಿರುವ ಸ್ಪರ್ಧಾತ್ಮಕ ವಾತಾವರಣದ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ಹೊಂದಿದ್ದಾರೆ. ಆಟಗಾರನಾಗಿ ಮತ್ತು ಇತ್ತೀಚೆಗೆ ಬ್ಯಾಟಿಂಗ್ ತರಬೇತುದಾರನಾಗಿ ಮುಂಬೈ ಇಂಡಿಯನ್ಸ್‌ ಫ್ರಾಂಚೈಸಿಯೊಂದಿಗೆ ಅವರು ಸಾಗಿ ಬಂದಿರುವ ಪಯಣವು ತಂಡದ ಯಶಸ್ಸಿನ ಬಗ್ಗೆ ಅವರಿಗೆ ವಿಶಿಷ್ಟ ದೃಷ್ಟಿಕೋನವನ್ನು ನೀಡಿದೆ. ಇದು ತಂಡವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಅವರಿಗೆ ಭದ್ರ ಬುನಾದಿಯಾಗಿದೆ.

"ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಿರುವುದು ನನಗೆ ಸಂದ ಗೌರವವಾಗಿದೆ. ಮುಂಬೈ ಇಂಡಿಯನ್ಸ್ ನನ್ನ ಜೀವನ ಮತ್ತು ವೃತ್ತಿಜೀವನದ ಅವಿಭಾಜ್ಯ ಅಂಗವಾಗಿದೆ. ಈ ತಂಡ, ಆಟಗಾರರು ಮತ್ತು 'ಪಲ್ಟಾನ್' (ಅಭಿಮಾನಿ ಬಳಗ) ಜೊತೆಗಿರುವ ನನ್ನ ಬಾಂಧವ್ಯ ನನಗೆ ಅತ್ಯಂತ ಮಹತ್ವದ್ದಾಗಿದೆ.

ಒಬ್ಬ ಆಟಗಾರನಾಗಿ ಮತ್ತು ನಂತರ ಬ್ಯಾಟಿಂಗ್ ಕೋಚ್ ಆಗಿ ಈ ಪಯಣವನ್ನು ಅನುಭವಿಸಿರುವುದರಿಂದ, ಮುಂಬೈ ಇಂಡಿಯನ್ಸ್‌ನ ಮೌಲ್ಯಗಳೇನು ಮತ್ತು 'ನೀಲಿ ಮತ್ತು ಚಿನ್ನದ' (Blue and Gold) ಬಣ್ಣದ ಜೆರ್ಸಿಯನ್ನು ಧರಿಸಿ ತಂಡವನ್ನು ಪ್ರತಿನಿಧಿಸುವುದರಲ್ಲಿ ಇರುವ ಜವಾಬ್ದಾರಿ ಏನು ಎಂಬುದು ನನಗೆ ಚೆನ್ನಾಗಿ ತಿಳಿದಿದೆ. ನನ್ನ ಮೇಲೆ ನಂಬಿಕೆ ಇಟ್ಟಿರುವುದ್ದಕ್ಕಾಗಿ ಶ್ರೀಮತಿ ನೀತಾ ಅಂಬಾನಿ, ಆಕಾಶ್ ಅಂಬಾನಿ ಮತ್ತು ಇಡೀ ಮುಂಬೈ ಇಂಡಿಯನ್ಸ್ ಕುಟುಂಬಕ್ಕೆ ನಾನು ಕೃತಜ್ಞನಾಗಿದ್ದೇನೆ. ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯೊಂದಿಗೆ ನಿಕಟವಾಗಿ ಕೆಲಸ ಮಾಡಲು, ತಂಡದ ಪರಂಪರೆಯನ್ನು ಮತ್ತಷ್ಟು ಬೆಳೆಸಲು, ಪ್ರತಿಭಾವಂತ ಆಟಗಾರರ ಬೆಳವಣಿಗೆಗೆ ಸಹಾಯ ಮಾಡಲು ಹಾಗೂ ತಂಡದ ಅಭಿಮಾನಿ ಬಳಗವಾದ 'ಪಲ್ಟಾನ್'ಗೆ ಸಂಭ್ರಮಿಸಲು ಇನ್ನೂ ಅನೇಕ ಕಾರಣಗಳನ್ನು ಒದಗಿಸಲು ನಾನು ಉತ್ಸುಕನಾಗಿದ್ದೇನೆ" ಎಂದು ಮುಂಬೈ ಇಂಡಿಯನ್ಸ್‌ನ ಹೊಸ ಮುಖ್ಯ ಕೋಚ್ ಕೀರನ್ ಪೊಲಾರ್ಡ್ ಹೇಳಿದ್ದಾರೆ.

ಪೊಲಾರ್ಡ್ ಅವರ ಈ ನೇಮಕಾತಿಯು, ತಂಡದ ಪರಂಪರೆಯನ್ನು ಮುಂದುವರಿಸುವ, ಪ್ರತಿಭೆಗಳನ್ನು ಪೋಷಿಸುವ, ತಂಡದ ಸಂಸ್ಕೃತಿಯನ್ನು ಬಲಪಡಿಸುವ ಹಾಗೂ ಮೈದಾನದ ಒಳಗೆ ಮತ್ತು ಹೊರಗೆ ಶ್ರೇಷ್ಠತೆಯನ್ನು ಸಾಧಿಸುವ ಮುಂಬೈ ಇಂಡಿಯನ್ಸ್‌ನ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಮುಂಬೈ ಇಂಡಿಯನ್ಸ್‌ನ ಅತ್ಯಂತ ಯಶಸ್ವಿ ವರ್ಷಗಳಲ್ಲಿ ತಂಡದ ಪ್ರಮುಖ ಭಾಗವಾಗಿದ್ದ ಅನುಭವ ಮತ್ತು ತಂಡದ ಮುಂದಿನ ಅಧ್ಯಾಯವನ್ನು ರೂಪಿಸುವ ಮಹತ್ವಾಕಾಂಕ್ಷೆ - ಇವೆರಡರ ಆಧಾರದ ಮೇಲೆ ಅವರ ಮಾರ್ಗದರ್ಶನ ರೂಪುಗೊಳ್ಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net