More

    ಅಮೃತಧಾರೆ ಅಂಕಣ|ಶಾಂತಿಯನ್ನು ಬದುಕಿನ ತಳಹದಿಯಾಗಿಸಿಕೊಳ್ಳಿ…

    ಅಮೃತಧಾರೆ ಅಂಕಣ|ಶಾಂತಿಯನ್ನು ಬದುಕಿನ ತಳಹದಿಯಾಗಿಸಿಕೊಳ್ಳಿ…ಶಾಂತಿ ಎಂದರೇನು? ಯಾವುದಾದರೂ ಪರ್ವತಶಿಖರ ಅಥವಾ ಜನದಟ್ಟಣೆಯಿರದ ಕಾಡಿನೊಳಗೆ ಕೂತು ಧ್ಯಾನ ಮಾಡುವುದೇ ಶಾಂತಿ ಎಂದು ಕೆಲವರೆನ್ನುತ್ತಾರೆ. ಇನ್ನು ಕೆಲವರು ಕಂಠಪೂರ್ತಿ ಕುಡಿದು ಶಾಂತರಾಗಬಹುದು. ಮನದೊಳಗಿನ ಅಹಂಭಾವ ತಣಿಯದ ಹೊರತು ನಿಜವಾದ ಶಾಂತಿಯನ್ನು ಕಾಣುವುದು ಅಸಾಧ್ಯ. ನಿಮ್ಮ ಅಹಂಕಾರವನ್ನು ಬೆಂಬಲಿಸಿ, ಹೆಚ್ಚಿಸುವ ಜನರಿರುವ ಜಾಗಕ್ಕೆ ಹೋದರೆ, ಅಲ್ಲಿ ನೀವು ತುಂಬ ಶಾಂತವಾಗಿರುತ್ತೀರಿ. ಎಲ್ಲಿ ಅದನ್ನು ನಿಗ್ರಹಿಸಲಾಗುತ್ತದೆಯೋ ಅಂತಹ ಜಾಗಗಳಲ್ಲಿ ಮಾತ್ರ ನೀವು ಅಶಾಂತಿಯಿಂದಿರುತ್ತೀರಿ, ಅಲ್ಲವೆ?

    ಅದರ ಹೊರತಾಗಿ ನೀವೇನಾದರೂ ಪರ್ವತಶಿಖರದ ಮೇಲೆ ಕುಳಿತು ಪ್ರಶಾಂತತೆಯನ್ನು ಬಯಸಿದರೆ, ಅದು ನಿಮ್ಮ ಬಳಿ ಎಡತಾಕುವುದಿಲ್ಲ. ಆ ಕ್ಷಣದಲ್ಲಿ ಅಲ್ಲಿನ ವಾತಾವರಣದಿಂದಾಗಿ ಮನಸ್ಸಿನಲ್ಲಿ ಪ್ರಶಾಂತ ಭಾವ ಮೂಡಿದರೂ, ಬೆಟ್ಟದಿಂದ ಕೆಳಗಿಳಿದ ನಂತರ ಮತ್ತದೇ ಸ್ಥಿತಿ. ಮತ್ತದೇ ಅಶಾಂತಿ! ಮತ್ತದೇ ಗೊಂದಲ, ತಳಮಳ. ಒಂದೊಮ್ಮೆ ಶಾಂತಿಯನ್ನು ಬಯಸಿ ನೀವೇನಾದರೂ ಬೆಟ್ಟಗುಡ್ಡಗಳಲ್ಲೇ ವಾಸವಾದಿರಿ ಎಂದಿಟ್ಟುಕೊಳ್ಳೋಣ. ಅಲ್ಲಿಯೂ ನಿಮ್ಮನ್ನು ಅಶಾಂತತೆ ಕಾಡದೇ ಬಿಡುವುದಿಲ್ಲ. ನನ್ನ ಅನುಭವದಲ್ಲಿ ಹೇಳುವುದಿಷ್ಟು. ವಿಶ್ರಾಂತಿ ಎನ್ನುವುದು ಶಾಶ್ವತ ಸುಖವಲ್ಲ. ಒಂದಷ್ಟು ಹೊತ್ತಿನ ನಂತರ ವಿಶ್ರಾಂತಿಯೂ ಶ್ರಮವೆನಿಸಬಹುದು. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಹೊಸ ಸಮಸ್ಯೆ ಹುಟ್ಟಿಕೊಳ್ಳುವ ಮುನ್ನ ನೀವು ಮತ್ತದೇ ಸಮಸ್ಯೆಯ ಮಡಿಲಿಗೆ ಹೋಗುತ್ತೀರಿ. ಹೀಗಾಗಿಯೇ ನೀವು ನಿಮ್ಮ ರಜಾ ದಿನಗಳ ಅಲ್ಪಾವಧಿಯ ಬಗ್ಗೆ ಯಾವಾಗಲೂ ದೂರುತ್ತಿರುತ್ತೀರಿ.

    ಸಾಮಾನ್ಯವಾಗಿ, ಜನರು ಪ್ರಶಾಂತ ಮನಸ್ಥಿತಿಯ ಬಗ್ಗೆ ಮಾತನಾಡುತ್ತಾರೆ. ಅಂತಹ ಮಾತುಗಳು ಕೇವಲ ತಮ್ಮ ಅಹಂಭಾವನೆಯನ್ನು ಹೇಗಾದರೂ ತಣಿಸಿಕೊಳ್ಳುವ ಬಗ್ಗೆಯೇ ಆಗಿರುತ್ತದೆ. ಅವರು ಗೊಂದಲದ ಸ್ಥಿತಿಯಲ್ಲಿರುವ ಬದಲು ಆರಾಮವಾಗಿರಲು ಬಯಸುತ್ತಾರೆ. ಆದರೆ, ಯಾವಾಗ ನೀವು ನಿಮ್ಮ ಅಹಂಭಾವನೆಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತೀರೋ ಆಗ ಇಡೀ ಪರಿಸ್ಥಿತಿಯು ಅನಾನುಕೂಲವಾಗುತ್ತದೆ. ನೀವೆಷ್ಟರ ಮಟ್ಟಿಗೆ ಶಾಂತ ಸ್ಥಿತಿಯಲ್ಲಿರಲು ಬಯಸುತ್ತೀರೋ, ಅಷ್ಟರ ಮಟ್ಟಿಗೆ ಮನಸ್ಸಿನ ಶಾಂತತೆಯನ್ನು ಕಳೆದುಕೊಳ್ಳುತ್ತೀರಿ. ಮನಸ್ಸಿನಲ್ಲಿ ಅಶಾಂತತೆ ತಾಂಡವವಾಡಲು ಪ್ರಾರಂಭಿಸುತ್ತದೆ.

    ಪ್ರಶಾಂತ ಭಾವವನ್ನು ನೀವು ಸೃಷ್ಟಿಸಲು ಸಾಧ್ಯವಿಲ್ಲ ಅಥವಾ ತಾನಾಗಿಯೇ ಅದು ಉದ್ಭವಿಸುವುದಿಲ್ಲ. ನೀವು ಬಯಸಲಿ ಅಥವಾ ಬಯಸದಿರಲಿ, ಶಾಂತತೆ ಎನ್ನುವುದನ್ನು ನಿಮ್ಮೊಳಗೆ ಇದ್ದೇ ಇರುತ್ತದೆ.

    ಸಾಮಾನ್ಯವಾಗಿ ಶಾಂತ ಸ್ಥಿತಿ ಎನ್ನುವುದನ್ನು ನೀವೇ ಪಡೆದುಕೊಳ್ಳಬೇಕು. ಅದು ಇನ್ನೊಬ್ಬರಿಂದ ಅಥವಾ ಮತ್ಯಾವುದೋ ಸಂಗತಿಯಿಂದ ಬರುವುದಲ್ಲ. ಸುಂದರ ಪರಿಸರವನ್ನು ಕಂಡಾಗ ಮನಸ್ಸು ಒಂದಿಷ್ಟು ಪ್ರಫುಲ್ಲವಾಗುತ್ತದೆ. ಆದರೆ, ಆ ಕ್ಷಣದಲ್ಲಿ ಇದ್ದಕ್ಕಿದ್ದಂತೆ ಆನೆಯೊಂದು ಘೀಳಿಡುತ್ತಾ ಆ ಸ್ಥಳಕ್ಕೆ ಪ್ರವೇಶಿಸಿತು ಎಂದಿಟ್ಟುಕೊಳ್ಳೋಣ. ಆಗಲೂ ನಿಮ್ಮ ಮನಸ್ಥಿತಿ ಪ್ರಶಾಂತವಾಗಿರಲು ಸಾಧ್ಯವೇ? ಇಲ್ಲ ತಾನೇ? ಆದ್ದರಿಂದ ಇಂತಹ ಶಾಂತಿಗೆ ಯಾವುದೇ ಮಹತ್ವದ ಪ್ರಾಮುಖ್ಯತೆ ಇಲ್ಲ. ಈ ರೀತಿಯ ಶಾಂತತೆ ನೆಮ್ಮದಿಯನ್ನು ಮಾತ್ರ ತರುತ್ತದೆ. ಅಂದಮೇಲೆ ಮತ್ಯಾವುದೋ ವಸ್ತು, ದೃಶ್ಯಗಳಿಂದ ದೊರಕುವ ಪ್ರಸನ್ನತೆ ಶಾಶ್ವತವಲ್ಲ ಎಂದಾಯಿತು. ಅಂತಹ ಗೋಜಲು ಸ್ಥಿತಿಯಲ್ಲಿ ಒದ್ದಾಡುವುದಕ್ಕಿಂತ ಯಥಾಸ್ಥಿತಿ ಕಾಪಾಡಿಕೊಳ್ಳುವುದೇ ಒಳ್ಳೆಯದು. ನೀವು ತೊಂದರೆಗೊಳಗಾದಾಗ, ಕನಿಷ್ಠಪಕ್ಷ ಪರಿಹಾರಕ್ಕಾಗಿ ಹುಡುಕಾಡುತ್ತೀರಿ.

    ಜೀವನದಲ್ಲಿ ಏನನ್ನಾದರೂ ಸಾಧಿಸಿದಾಗ, ಅಂದುಕೊಂಡ ಗುರಿ ಮುಟ್ಟಿದಾಗ ಮನಸ್ಸಿನಲ್ಲಿ ಶಾಂತತೆ ಮೂಡುತ್ತದೆ. ಸಂತೃಪ್ತ ಮನೋಭಾವನೆ ನಿಮ್ಮನ್ನು ಆವರಿಸಿಕೊಳ್ಳುತ್ತದೆ. ಆ ಕ್ಷಣದಲ್ಲಿ ಏನನ್ನೋ ಸಾಧಿಸಿದ ಖುಷಿ ನಿಮ್ಮದು. ನಿಮ್ಮ ಗುರಿ, ಅಪೇಕ್ಷೆಗಳು ಪೂರ್ಣಗೊಂಡಾಗ ಸಂತೃಪ್ತಿ ಮನೆ ಮಾಡದೇ ಇರದು. ನಿಮ್ಮ ಆಶಯಗಳು ಪೂರ್ಣಗೊಂಡಾಗ, ಮಹತ್ವಾಕಾಂಕ್ಷೆಗಳು ಪೂರ್ಣಗೊಂಡಾಗ, ಅಥವಾ ಎಲ್ಲವೂ ನಿಮಗೆ ಅನುಕೂಲಕರವಾಗಿದ್ದಾಗ, ಸುತ್ತಲಿನ ಪರಿಸ್ಥಿತಿಯು ನಿಮ್ಮ ಅಹಂಕಾರ ಮತ್ತು ನಿಮ್ಮ ದೇಹಕ್ಕೆ ಸಹಕಾರಿಯಾಗಿದ್ದಾಗ, ಸಾಮಾನ್ಯವಾಗಿ ಶಾಂತ ಮನೋಭಾವನೆಯನ್ನು ಅನುಭವಿಸಿರುತ್ತೀರಿ. ಅಂತಹ ಸ್ಥಿತಿಯಲ್ಲಿ ನೀವು ಅನುಭವಿಸಿದ ಶಾಂತತೆಯು ನಿಜವಾದ ಶಾಂತಸ್ಥಿತಿಯಲ್ಲ. ನಿಜವಾಗಿ ಪ್ರಶಾಂತತೆ ಎಂದರೆ ಏನೂ ಅಲ್ಲದಿರುವುದು ಎಂದರ್ಥ. ಪ್ರಶಾಂತ ಭಾವವನ್ನು ನೀವು ಸೃಷ್ಟಿಸಲು ಸಾಧ್ಯವಿಲ್ಲ ಅಥವಾ ತಾನಾಗಿಯೇ ಅದು ಉದ್ಭವಿಸುವುದಿಲ್ಲ. ನೀವು ಬಯಸಲಿ ಅಥವಾ ಬಯಸದಿರಲಿ, ಶಾಂತತೆ ಎನ್ನುವುದನ್ನು ನಿಮ್ಮೊಳಗೆ ಇದ್ದೇ ಇರುತ್ತದೆ. ಮೇಲೆ ನಡೆಯುವುದೆಲ್ಲ ಗೊಂದಲಗಳೇ ಹೊರತು ಬೇರೇನಲ್ಲ.

    ನಾನು ಶಾಂತ ಸ್ವಭಾವವನ್ನು ಸಮುದ್ರಕ್ಕೆ ಹೋಲಿಸುತ್ತೇನೆ. ಸಮುದ್ರದ ಮೇಲ್ಭಾಗದಲ್ಲಿ ನೀವು ಅಲೆಗಳನ್ನು ಕಾಣುತ್ತೀರಿ. ಅಲ್ಲಿ ತಾಕಲಾಟವೋ ತಾಕಲಾಟ. ಇನ್ನಿಲ್ಲದ ತಳಮಳ. ಆದರೆ, ಸಮುದ್ರದ ಆಳಕ್ಕೆ ಹೋದರೆ, ಅಲ್ಲಿ ಯಾವುದೇ ಗದ್ದಲ, ಗೊಂದಲ, ತಳಮಳವಿಲ್ಲ. ಸಂಪೂರ್ಣವಾದ ಪ್ರಶಾಂತತೆ ಅಲ್ಲಿರುತ್ತದೆ. ಅಸ್ತಿತ್ವದ ಮೂಲಭೂತ ಸ್ಥಿತಿ ಯಾವಾಗಲೂ ಶಾಂತತೆಯೇ ಆಗಿದೆ.

    ಸದ್ಯದಲ್ಲಿ, ಬಹಳಷ್ಟು ಜನ ಮನಃಶಾಂತಿಯನ್ನು ಹೊಂದುವುದೇ ತಮ್ಮ ಜೀವನದ ಪರಮ ಗುರಿ ಎಂದು ಭಾವಿಸಿದ್ದಾರೆ. ಅಂತಹವರು ಈ ಲೋಕವನ್ನು ಬಿಟ್ಟುಹೋದಾಗ ಮಾತ್ರ ಶಾಂತಿಯನ್ನು ಹೊಂದುತ್ತಾರೆ. ಒಂದು ನಾಯಿ ಸಹ ಹೊಟ್ಟೆ ತುಂಬ ಊಟ ಸಿಕ್ಕಿದರೆ ಶಾಂತಿಯಿಂದ ಕುಳಿತುಕೊಳ್ಳುತ್ತದೆ. ಆದರೆ, ಇಂದು ಆಧ್ಯಾತ್ಮಿಕರೆನ್ನಿಸಿಕೊಂಡವರನ್ನೂ ಒಳಗೊಂಡಂತೆ ಬಹುತೇಕ ಜನ, ಶಾಂತ ಮನಸ್ಥಿತಿಯೇ ಪರಮೋಚ್ಚ ಸ್ಥಿತಿ ಎಂದು ಭಾವಿಸಿದ್ದಾರೆ. ಆದ್ದರಿಂದ ಶಾಂತಿಯೇ ಪರಮ ಗುರಿ ಎಂದವರು ಹೇಳುತ್ತಿದ್ದಾರೆ. ಆದರೆ, ಶಾಂತಿಯೇ ಪರಮ ಗುರಿಯಲ್ಲ. ನಿಮ್ಮ ಮುಂದಿರುವ ಆಹಾರವನ್ನು ತೃಪ್ತಿಯಿಂದ ಸೇವಿಸಬೇಕೆಂದರೆ ಮನಸ್ಸು ಗೊಂದಲಗಳಿಂದ ಹೊರತಾಗಿ ಶಾಂತವಾಗಿರಬೇಕು. ಅಂತೆಯೇ ನಿಮ್ಮ ಕುಟುಂಬದ ಸದಸ್ಯರೊಡನೆ ಬೆರೆಯುವಾಗಲೂ, ಅವರೊಂದಿಗೆ ಸಂಭಾಷಿಸುವಾಗಲೂ, ನಡೆದಾಡುವಾಗಲೂ ಸಹ! ಆ ಕಾರಣದಿಂದಲೇ ನಾನು ಹೇಳುವುದು ಶಾಂತತೆ ಎನ್ನುವುದು ಬದುಕಿನ ಆರಂಭವಷ್ಟೇ ಹೊರತು ಅಂತಿಮ ಗುರಿಯಲ್ಲ ಎಂದು. ಸಾಧನೆಯ ಹಾದಿಯಲ್ಲಿ ಮತ್ತೇನಾದರೂ ಸಾಧಿಸಲು ಸಾಧ್ಯವಾಗದಿದ್ದರೂ, ಕನಿಷ್ಠ ಪಕ್ಷ ಶಾಂತರಾಗಿರಲು ಕಲಿಯಿರಿ.

    ಯಾರ ಮನಸ್ಸು ಗೊಂದಲದ ಗೂಡಾಗಿರುತ್ತದೋ ಅಂತಹವರು ಶಾಂತ ಸ್ಥಿತಿಯನ್ನು ಹೊಂದುವುದೇ ಜೀವನದ ಅಂತಿಮ ಗುರಿ ಎಂದುಕೊಳ್ಳುತ್ತಾರೆ. ಅದನ್ನು ಹೊಂದುವ ಹಾದಿಯಲ್ಲಿನ ಪ್ರಯತ್ನಗಳೆಲ್ಲವೂ ಉತ್ತಮ ಎನಿಸಿಕೊಳ್ಳುತ್ತವೆ. ನಿಮ್ಮ ಬಳಿ ಯಾವುದಿಲ್ಲವೋ ಅದನ್ನು ಹೊಂದುವುದು ನಿಮ್ಮ ಪರಮ ಗುರಿಯಾಗುತ್ತದೆ.

    ಕೆಲ ಕಾಲದ ಹಿಂದಷ್ಟೇ ನಾನು ಇಸ್ರೇಲಿಗೆ ಭೇಟಿ ಕೊಟ್ಟಿದ್ದೆ. ನಾನು ಹೋದ ಹೋಟೆಲ್​ನಲ್ಲಿ ಭಾರಿ ಭೋಜನವನ್ನೇ ಸಿದ್ಧಪಡಿಸಲಾಗಿತ್ತು. ನಾವು ಕುಳಿತಿದ್ದಾಗ ವ್ಯಕ್ತಿಯೊಬ್ಬರು ಅಲ್ಲಿಗೆ ಬಂದು ನನಗೆ ‘‘ಶಲೋಂ’ ಎಂದು ಹೇಳಿದರು. ಪ್ರತ್ಯುತ್ತರವಾಗಿ ಅವರಿಗೆ ‘ನಮಸ್ತೆ’ ಎಂದೆ. ನಂತರ ‘ಶಲೋಂ’ ಎಂದರೇನು ಎಂದು ನಾನವರನ್ನು ಪ್ರಶ್ನಿಸಿದೆ. ಅವರು ಮುಗುಳ್ನಕ್ಕು, ‘ಅತಿಥಿಗಳನ್ನು ಹೃತ್ಪೂರ್ವಕವಾಗಿ ಬರಮಾಡಿಕೊಳ್ಳುವ ಬಗೆ ಇದು. ಇದರರ್ಥ ಶಾಂತಿ.’ ಎಂದರು. ನನ್ನ ಪ್ರಕಾರ ಶಾಂತಿಯೇ ಶ್ರೇಷ್ಠವಾದ ಶುಭಕೋರುವ ರೀತಿಯಲ್ಲ. ಅವರು ಮಧ್ಯಪ್ರಾಚ್ಯ ದೇಶಗಳಲ್ಲಿ ಹುಟ್ಟಿದ್ದರಿಂದ ಶಾಂತಿಯೇ ಅವರಿಗೆ ಅತ್ಯುತ್ತಮ ಶುಭಕೋರುವ ಮಾರ್ಗವೆನ್ನಿಸಬಹುದು. ನಿಮ್ಮ ಅಕ್ಕಪಕ್ಕದಲ್ಲಿ ಜನಗಳು ದಿನಾ ಸಾವಿಗೀಡಾಗುತ್ತಿದ್ದರೆ, ಖಂಡಿತವಾಗಿ ನೀವು ಹಾಗೆ ಯೋಚಿಸುತ್ತೀರಿ. ಅದೇ ನಿಮ್ಮ ಸುತ್ತಲೂ ಶಾಂತಿಯ ವಾತಾವರಣವಿದಿದ್ದರೆ, ನೀವು ಬೇರಿನ್ನೇನಕ್ಕೋ ಎದುರು ನೋಡಿರುತ್ತಿದ್ದಿರಿ.

    ಶಾಂತಿಯುತವಾಗಿರುವುದು ಖಂಡಿತವಾಗಿ ಅಂತಿಮ ಗುರಿ ಅಲ್ಲ. ಏಕೆಂದರೆ, ಶಾಂತಿ ಹಾಗೂ ಸಂತೋಷದಿಂದಿದ್ದಾಗ ಮಾತ್ರ ನಿಮ್ಮ ದೇಹ ಮತ್ತು ಮನಸ್ಸುಗಳೆರಡೂ ಅತ್ಯುತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತವೆ – ಮತ್ತು ಪ್ರಪಂಚದಲ್ಲಿ ನಿಮ್ಮ ಯಶಸ್ಸು ಹಾಗೂ ದಕ್ಷತೆಗೆ ಅದು ಮೂಲ ಮಾನದಂಡವಾಗಿದೆ. ನಿಮ್ಮ ಕಾರ್ಯಕ್ಷಮತೆ, ಏನನ್ನಾದರೂ ಮಾಡಬೇಕೆಂಬ ನಿಮ್ಮ ಬಯಕೆಯ ಮೇಲೆ ಅವಲಂಬಿತವಾಗಿಲ್ಲ, ಬದಲಿಗೆ ಅದು ಸಾಮರ್ಥ್ಯದ ಮೇಲೆ ಅವಲಂಬಿತವಾಗಿದೆ. ಯಾವುದೇ ರೀತಿಯ ಅಸಮಾಧಾನ, ಹತಾಶೆ ಅಥವಾ ಖಿನ್ನತೆಯ ಸ್ಥಿತಿಯಲ್ಲಿದ್ದಾಗ ನಿಮ್ಮ ಸಾಮರ್ಥ್ಯವು ದುರ್ಬಲವಾಗುತ್ತದೆ. ಆದ್ದರಿಂದ, ನೀವು ನಿಮ್ಮ ಕಾರ್ಯಕ್ಷಮತೆ ಬಗ್ಗೆ ಆಸಕ್ತರಾಗಿದ್ದರೆ, ನಿಮಗಾಗಿ ನೀವೊಂದು ಆಹ್ಲಾದಕರ ವಾತಾವರಣವನ್ನು ಸೃಷ್ಟಿಸಿಕೊಳ್ಳುವುದು ಮೊದಲ ಮತ್ತು ಅತೀ ಮುಖ್ಯವಾದ ವಿಷಯವಾಗಿದೆ. ಅಲ್ಲದೆ, ಶಾಂತಿ ಹಾಗೂ ಸಂತೋಷದಿಂದಿರುವುದು ನಿಮಗೊಂದು ಸಮಸ್ಯೆಯಾಗಿಲ್ಲದಂತೆ ನಿಮ್ಮನ್ನು ನೀವು ನೋಡಿಕೊಳ್ಳಬೇಕು. ಅದು ಯಾವುದರ ಮೇಲೂ ಅವಲಂಬಿತವಾಗಿಲ್ಲ – ನೀವು ಇರುವುದೇ ಹಾಗೆ. ಹಾಗಿದ್ದಾಗ, ನಿಮ್ಮ ದೇಹ ಮತ್ತು ಮನಸ್ಸು ಅತ್ಯುತ್ತಮ ಸ್ಥರದಲ್ಲಿ ಕೆಲಸ ಮಾಡುತ್ತವೆ, ಮತ್ತು ನೀವು ಸೃಷ್ಟಿಸಲು ಬಯಸುವ ಯಾವುದನ್ನೇ ಆದರೂ ಶ್ರಮವಿಲ್ಲದೆ ಸೃಷ್ಟಿಸಬಹುದು.

    (ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts