More

    ಹೊಂಬೆಳಕು ಅಂಕಣ | ನಮ್ಮ ಅಜ್ಞಾನದಿಂದ ಮಕ್ಕಳ ಭವಿಷ್ಯ ಹಾಳಾಗದಿರಲಿ!

    ಹೊಂಬೆಳಕು ಅಂಕಣ | ನಮ್ಮ ಅಜ್ಞಾನದಿಂದ ಮಕ್ಕಳ ಭವಿಷ್ಯ ಹಾಳಾಗದಿರಲಿ!ನಲ್ವತ್ಮೂರು ವರ್ಷಗಳ ಅನುಭವ ನನಗೆ ತಿಳಿಸಿದ್ದು ಈ ದೇಶದಲ್ಲಿ ಒಂದೂ ದಡ್ಡ ಮಗು ಹುಟ್ಟುವುದಿಲ್ಲ; ಕೆಟ್ಟ ಮಗು ಹುಟ್ಟುವುದಿಲ್ಲವೆಂಬುದನ್ನು. ಒಂದು ವೇಳೆ ಅದು ದಡ್ಡ ಆಗಿದ್ದರೆ ಅದಕ್ಕೆ ನೇರ ಕಾರಣ ಮೊಟ್ಟಮೊದಲನೆದಾಗಿ ಅದರ ಪಾಲಕರು, ಎರಡನೆಯದಾಗಿ ಶಿಕ್ಷಕರು, ಮೂರನೆಯದಾಗಿ ಇಂದಿನ ಶಿಕ್ಷಣ ವ್ಯವಸ್ಥೆ.

    ಜೂನ್ ತಿಂಗಳು ಅಡಿಯಿಟ್ಟಿದೆ. ವಿದ್ಯಾರ್ಥಿಗಳು ರಜೆ ಮುಗಿಸಿ ಶಾಲೆಗೆ ಹೋಗಲು ಸ್ವಸಂತೋಷದಿಂದಲೋ ಬಲವಂತ ಮಾಘಸ್ನಾನದಂತೆಯೋ ಹೊರಟಿದ್ದಾರೆ. ಹೊಸದಾಗಿ ಶಾಲೆ ಸೇರಬೇಕಾದ ಮಕ್ಕಳ ಪಾಲಕರು ಯಾವ ಶಾಲೆ international ಇಲ್ಲವೇ public school tag ಹೊಂದಿದೆ, ಎಲ್ಲಿ ಆಕ್ಸ್​ಫರ್ಡ್, ಕೇಂಬ್ರಿಡ್ಜ್ ಪದಗಳಿವೆ, ಎಲ್ಲಿ ಸಿಬಿಎಸ್​ಇ, ಐಸಿಎಸ್​ಇ ಪಠ್ಯಗಳಿವೆ ಎಂಬುದನ್ನು ಪರಿಶೀಲಿಸುವುದರಲ್ಲಿ ನಿರತರಾಗಿದ್ದಾರೆ. ಈ ಸಂದರ್ಭದಲ್ಲಿ ಕೆಲವು ವಿಷಯಗಳನ್ನು ಹಂಚಿಕೊಳ್ಳುವ ನಮ್ರ ಪ್ರಯತ್ನ ನನ್ನದು. ಕಾರಣವಿಷ್ಟೇ- ಪಾಲಕರು ಎಷ್ಟೇ ಪದವಿ, ಪ್ರಶಸ್ತಿಗಳನ್ನು ಪಡೆದಿರಲಿ. ಶಿಕ್ಷಕ ಸಾಹಿತಿ ಆಗಿರಲಿ, ವಿಜ್ಞಾನಿ ಪ್ರಜ್ಞಾವಂತ ಆಗಿರಲಿ, ಮಕ್ಕಳ ಶಿಕ್ಷಣ ಹೇಗಿರಬೇಕು ಮತ್ತು ಅದರಲ್ಲಿ ತಂದೆ-ತಾಯಂದಿರ ಪಾತ್ರವೇನು ಎಂಬ ವಿಷಯಕ್ಕೆ ಬಂದರೆ ಅವರೆಲ್ಲಾ ಎಳ್ಳಷ್ಟೂ ಪ್ರಾಜ್ಞರಲ್ಲ.

    ಇದನ್ನೂ ಓದಿ: ಅಮೃತಧಾರೆ ಅಂಕಣ|ಶಾಂತಿಯನ್ನು ಬದುಕಿನ ತಳಹದಿಯಾಗಿಸಿಕೊಳ್ಳಿ…

    ಕಳೆದ ನಲ್ವತ್ಮೂರು ವರ್ಷಗಳಿಂದ ನೇರವಾಗಿ ಹಾಗೂ ಆಳವಾಗಿ ಶಿಕ್ಷಣ ಕ್ಷೇತ್ರದಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದೇನೆ. ಪದವಿ ನಂತರ ನಾನು ವೃತ್ತಿ ಜೀವನವನ್ನು ಪ್ರಾರಂಭಿಸಿದ್ದೇ ಶಿಕ್ಷಕನಾಗಿ. ಅಂಧರಿಗಾಗಿ ಮೀಸಲಾದ ಪ್ರತಿಷ್ಠಿತ ಶಾಲೆಯೊಂದರಲ್ಲಿ ಇಟ್ಟ ಹೆಜ್ಜೆ ನಾನೇ ಶಾಲೆಯೊಂದನ್ನು ಸ್ಥಾಪಿಸುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುತ್ತಿರುವ ಐಎಎಸ್, ಐಪಿಎಸ್ ಇತ್ಯಾದಿ ವಿದ್ಯಾರ್ಥಿಗಳಿಗೆ ಕಾಲಕಾಲಕ್ಕೆ ಮಾರ್ಗದರ್ಶನ ನೀಡುವವರೆಗೆ ನನ್ನನ್ನು ತಂದು ನಿಲ್ಲಿಸಿದೆ. ಪಠ್ಯ ಹಾಗೂ ಇನ್ನಿತರ ವಿಷಯಗಳಲ್ಲಿ, ಬೋಧನಾ ಪದ್ಧತಿಯಲ್ಲಿ ನಿರಂತರ ಪ್ರಯೋಗಗಳನ್ನು ಮಾಡುತ್ತಲೇ ಬಂದಿದ್ದೇನೆ. ಇದರ ನೇರ ಪರಿಣಾಮ ನಮ್ಮ ಹಳ್ಳಿಯ ವಸತಿ ಶಾಲೆಯಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳೂ ಸಮಾಜದಲ್ಲಿ ಹೆಮ್ಮೆಯ ಸ್ಥಾನಗಳನ್ನು ಗಳಿಸಿ ತಮ್ಮ ಚ್ಝಞಚ ಞಚಠಿಛ್ಟಿ (ತಾವು ಓದಿದ ಶಾಲೆ) ಅನ್ನು ಕೃತಜ್ಞತೆಯಿಂದ ಸ್ಮರಿಸುತ್ತಾರೆ. ಡಾಕ್ಟರ್, ಇಂಜಿನಿಯರ್, ಕೆಎಎಸ್ ಅಧಿಕಾರಿಗಳಲ್ಲದೆ ಪ್ರಗತಿಪರ ರೈತ, ಬ್ಯಾಂಕ್ ಮ್ಯಾನೇಜರ್, ಡಾಕ್ಟೊರೇಟ್​ಗಳು ಆಗಿದ್ದಾರೆ. ಈ ವರ್ಷದ ಎಸ್​ಎಸ್​ಎಲ್​ಸಿ ಪರೀಕ್ಷೆಗೆ ಕುಳಿತ 50 ವಿದ್ಯಾರ್ಥಿಗಳಲ್ಲಿ 49 ಪ್ರಥಮ ದರ್ಜೆ ಮತ್ತು ಒಬ್ಬ ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ. ಈ ಲೇಖನದಲ್ಲಿ ನಾನು ಅರುಹಲು ಹೊರಟ ವಿಷಯಗಳಿಗೆ ಅನುಭವದ ಆಧಾರವಿದೆ ಎಂಬ ಕಾರಣದಿಂದ ಇದನ್ನೆಲ್ಲಾ ಬರೆದನೇ ಹೊರತು ಆತ್ಮಪ್ರಶಂಸೆಗಾಗಿ ಅಲ್ಲ.

    ನಲ್ವತ್ಮೂರು ವರ್ಷಗಳ ಅನುಭವ ನನಗೆ ತಿಳಿಸಿದ್ದು ಈ ದೇಶದಲ್ಲಿ ಒಂದೂ ದಡ್ಡ ಮಗು ಹುಟ್ಟುವುದಿಲ್ಲ; ಕೆಟ್ಟ ಮಗು ಹುಟ್ಟುವುದಿಲ್ಲವೆಂಬುದನ್ನು. ಒಂದು ವೇಳೆ ಅದು ದಡ್ಡ ಆಗಿದ್ದರೆ ಅದಕ್ಕೆ ನೇರ ಕಾರಣ ಮೊಟ್ಟಮೊದಲನೆದಾಗಿ ಅದರ ಪಾಲಕರು, ಎರಡನೆಯದಾಗಿ ಶಿಕ್ಷಕರು, ಮೂರನೆಯದಾಗಿ ಇಂದಿನ ಶಿಕ್ಷಣ ವ್ಯವಸ್ಥೆ. ‘ಸ್ವಾಮೀಜಿ, ನಮ್ಮ ಹುಡುಗ ಏನೂ ಕಲಿಯುವುದು ಬೇಡ. ಮೊದಲು ಅವನು ಊಟಕ್ಕೆ ಕುಳಿತರೆ ಒಂದೇ ಸಲಕ್ಕೆ ಊಟ ಮುಗಿಸಬೇಕು. ನಾಲ್ಕು ಸಲ ಮಧ್ಯೆ ಎದ್ದು ಹೋಗಬಾರದು. ಒಂದು ವರ್ಷ ಕೇವಲ ಇಷ್ಟನ್ನೇ ಕಲಿಸಿರಿ’ ಎಂದು ಯಾರನ್ನು ಕುರಿತು ತಾಯಿ ನಿಟ್ಟುಸಿರಿನೊಂದಿಗೆ ಹೇಳಿದ್ದರೋ ಅವನು ಇಂದು ಪಿ.ಯು.ಸಿಯಲ್ಲಿ ಅದ್ಭುತ ಸಾಧನೆಗೈದು ಐಐಟಿಗಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾನೆ. ‘ಈ ಹುಡುಗ ನಿಮ್ಮ ಶಾಲೆಯಲ್ಲಿದ್ದರೆ ನಮ್ಮ ಮಕ್ಕಳನ್ನು ಇಲ್ಲಿ ಬಿಡುವುದಿಲ್ಲ’ ಎಂಬ ‘ಖ್ಯಾತಿ’ ಗಳಿಸಿದ್ದ ಹುಡುಗ ಇಂದು ಬೆಂಗಳೂರಿನ ಪ್ರತಿಷ್ಠಿತ ಶಾಲೆಯೊಂದರಲ್ಲಿ ಟಾಪ್ ಟೆನ್ ವಿದ್ಯಾರ್ಥಿಗಳಲ್ಲಿ ಒಬ್ಬನಾಗಿದ್ದಾನಲ್ಲದೆ, ಕ್ರೀಡೆ, ತಬಲಾ ಇತ್ಯಾದಿಗಳಲ್ಲಿ ಹೆಸರು ಗಳಿಸಿ ಬಹುಮುಖ ಪ್ರತಿಭೆ ಮೆರೆದಿದ್ದಾನೆ. ಇಂಥಾದ್ದೇ ನನ್ನ ಬಳಿ ಇರುವ ಇತರ ಉದಾಹರಣೆಗಳು ಕೂಡ. ತಂದೆ- ತಾಯಿಯರಿಗೆ ನಿಯಂತ್ರಣಕ್ಕೆ ಸಿಗದ ಹುಡುಗರು ಇವರೆಲ್ಲಾ. ಮತ್ತು ಇದೆಲ್ಲಾ ಸಾಧಿಸಲ್ಪಟ್ಟಿದ್ದು ಮನಗೂಳಿಯ (ವಿಜಯಪುರ ಜಿಲ್ಲೆ) ಕನ್ನಡ ಮಾಧ್ಯಮದ ವಸತಿ ಶಾಲೆಯಲ್ಲಿ. ಎಲ್ಲದರ ತಾತ್ಪರ್ಯ- ಮಕ್ಕಳಲ್ಲಿ ತಪ್ಪಿಲ್ಲ. ತಪ್ಪಿರುವುದು ತಿದ್ದಲರಿಯದ ಪಾಲಕರಲ್ಲಿ ಮತ್ತು ಬೋಧಿಸಲರಿಯದ ಶಿಕ್ಷಕರಲ್ಲಿ. ಮುಖ್ಯವಾಗಿ ಬೇಕಾಗಿರುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಮನಸ್ಥಿತಿ, ಶಕ್ತಿ, ದೌರ್ಬಲ್ಯಗಳನ್ನು ಅರಿಯುವ ಸಾಮರ್ಥ್ಯ ಮತ್ತು ವ್ಯವಧಾನ. ಬೋಧನೆಯಲ್ಲಿ ಯಾವುದೋ ಒಂದು ಮಾರ್ಗಕ್ಕೆ ಅಂಟಿಕೊಳ್ಳದೆ ವೈವಿಧ್ಯತೆಯನ್ನು ಅಳವಡಿಸಿಕೊಳ್ಳಬೇಕು.

    ಇದನ್ನೂ ಓದಿ: ಅಮೃತಧಾರೆ ಅಂಕಣ| ಕರ್ಮದಿಂದ ರೋಗ ಉಂಟಾಗುವುದು ಸಾಧ್ಯವೇ?

    ಯಾವ ಶಿಕ್ಷಕ ಎಲ್ಲಾ ವಿದ್ಯಾರ್ಥಿಗಳಿಗೂ ಒಂದೇ ಬೋಧನಾ ಮಾರ್ಗವನ್ನು ಉಪಯೋಗಿಸುತ್ತಾನೋ ಆತ ಸಂಶೋಧನಾಶೀಲನೂ ಅಲ್ಲ ಅಥವಾ ಪ್ರಯೋಗಶೀಲನೂ ಅಲ್ಲ. ಒಬ್ಬ ಶಿಕ್ಷಕನ ಸಾಧನೆ ಇರುವುದು ಎಂಥಾ ದಡ್ಡ ವಿದ್ಯಾರ್ಥಿಗೂ ಪಾಠವನ್ನು ಅರ್ಥ ಮಾಡಿಸುವುದರಲ್ಲಿದೆ. ಮೂರು ತಾಸುಗಳ ಕಾಲ ನಿರಂತರ ಪಾಠ ಮಾಡಿ ಗಂಟೆ ಬಾರಿಸಿದೆ ಊಟಕ್ಕೆ ಹೋಗಿ ಎಂದಾಗ ‘ಇನ್ನೊಂದು ಹತ್ತು ನಿಮಿಷ ಪಾಠ ಮಾಡಿ ಸರ್’ ಎಂಬ ಉದ್ಗಾರ ವಿದ್ಯಾರ್ಥಿಗಳ ಬಾಯಲ್ಲಿ ಬಂದರೆ ಅದೇ ನಿಜವಾದ ಪ್ರಶಸ್ತಿ. ಆದರೆ, ಒಂದೇ ಅರ್ಹತೆ! ಶಿಕ್ಷಕನಿಗೆ ತನ್ನ ವಿಷಯದ ಬಗ್ಗೆ ಮತ್ತು ಬೋಧನಾ ಪ್ರಕ್ರಿಯೆಯ ಬಗ್ಗೆ ತೀವ್ರ ಆಸ್ಥೆ ಇರಬೇಕಷ್ಟೆ. ಇವೆರಡರ ಜೊತೆಗೆ ವಿದ್ಯಾರ್ಥಿಗಳ ಮೇಲಿನ ನಿರ್ವ್ಯಾಜ ಪ್ರೇಮವೂ ಸೇರಿದ್ದಲ್ಲಿ ಆ ಶಿಕ್ಷಕ ಮನುಷ್ಯ ಮಾತ್ರದವನಲ್ಲ. ಸಹಸ್ರಾರು ವಿದ್ಯಾರ್ಥಿಗಳು, ಅಲೆಗ್ಸಾಂಡರ್, ಅರ್ಜುನ, ಸ್ವಾಮಿ ವಿವೇಕಾನಂದ ಇವರೆಲ್ಲಾ ಹೆತ್ತವರಿಗಿಂತ ಅಷ್ಟೇಕೆ ದೇವರಿಗಿಂತ ತಮ್ಮ ಗುರುವನ್ನು ಪ್ರೀತಿಸುತ್ತಿದ್ದುದರ ಹಿಂದೆ ಇರುವ ಕಾರಣವನ್ನು ಅಂಥ ಗುರುಗಳನ್ನು ಪಡೆದಿದ್ದವರೇ ಬಲ್ಲರು. ಅದೃಷ್ಟವಶಾತ್ ಅಂಥ ಭಾಗ್ಯವಂತರಲ್ಲಿ ನಾನೂ ಒಬ್ಬ ಎಂದು ಹೆಮ್ಮೆಯಿಂದ ಬೀಗಿ ಹೇಳಬಲ್ಲೆ.

    ಮುಖ್ಯವಾದ ಗಹನವಾದ ವಿಷಯಕ್ಕೆ ಬರುತ್ತೇನೆ. ಪಾಲಕರ ಅಜ್ಞಾನ ಸಹಸ್ರಾರು ಮಕ್ಕಳ ಭವಿಷ್ಯವನ್ನೇ ಚಿವುಟಿ ಹಾಕುತ್ತಿದೆ. ಎಷ್ಟೇ ವಿದ್ಯಾವಂತರಾದರೂ ಮಕ್ಕಳನ್ನು ಬೆಳೆಸುವ ವಿಷಯದಲ್ಲಿ ಅವರಿಗಿರುವ ಅಜ್ಞಾನ ಗಾಬರಿ ಉಂಟು ಮಾಡುತ್ತದೆ. ಮಗು ತಾಯಿಯ ಗರ್ಭದಲ್ಲಿದ್ದಾಗ ಅವಳ ಒಂಬತ್ತು ತಿಂಗಳ ಜೀವನ ಮಗುವಿನ ವ್ಯಕ್ತಿತ್ವದ ಮೇಲೆ ಮಹತ್ತರ ಪರಿಣಾಮ ಬೀರುತ್ತದೆ. ಮಹಿಳಾ ಮತ್ತು ಕಲ್ಯಾಣ ಇಲಾಖೆ ಈ ನಿಟ್ಟಿನಲ್ಲಿ ಸಮಾಜವನ್ನು ಜಾಗೃತಗೊಳಿಸಬೇಕಾದ ಅವಶ್ಯಕತೆಯಿದೆ ಎಂಬುದನ್ನು ಹಿಂದಿನ ಲೇಖನವೊಂದರಲ್ಲಿ ಪ್ರಸ್ತಾಪಿಸಿದ್ದೆ. ನಾನು ಯುಟ್ಯೂಬ್​ನಲ್ಲಿ ಈ ಕುರಿತು ಪ್ರಸ್ತುತಪಡಿಸಿದ್ದೇನೆ. ಕಿಂಡರ್ ಗಾರ್ಟನ್ ಮತ್ತು ಪ್ರಾಥಮಿಕ ಹಂತದಲ್ಲಿ ಮಕ್ಕಳ ಕಲಿಕಾ ವಿಷಯ ಬಹಳವಿರಬಾರದು. ಅದು ಅವರು ಆಟವನ್ನು ಇಷ್ಟಪಡುವ ವಯಸ್ಸು. ಅವರ ಶಿಕ್ಷಣವೂ ಒಂದು ಆಟದಂತೆಯೇ ಇರಬೇಕು. ಕಲ್ಪನಾ ಲೋಕದಲ್ಲಿ ವಿಹರಿಸುವ ಆ ವಯಸ್ಸಿನಲ್ಲಿ ಹೆಚ್ಚು ಹೆಚ್ಚು ಅವರಿಗೆ ಕೊಡಬೇಕಾದ್ದೇ ಕಥೆಗಳ ಮೂಲಕ ನೈತಿಕ ಶಿಕ್ಷಣ. ನಾವು ನೈತಿಕ ಶಿಕ್ಷಣದ ಮಹತ್ವವನ್ನು ಕಡೆಗಣಿಸಿದ್ದೇವೆ; ಅದನ್ನು ಕೊಡುವ ವಿಧಾನವನ್ನು ಅರಿಯದವರಾಗಿದ್ದೇವೆ.

    ಈ ವಯಸ್ಸಿನಲ್ಲಿ ಬುದ್ಧಿ ಸಾಕಷ್ಟು ಬೆಳೆದಿರುವುದಿಲ್ಲವಾದರೂ ಭಾವನೆಗಳು ಅತ್ಯಂತ ಶುದ್ಧ. ಕಥೆಗಳನ್ನು ಮಗು ಆಸ್ವಾದಿಸುತ್ತದೆ ಮತ್ತು ಕಥೆಯಲ್ಲಿ ಬರುವ ನೀತಿಯನ್ನು ಸುಲಭವಾಗಿ ಒಪ್ಪಿಕೊಳ್ಳುತ್ತದೆ ಕೂಡ. ಸಂಸ್ಕಾರವಂತ ವ್ಯಕ್ತಿಗಳನ್ನು ನಿರ್ಮಾಣ ಮಾಡುವ ಪರಿಯೇ ಹೀಗೆ. ಇದಕ್ಕೆ ಪಕ್ವವಾದ ಸಮಯವೇ ಎಳೆಯ ವಯಸ್ಸು. ಮುಂದಿನ ದಿನಗಳಲ್ಲಿ ಇದು ಪರಿಣಾಮಕಾರಿಯಾಗುವುದಿಲ್ಲ. ಈ ಪ್ರಮುಖ ವಿಷಯವನ್ನು ನಾವು ಕಡೆಗಣಿಸಿದ್ದೇ ಇಂದು ರಾಷ್ಟ್ರವನ್ನು ಕೊಳ್ಳೆ ಹೊಡೆಯುತ್ತಿರುವ ಅಧಿಕಾರಿ ವರ್ಗ ನಿರ್ವಣವಾಗಲು ಕಾರಣ. ಕಥೆಗಳ ಮೂಲಕ ಹೃದಯಕ್ಕೆ ಸಂಸ್ಕಾರ ನೀಡದೆ ಕೇವಲ ಬುದ್ಧಿಯನ್ನಷ್ಟೇ ಬೆಳೆಸಿದರೆ ಅರಿಸ್ಟಾಟಲ್, ಐನಸ್ಟೀನ್, ಗಾಂಧಿ ಇತ್ಯಾದಿ ಚಿಂತಕರು ಹೇಳಿದಂತೆ ವ್ಯಕ್ತಿಯೊಬ್ಬ clever animal ಆಗುತ್ತಾನಷ್ಟೆ.

    ಇದನ್ನೂ ಓದಿ: ಅಮೃತಧಾರೆ ಅಂಕಣ| ಪರಶಿವನು ಸ್ಮಶಾನವಾಸಿಯಾಗಿದ್ದೇಕೆ?

    ಸಹಸ್ರಾರು ಕೋಟಿ ವಂಚನೆ ಮಾಡಿ ದೇಶದಿಂದ ಪಲಾಯನಗೈದವರು ಇಂಥಾ clever animalಗಳೇ. ಆದ್ದರಿಂದ ಹತ್ತಾರು ಪುಸ್ತಕಗಳ ಹೊರೆ, ಅನ್ಯಭಾಷೆಯಲ್ಲಿ ಮನದಟ್ಟಾಗುವಂತೆ ಪಾಠಮಾಡುವ ಸಾಮರ್ಥ್ಯವಿಲ್ಲದ ಶಿಕ್ಷಕರು, ಇವೆಲ್ಲವೂ ಪ್ರಾರಂಭಿಕ ಶಾಲಾ ಜೀವನದಲ್ಲಿ ಕುಣಿದು, ನಲಿದು, ವಿಹರಿಸಿ ಶಾಲೆಯನ್ನು ಸ್ವರ್ಗವನ್ನಾಗಿಸಿಕೊಳ್ಳಬೇಕಿದ್ದ ಪುಟ್ಟ ಕಂದಮ್ಮಗಳು ನರಕದಲ್ಲಿ ಬಿದ್ದು ಒದ್ದಾಡುವಂತೆ ಮಾಡಿವೆ. ಯಾವ ವಿಷಯದಲ್ಲೂ ಆಳವಾದ ಅಧ್ಯಯನವೇ ಇಲ್ಲದೆ ನಾಲ್ಕೈದು ವಾಕ್ಯ ಇಂಗ್ಲಿಷ್​ನಲ್ಲಿ ಮಾತಾಡುವುದನ್ನು ಬಿಟ್ಟರೆ ಎಳ್ಳಷ್ಟೂ ಜ್ಞಾನವಿಲ್ಲದ, ಸೃಜನಶೀಲತೆಯ ಗಂಧವೇ ಇಲ್ಲದ ಇಂಜಿನಿಯರ್​ಗಳು, ವೈದ್ಯರು ಇತ್ಯಾದಿಗಳ ದಂಡನ್ನು ನಾವಿಂದು ಕಾಣುತ್ತಿದ್ದೇವೆ. ಐಐಟಿ ವಿದ್ಯಾರ್ಥಿಗಳು ಕೂಡ ಈ ಬೇನೆಯಿಂದ ಹೊರಗಿಲ್ಲ ಎಂಬುದನ್ನು ಚೆನ್ನೈ ಐಐಟಿ ನಿರ್ದೆಶಕರಾದ ಇಂದಿರೇಶನ್ ಸಂದರ್ಶನವೊಂದರಲ್ಲಿ ಹೇಳಿದ್ದರು. ಇವೆಲ್ಲದಕ್ಕೂ ಕಾರಣ ಪ್ರಾಥಮಿಕ ಹಂತದಲ್ಲಿ ವಿಷಯಗಳನ್ನು ಚೆನ್ನಾಗಿ ಅರ್ಥೈಸಿಕೊಂಡು ಅದನ್ನು ಆನಂದಿಸಿ, ಮತ್ತಷ್ಟು ಆಳವಾಗಿ ತಿಳಿಯುವ ಉತ್ಸುಕತೆಯೊಂದಿಗೆ ಅಧ್ಯಯನದ ವ್ಯಾಪ್ತಿ ಹೆಚ್ಚಿಸಿಕೊಂಡು ವಿದ್ಯೆಯ ವೈಭವದಿಂದ ವಿಜೃಂಭಿಸುವ ವ್ಯಕ್ತಿಗಳನ್ನು ನಿರ್ವಿುಸಬಲ್ಲ ವಾತಾವರಣದ ಕೊರತೆ. ಕನ್ನಡ ಮಾಧ್ಯಮದಲ್ಲಿ ಮನಮುಟ್ಟುವಂತೆ ಪಾಠ ಹೇಳಿಸಿಕೊಂಡು, ಸ್ಪೂರ್ತಿ ಹೊಂದಿ ಮುಂದೆ ದೇಶದ ಭವಿಷ್ಯವನ್ನೇ ಬದಲಾಯಿಸಿದ ಸುಪ್ರಸಿದ್ಧ ವಿಜ್ಞಾನಿ ಯು.ಆರ್.ರಾವ್ ಎಲ್ಲಿ? ಇಂದಿನ ಶೇಕಡಾ 80ರಷ್ಟು ಇಂಜಿನಿಯರ್​ಗಳು ಉದ್ಯೋಗಾರ್ಹತೆಯನ್ನು ಕಳೆದುಕೊಂಡಿದ್ದಾರೆ ಎಂಬ ಇನ್ಪೋಸಿಸ್ ನಾರಾಯಣ ಮೂರ್ತಿಯವರಿಂದ ಛೀಮಾರಿ ಹಾಕಿಸಿಕೊಂಡ ಸಮಕಾಲೀನ ಇಂಜಿನಿಯರ್​ಗಳು ಎಲ್ಲಿ?

    ಶಿಕ್ಷಣ ಕೇವಲ ಉದರ ನಿಮಿತ್ತ ಆಗಿ ಪ್ರತಿಭಾ ವಿಕಾಸಕ್ಕೆ ಆಸ್ಪದವೇ ಇಲ್ಲದಾಗಿರುವುದು ಪ್ರಾಥಮಿಕ ಹಂತದಲ್ಲಿನ ಆಂಗ್ಲಮಾಧ್ಯಮ ಎಂಬ ಹೆಮ್ಮಾರಿಯಿಂದ. ಇಷ್ಟೆಲ್ಲಾ ಕೊರತೆಗಳ ನಡುವೆ ಮಗು ಸರಿಯಾಗಿ ಅಂಕ ಗಳಿಸದಿದ್ದಲ್ಲಿ ಪಾಲಕರು ಮತ್ತು ಶಿಕ್ಷಕರು ‘ದಡ್ಡ’ ಎಂಬ ಹೆಸರನ್ನು ಕೊಟ್ಟು ತಮ್ಮ ‘ದಡ್ಡತನ’ವನ್ನು ಮೆರೆಯುತ್ತಾರೆ. ನಾಲ್ಕಾರು ಸಲ ‘ದಡ್ಡ’ನೆಂಬ ಪ್ರಶಂಸೆಯನ್ನು ಕೇಳಿದ ಮುಗ್ಧ ಮಗು ಆತ್ಮವಿಶ್ವಾಸವನ್ನು ಕಳೆದುಕೊಂಡು ಅದರ ಸುಪ್ತಪ್ರಜ್ಞೆ ತಾನು ದಡ್ಡ ಎಂದು ಒಪ್ಪಿಕೊಂಡೇ ಬಿಡುತ್ತದೆ. ಅಲ್ಲಿಗೆ ಮಗುವಿನ ಶಿಕ್ಷಣಕ್ಕೆ ಮಂಕು ಹಿಡಿದಂತೆಯೇ! ನಮ್ಮ ಆಶ್ರಮದ ಹುಡುಗನೊಬ್ಬ ಹೀಗೆಯೇ ಒದ್ದಾಡಿ ಮುಂದೆ ಕನ್ನಡ ಮಾಧ್ಯಮಕ್ಕೆ ವರ್ಗಾವಣೆಗೊಂಡು ಅದ್ಭುತ ಸುಧಾರಣೆ ಸಾಧಿಸಿದ ಉದಾಹರಣೆಯಿದೆ. ‘ಮಗುವಿನ ಬೆಳವಣಿಗೆ’ ಎನ್ನುವುದು ಅತ್ಯಂತ ಸೂಕ್ಷ್ಮ ವಿಷಯ. ಯಾವ ಮಗುವೂ ದಡ್ಡನಲ್ಲ, ನಮ್ಮ ಅಜ್ಞಾನದಿಂದ ಮಕ್ಕಳ ಭವಿಷ್ಯ ಹಾಳಾಗಬಾರದು.

    (ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts