More

    ಅಮೃತಧಾರೆ ಅಂಕಣ| ಕರ್ಮದಿಂದ ರೋಗ ಉಂಟಾಗುವುದು ಸಾಧ್ಯವೇ?

    ಅಮೃತಧಾರೆ ಅಂಕಣ| ಕರ್ಮದಿಂದ ರೋಗ ಉಂಟಾಗುವುದು ಸಾಧ್ಯವೇ?ಆಧುನಿಕ ಮನಸ್ಸು ಹಿಂದೆಂದೂ ಇಲ್ಲದಂತಹ ವಿಶಿಷ್ಟವಾದ ನರ-ವಿಕಾರಕ್ಕೆ ಒಳಗಾಗುತ್ತಿದೆ, ಏಕೆಂದರೆ ಮನುಷ್ಯರು ತಮ್ಮ ದೇಹವನ್ನು ಬಳಸುವುದನ್ನೇ ಬಹುಮಟ್ಟಿಗೆ ನಿಲ್ಲಿಸಿಬಿಟ್ಟಿದ್ದಾರೆ.

    ದೈಹಿಕ ಚಟುವಟಿಕೆಗಳಲ್ಲಿ ತೀವ್ರವಾಗಿ ತೊಡಗಿದಾಗ, ನಿಮ್ಮ ನರ ಶಕ್ತಿ ಹೆಚ್ಚು ಬಳಕೆಯಾಗಿ, ಅನೇಕ ನರವಿಕಾರಗಳು ಹಾಗೆಯೇ ನಿವಾರಣೆ ಆಗುತ್ತವೆ.

    ರೋಗಕ್ಕೆ ಸಂಬಂಧಿಸಿದಂತೆ ಹಲವು ಅಂಶಗಳಿವೆ. ಇಂಗ್ಲಿಷಿನಲ್ಲಿ ಡಿಸೀಸ್ (ರೋಗ) ಪದವನ್ನು ಹತ್ತಿರದಿಂದ ನೋಡಿದರೆ ಡಿಸ್-ಈಸ್ – ನೀವು ಈಸ್ (ನಿರಾಳ ಅಥವಾ ಆರಾಮ) ವಾಗಿಲ್ಲ. ನಿಮ್ಮ ಶರೀರಕ್ಕೆ ವಿಶ್ರಾಂತಿ ಪಡೆಯಲು ಬರುವುದಿಲ್ಲ. ಅದಕ್ಕೆ ವಿಶ್ರಾಂತಿ ಪಡೆಯಲು ತಿಳಿಯದಿದ್ದಾಗ, ನಿಮ್ಮ ಚೈತನ್ಯಶಕ್ತಿಯು ಅಸ್ತವ್ಯಸ್ತಗೊಳ್ಳುತ್ತದೆ. ಅಸ್ತಮಾ ತೊಂದರೆ ಇರುವ ಎಷ್ಟೋ ಜನರು ಈಶಾ ಯೋಗ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಕ್ರಿಯಾ ಯೋಗ ಮತ್ತು ಧ್ಯಾನ ಮಾಡಲು ಆರಂಭಿಸುತ್ತಾರೆ. ಬಹಳ ಜನಕ್ಕೆ ಅಸ್ತಮಾ ಸಂಪೂರ್ಣವಾಗಿ ವಾಸಿಯಾಗುತ್ತದೆ. ಕೆಲವರಲ್ಲಿ ಭಾಗಶಃ ಹೋಗುತ್ತದೆ, ಕೆಲವರಲ್ಲಿ ಏನೂ ಬದಲಾವಣೆ ಆಗುವುದಿಲ್ಲ. ಏಕೆಂದರೆ ಮೂಲತಃ ಅವರಿಗೆ ಅಸ್ತಮಾ ಬರಲು ಕಾರಣಗಳು ಬೇರೆ ಬೇರೆ ಇರುತ್ತವೆ.

    ಒಬ್ಬರಲ್ಲಿ ಅಸ್ತವ್ಯಸ್ತವಾದ ಚೈತನ್ಯವಿರುತ್ತದೆ. ಕ್ರಿಯೆಗಳನ್ನು ಮೂರು ದಿನ ಮಾಡಿದ ಬಳಿಕ, ಚೈತನ್ಯ ಹೆಚ್ಚು ವ್ಯವಸ್ಥೆಗೊಳ್ಳುತ್ತದೆ. ಹೀಗಾಗಿ, ಅವರ ಅಸ್ತಮಾ ಹೋಗಿಬಿಡುತ್ತದೆ. ಇನ್ನೊಬ್ಬರಲ್ಲಿ ಒಂದು ಭಾಗ ಅಸ್ತವ್ಯಸ್ತವಾದ ಚೈತನ್ಯ, ಇನ್ನೊಂದು ಭಾಗ ಕರ್ಮಕ್ಕೆ ಸಂಬಂಧಿಸಿದ ಆಳವಾದ ಕಾರಣಗಳಿರುತ್ತವೆ. ಅದಕ್ಕೆ ಅವರು ಅಸ್ತಮಾದಿಂದ ಭಾಗಶಃ ಗುಣ ಹೊಂದುತ್ತಾರೆ. ಯಾರಲ್ಲಿ ಏನೂ ಬದಲಾವಣೆ ಆಗುವುದಿಲ್ಲವೋ, ಅಂತಹವರಲ್ಲಿ ಕರ್ಮಕ್ಕೆ ಸಂಬಂಧಿಸಿದ ಆಳವಾದ ಕಾರಣಗಳಿಂದಾಗಿ ಅಸ್ತಮಾ ಬಂದಿರುತ್ತದೆ. ಬದಲಾಗಿರದ ಹೊರಗಿನ ಪರಿಸ್ಥಿತಿಗಳೂ ಇರಬಹುದು.

    ಕರ್ಮದಿಂದ ರೋಗ ಹೇಗೆ ಉಂಟಾಗುತ್ತದೆ? ಪ್ರಾರಬ್ಧ ಎನ್ನುವುದೊಂದಿದೆ. ಪ್ರಾರಬ್ಧ ಎಂದರೆ ಈ ಜೀವಿತಕಾಲಕ್ಕೆ ನಿಗದಿಪಡಿಸಲಾದ ಕರ್ಮ. ಇದಕ್ಕೆ ಹಲವು ಅಂಶಗಳಿವೆ. ಸರಳವಾಗಿ ಹೇಳುವುದಾದರೆ, ಪ್ರಾರಬ್ಧ ಕರ್ಮವನ್ನು ನಿಮ್ಮ ದೇಹ, ಮನಸ್ಸು, ಸಂವೇದನೆ ಮತ್ತು ಚೈತನ್ಯದೊಳಗೆ ಬರೆಯಲಾಗಿದೆ. ಚೈತನ್ಯದ ಮಟ್ಟದಲ್ಲಿ ಅದು ಅತ್ಯಂತ ಮೂಲಭೂತವಾದ ರೂಪದಲ್ಲಿ ಮುದ್ರಿತವಾಗಿದೆ. ಮಾಹಿತಿಯನ್ನು ಚೈತನ್ಯದ ಮೇಲೆ ಮುದ್ರಿಸಲು ಸಾಧ್ಯವೇ? ಸಾಧ್ಯ. ವೈಜ್ಞಾನಿಕವಾಗಿ ಇದರ ಬಗ್ಗೆ ಸಂಶೋಧನೆ ನಡೆಯುತ್ತಲಿದೆಯೇ ಎಂದು ನನಗೆ ಖಾತರಿಯಿಲ್ಲ, ಆದರೆ, ಮುಂದೆ ಎಂದೋ ವಿಜ್ಞಾನವು ಮಾಹಿತಿಯನ್ನು ಚೈತನ್ಯದ ಮೇಲೆ ಮುದ್ರಿಸುವ ಬಗೆಯನ್ನು ಕಂಡುಹಿಡಿಯುತ್ತದೆ. ಒಂದು ಕಾಲದಲ್ಲಿ ನಾವು ಕಲ್ಲಿನ ಫಲಕದ ಮೇಲೆ ಬರೆಯುತ್ತಿದ್ದೆವು. ನಂತರ ಪುಸ್ತಕಗಳನ್ನು ಕಂಡುಕೊಂಡೆವು. ಸಾವಿರಾರು ಕಲ್ಲಿನ ಫಲಕಗಳ ಮೇಲೆ ಬರೆಯುತ್ತಿದ್ದುದನ್ನು ಒಂದೇ ಪುಸ್ತಕದಲ್ಲಿ ಬರೆಯಬಹುದು. ಸಾವಿರಾರು ಪುಸ್ತಕಗಳಲ್ಲಿ ಬರೆಯುವುದನ್ನು ಒಂದು ಸಿ.ಡಿಯಲ್ಲಿ ಮುದ್ರಿಸಬಹುದು. ಅಂತಹ ಸಾವಿರಾರು ಕಾಂಪ್ಯಾಕ್ಟ್ ಡಿಸ್ಕ್​ಗಳಲ್ಲಿ ಮುದ್ರಿಸುವ ಮಾಹಿತಿಯನ್ನು ಈಗ ಒಂದು ಸಣ್ಣ ಎಲೆಕ್ಟ್ರಾನಿಕ್ ಚಿಪ್​ನಲ್ಲಿ ಸಂಗ್ರಹಿಸಬಹುದು. ಈಗ ಲಕ್ಷಾಂತರ ಚಿಪ್​ಗಳಲ್ಲಿ ಸಂಗ್ರಹಿಸುವ ಮಾಹಿತಿಯನ್ನು ಮುಂದೊಂದು ದಿನ ಸ್ವಲ್ಪ ಚೈತನ್ಯದ ಮೇಲೆ ಮುದ್ರಿಸುತ್ತೇವೆ. ಇದು ನನ್ನ ಜೀವಂತ ಅನುಭವ. ಇದು ನನ್ನೊಳಗೆ ಸದಾ ನಡೆಯುತ್ತಿರುವುದರಿಂದ, ಇದು ಸಾಧ್ಯ ಎಂದು ನನಗೆ ತಿಳಿದಿದೆ. ಮತ್ತು ನಿಮ್ಮೊಳಗೂ ಹೀಗೇ ನಡೆಯುತ್ತಿದೆ. ಚೈತನ್ಯ ಒಂದು ನಿರ್ದಿಷ್ಟ ಬಗೆಯಲ್ಲಿ ಕಾರ್ಯನಿರ್ವಹಿಸುತ್ತದೆ. ಎಲ್ಲರ ಚೈತನ್ಯ ಅಥವಾ ಪ್ರಾಣಶಕ್ತಿ ಒಂದೇ ಸಮನಾದ ರೀತಿಯಲ್ಲಿ ವರ್ತಿಸುವುದಿಲ್ಲ. ಅವರವರ ಕರ್ಮಬಂಧನದಂತೆ ವರ್ತಿಸುತ್ತದೆ. ಹೀಗಾಗಿ, ಅತ್ಯಂತ ಆಳವಾದ ಮುದ್ರಣ ಚೈತನ್ಯದಲ್ಲಿದೆ. ಕರ್ಮಗಳ ಬ್ಯಾಕಪ್ ವ್ಯವಸ್ಥೆ ಅನ್ನಬಹುದು – ನೀವು ಬುದ್ಧಿ ಕಳೆದುಕೊಂಡರೆ, ದೇಹದಲ್ಲಿ ಇನ್ನೂ ಇರುತ್ತದೆ. ನೀವು ನಿಮ್ಮ ದೇಹ ಕಳೆದುಕೊಂಡರೆ, ಚೈತನ್ಯದಲ್ಲಿ ಇನ್ನೂ ಇರುತ್ತದೆ. ಅಂದರೆ ಕರ್ಮಗಳು ಬ್ಯಾಕಪ್​ಗಳಲ್ಲಿ ಇದ್ದೇ ಇರುತ್ತವೆ. ಚೈತನ್ಯವು ಭಾಗಗಳಾಗಿ ವಿಂಗಡಿಸಲ್ಪಟ್ಟಿರುತ್ತದೆ. ಇದಕ್ಕೆ ಬಹುವಾದ ಸಂಕೀರ್ಣತೆಗಳಿವೆ. ಸರಳವಾಗಿ ಹೇಳಬೇಕೆಂದರೆ – ಚೈತನ್ಯದ ಒಂದು ಭಾಗ ಕ್ರಿಯೆಗಳಿಗೆ ಮೀಸಲಾಗಿರುತ್ತದೆ. ಒಂದು ಭಾಗ ನಿಮ್ಮ ಭಾವನೆಗಳಿಗೆ, ಇನ್ನೊಂದು ಯೋಚನೆಗಳ ಪ್ರಕ್ರಿಯೆಗೆ, ಮತ್ತೊಂದು ನಿಮ್ಮೊಳಗಿನ ಅನುಭವಗಳ ಆಯಾಮಕ್ಕೆ.

    ಇಂದಿನ ಆಧುನಿಕ ಜೀವನದಲ್ಲಿ, ಜೀವಿಸುವ ರೀತಿಯಲ್ಲಿ ಜನರ ಭಾವನೆಗಳನ್ನು ಪೂರ್ಣವಾಗಿ ಅಭಿವ್ಯಕ್ತಗೊಳಿಸಲಾಗುತ್ತಿಲ್ಲ. ಚೈತನ್ಯದ ಆ ಭಾಗ – ಅಭಿವ್ಯಕ್ತಿಗೊಳಿಸದೇ ಬಂಧಿಸಿಟ್ಟುಕೊಂಡ ಭಾವನೆಗಳು – ಉಪಯೋಗಿಸದಿದ್ದರೂ ಬೇರೆ ಏನೋ ಆಗಲು ಸಾಧ್ಯವಿಲ್ಲ. ಆ ಭಾವನೆಗಳನ್ನು ಅಭಿವ್ಯಕ್ತಗೊಳಿಸದಿದ್ದಲ್ಲಿ ಅದು ಒಳತಿರುಗಿ ನಿಮ್ಮೊಳಗೆ ಏನೋ ಮೋಜು ಮುಜುಗರ ಮಾಡುತ್ತದೆ. ಈ ಕಾರಣಕ್ಕಾಗಿಯೇ ಪಾಶ್ಚಾತ್ಯ ದೇಶಗಳಲ್ಲಿ ಎಷ್ಟೋ ಬಗೆಯ ಮಾನಸಿಕ ಸಮಸ್ಯೆಗಳು ಇರುವುದು. ಭಾವನೆಗಳನ್ನು ವ್ಯಕ್ತಪಡಿಸಲು ಅವಕಾಶವೇ ಇಲ್ಲದಿರುವುದು ಇದಕ್ಕೆ ಒಂದು ಮುಖ್ಯ ಕಾರಣ. ಭಾವನಾತ್ಮಕತೆಯನ್ನು ದೌರ್ಬಲ್ಯವೆಂಬಂತೆ ನೋಡುತ್ತಾರೆ, ಆ ಸಂಸ್ಕೃತಿಗಳಲ್ಲಿ, ಅದಕ್ಕೆ ಅದನ್ನು ಅದುಮಿಡಲಾಗುತ್ತದೆ. ಜನರು ಭಾವುಕರು. ಆದರೆ, ಅವರ ಭಾವನೆಗಳನ್ನು ಹೊರಗೆಡಹುವಂತಿಲ್ಲ. ಪ್ರಪಂಚದಲ್ಲಿ ಶೇಕಡಾ 90ರಷ್ಟು ಜನ, ಪ್ರಾಯಶಃ ಅದಕ್ಕೂ ಹೆಚ್ಚಿರಬೇಕು, ಎಂದೂ ಭಾವನೆಗಳನ್ನು ಪೂರ್ಣವಾಗಿ ಅಭಿವ್ಯಕ್ತಿಗೊಳಿಸುವುದೇ ಇಲ್ಲ. ತಮ್ಮ ಪ್ರೇಮಕ್ಕೆ, ದುಃಖಕ್ಕೆ ಹೆದರುತ್ತಾರೆ, ಸಂತೋಷಗಳಿಗೆ ಹೆದರುತ್ತಾರೆ, ಎಲ್ಲದಕ್ಕೂ ಹೆದರುತ್ತಾರೆ. ಜೋರಾಗಿ ನಗುವುದೂ- ಜೋರಾಗಿ ಅಳುವುದೂ ಒಂದು ಸಮಸ್ಯೆ. ಹೀಗಿದ್ದರೂ ಇದನ್ನು ‘ಆಧುನಿಕ ಸಂಸ್ಕೃತಿ’ ಎಂದು ಕರೆಯುತ್ತಾರೆ! ನಾನು ಇದನ್ನು ‘ನಿರ್ಬಂಧಿಸುವ ಸಂಸ್ಕೃತಿ’ ಎನ್ನುತ್ತೇನೆ, ನಿಮ್ಮನ್ನು ಒಂದು ನಿರ್ದಿಷ್ಟ ರೀತಿಯಲ್ಲಿ ಮಾತ್ರ ವರ್ತಿಸುವಂತೆ ಮಾಡಲು ಕಾರಣವಾಗಿದೆ. ಭಾವನೆಗಳನ್ನು ಸಂಪೂರ್ಣವಾಗಿ ವ್ಯಕ್ತಪಡಿಸದೆ ಹೋದಲ್ಲಿ, ಆ ಚೈತನ್ಯ ನಿಮ್ಮೊಳಗೆ ತಿರುಗಿಬಿದ್ದು ಅನೇಕ ಬಗೆಯ ಹಾನಿ ಉಂಟುಮಾಡುತ್ತದೆ.

    ನಿಮ್ಮ ಪ್ರಾರಬ್ಧ ಕರ್ಮದ ಅತಿ ಹೆಚ್ಚಿನ ಭಾಗ ನಿಮ್ಮ ಚಟುವಟಿಕೆಗಳಿಗೆ ಮೀಸಲಾದ ಚೈತನ್ಯವಾಗಿರುತ್ತದೆ. ಇವತ್ತು ಕೂಡ ಭೌತಿಕ ದೇಹವೇ ನಿಮ್ಮಲ್ಲಿ ಅತಿ ಪ್ರಮುಖವಾಗಿರುವುದರಿಂದ, ಶೇಕಡ 95ರಷ್ಟು ಸಮಯ ಚೈತನ್ಯದ ಗರಿಷ್ಠ ಪಾಲು ಚಟುವಟಿಕೆಗಳಿಗೆ ಮೀಸಲಾಗಿರುತ್ತದೆ. ಅದರ ಪ್ರಮಾಣ ಒಬ್ಬರಿಂದ ಇನ್ನೊಬ್ಬರಲ್ಲಿ ಸ್ವಲ್ಪ ವ್ಯತ್ಯಾಸವಾಗಬಹುದು. ಆಧುನಿಕ ಜೀವನದಲ್ಲಿ ಚಟುವಟಿಕೆಯ ಮಟ್ಟ ತೀವ್ರವಾಗಿ ಕುಸಿದಿದೆ. ಏಕೆಂದರೆ ಜನರು ಮುಂಚಿನ ಹಾಗೆ ದೇಹವನ್ನು ಕೆಲಸ ಮಾಡಲು ಬಳಸುತ್ತಿಲ್ಲ. ಉಪಯೋಗಿಸದ ಚೈತನ್ಯ ಹಾಗೇ ಉಳಿದರೆ ಅದು ಸುಲಭವಾಗಿ ರೋಗವನ್ನು ಉಂಟು ಮಾಡಬಲ್ಲದು. ಆಧುನಿಕ ಮನಸ್ಸು ಹಿಂದೆಂದೂ ಇಲ್ಲದಂತಹ ವಿಶಿಷ್ಟವಾದ ನರ-ವಿಕಾರಕ್ಕೆ ಒಳಗಾಗುತ್ತಿದೆ, ಏಕೆಂದರೆ ಮನುಷ್ಯರು ತಮ್ಮ ದೇಹವನ್ನು ಬಳಸುವುದನ್ನೇ ಬಹುಮಟ್ಟಿಗೆ ನಿಲ್ಲಿಸಿಬಿಟ್ಟಿದ್ದಾರೆ. ದೈಹಿಕ ಚಟುವಟಿಕೆಗಳಲ್ಲಿ ತೀವ್ರವಾಗಿ ತೊಡಗಿದಾಗ, ನರಶಕ್ತಿ ಹೆಚ್ಚು ಬಳಕೆಯಾಗಿ, ಅನೇಕ ನರವಿಕಾರಗಳು ಹಾಗೆಯೇ ನಿವಾರಣೆ ಆಗುತ್ತವೆ. ಆದರೆ ಆಧುನಿಕ ಮನುಷ್ಯರು ಹೆಚ್ಚು ನಿಷ್ಕ್ರಿಯರಾಗುತ್ತಾ, ಹಿಂದೆಂದೂ ಇಲ್ಲದಂತೆ ನರರೋಗಿಗಳಾಗುತ್ತಿದ್ದಾರೆ. ಸಮಾಜದಲ್ಲಿ ಪ್ರತಿಯೊಬ್ಬರೂ ಯಾವುದೋ ಒಂದು ಮಟ್ಟದಲ್ಲಿ ನರ-ವಿಕಾರಕ್ಕೆ ಒಳಗಾಗುವುದು ಸರ್ವೆಸಾಮಾನ್ಯವಾಗಿಬಿಟ್ಟಿದೆ. ಚಟುವಟಿಕೆಗಳಿಗೆ ಮೀಸಲಾದ ಚೈತನ್ಯವನ್ನು ಉಪಯೋಗಿಸದಿರುವುದೇ ಇದಕ್ಕೆ ಸರಳ ಕಾರಣ. ದೈಹಿಕ ಚಟುವಟಿಕೆಗಳು ಎಷ್ಟು ಕಡಿಮೆಯಾಗಿವೆ ಎಂದರೆ ಅದು ಹಾಗೇ ಬಂಧಿಯಾಗಿದೆ. ಕ್ರೀಡೆಗಳ ಮೂಲಕ ಹೆಚ್ಚಿನ ಮಟ್ಟದ ದೈಹಿಕ ಚಟುವಟಿಕೆಗಳಲ್ಲಿ ತೊಡಗಿರುವ ವ್ಯಕ್ತಿಗಳು – ಉದಾಹರಣೆಗೆ ಒಬ್ಬ ಪರ್ವತಾರೋಹಿ- ಆ ಚಟುವಟಿಕೆಗಳ ಮೂಲಕ ಚೈತನ್ಯವನ್ನು ಸಂಪೂರ್ಣವಾಗಿ ಬಳಸುವುದರಿಂದ ಅವರು ಬೇರೊಂದು ಮಟ್ಟದ ಸಮತೋಲನ ಮತ್ತು ಶಾಂತಿಯನ್ನು ಹೊಂದಿರುತ್ತಾರೆ. ಅಂತಹ ವ್ಯಕ್ತಿ ಲೈಂಗಿಕತೆ ಅಥವಾ ಇನ್ನಿತರ ಭೌತಿಕ ಪ್ರಚೋದನೆಗಳಲ್ಲಿ ಅತಿಯಾಗಿ ಸಿಕ್ಕಿಹಾಕಿಕೊಂಡಿರುವುದಿಲ್ಲ. ಏಕೆಂದರೆ ಅವರ ಒಂದು ಅಂಶ ಸಂಪೂರ್ಣವಾಗಿ ಅಭಿವ್ಯಕ್ತಿಗೊಂಡಿದೆ.

    ನಿಷ್ಕ್ರಿಯತೆಯ ಒಂದು ಪರಿಣಾಮ ರೋಗ. ಎಲ್ಲಕ್ಕಿಂತ ಹೆಚ್ಚಾಗಿ ನಿಷ್ಕ್ರಿಯತೆ ಮತ್ತು ಬಂಧಿಸಿಟ್ಟ ಚೈತನ್ಯ ಚಡಪಡಿಕೆಗೆ ಕಾರಣವಾಗುತ್ತವೆ. ದೇಹದಲ್ಲಿ ಕ್ಷೋಭೆ ಉಂಟಾಗುತ್ತದೆ. ಈ ಕ್ಷೋಭೆ ಹಲವರಲ್ಲಿ ದೈಹಿಕವಾದ ರೋಗದ ರೂಪ ಪಡೆಯುತ್ತದೆ. ಇನ್ನೂ ಕೆಲವರಲ್ಲಿ ರೋಗ ಬರದೇ ಹೋದರೂ ಕ್ಷೋಭೆಗೊಳಗಾಗಿರುತ್ತಾರೆ. ಅವರು ಡಿಸ್-ಈಸ್​ನಲ್ಲಿ ಇರುತ್ತಾರೆ. ಅವರ ಚೈತನ್ಯಗಳು ಒಳಗೇ ತಮ್ಮ ತಮ್ಮಲ್ಲೇ ಹೋರಾಟ ಮಾಡಿಕೊಂಡಿರುತ್ತವೆ. ಅವರಲ್ಲಿ ನಿರಾಳತೆ (ಈಸ್) ಎಂಬುದು ಇರುವುದೇ ಇಲ್ಲ. ಗಮನಿಸಿದರೆ, ಜನರು ನಿಲ್ಲುವ, ಕೂರುವ ರೀತಿಯಿಂದಲೇ ಅವರು ನಿರಾಳವಾಗಿಲ್ಲ ಎಂದು ಕಾಣಬಹುದು. ನಿಮ್ಮ ಚಲನೆಗಳಿಂದ ಮುಜುಗರವನ್ನು ಬಂಧಿಸಿಟ್ಟರೆ, ಅದು ನಿಮ್ಮ ಚೈತನ್ಯದಲ್ಲಿ ಸೇರಿಕೊಳ್ಳುತ್ತದೆ. ಏಕೆಂದರೆ ಅದಕ್ಕೆ ಇಲ್ಲಿ ಅಭಿವ್ಯಕ್ತಗೊಳ್ಳಲು ಆಗುತ್ತಿಲ್ಲ. ಯಾವ ಆಯಾಮದಲ್ಲಿ ಅದು ಸುಲಭವಾಗಿ ಅಭಿವ್ಯಕ್ತಗೊಳ್ಳಬಹುದೋ ಅಲ್ಲಿಗೆ ವರ್ಗಾವಣೆಯಾಗುತ್ತದೆ. ರೋಗ ಉಂಟಾಗುತ್ತಿರುವುದು ಈ ಕಾರಣದಿಂದ- ಚೈತನ್ಯ ಒಳಮುಖಗೊಳ್ಳುತ್ತಿರುವುದರಿಂದ.

    ರೋಗಕ್ಕೆ ಬೇರೆ ಅಂಶಗಳೂ ಅನ್ವಯಿಸುತ್ತವೆ. ನಿಮ್ಮ ಚೈತನ್ಯ ಏಕೆ ಒಂದು ಬಗೆಯಲ್ಲಿ ಕಾರ್ಯನಿರ್ವಹಿಸಿ ರೋಗವನ್ನುಂಟು ಮಾಡಿದೆ ಎನ್ನಲು ಕರ್ಮಕ್ಕೆ ಸಂಬಂಧಿಸಿದ ಕಾರಣಗಳಿವೆ. ಅದು ಬೇರೆ ವಿಷಯ. ಆದರೆ, ಪ್ರಪಂಚದಲ್ಲಿ ಅನೇಕರು ರೋಗಕ್ಕೆ ಒಳಗಾಗಲೇ ಬೇಕಾಗಿಲ್ಲ. ಇಂದು ವೈದ್ಯಕೀಯ ವಿಜ್ಞಾನ ಎಂದಿಗಿಂತಲೂ ಮುಂದುವರಿದಿದೆ. ಆದರೂ ಜನರು ರೋಗದಿಂದ ಬಿಡುಗಡೆ ಆಗಿಲ್ಲ. ಭೌತಿಕ ಮತ್ತು ಭಾವನಾತ್ಮಕವಾದ ಚೈತನ್ಯಗಳೆರಡೂ ಅತಿ ಹೆಚ್ಚು ಪಾಲು ಹೊಂದಿದ್ದರೂ ಉಪಯೋಗಿಸಲ್ಪಡುತ್ತಿಲ್ಲ. ಉಪಯೋಗಿಸಲ್ಪಡುತ್ತಿರುವುದು ಮಾನಸಿಕ ಚೈತನ್ಯ ಮಾತ್ರ. ಇಂದು, ಯೋಚನೆಗಳಿಗೆ ಮೀಸಲಾದ ಚೈತನ್ಯವನ್ನು ಅತಿ ಹೆಚ್ಚಿನ ಮಟ್ಟಕ್ಕೆ ಬಳಸಲಾಗುತ್ತಿದೆ. ಉದಾಹರಣೆಗೆ- ದೇಶದ ಬಜೆಟಿಗೆಂದು ಹಣವನ್ನು ಮೀಸಲಿಡಲಾಗುತ್ತದೆ. ಅದರಲ್ಲಿ ಶಿಕ್ಷಣಕ್ಕೆ, ಅಭಿವೃದ್ಧಿಗೆ, ಉದ್ಯಮಗಳಿಗೆ ಮತ್ತು ಶಕ್ತಿಗೆ ಇಷ್ಟೆಂದು ನಿಗದಿಯಾಗಿರುತ್ತದೆ. ಗರಿಷ್ಠ ಪಾಲನ್ನು ಶಕ್ತಿಗೆ ಕೊಡಲಾದರೂ, ಅದು ಉಪಯೋಗಿಸಲ್ಪಡುವುದಿಲ್ಲ. ನೀವು ಅದನ್ನು ಉಪಯೋಗಿಸದಿದ್ದರೆ, ನಿಮ್ಮ ಆರ್ಥಿಕಸ್ಥಿತಿಗೆ ನಷ್ಟವಾಗುತ್ತದೆ. ದೇಹದಲ್ಲಿ ಆಗುತ್ತಿರುವುದೂ ಇದೇ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts