ನವದೆಹಲಿ: 2019ರ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಮೋದಿ ಉಪನಾಮದ ಕುರಿತು ವ್ಯಂಗ್ಯವಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನನಷ್ಟ ಪ್ರಕರಣದಲ್ಲಿ ಸಂಸತ್ ಸ್ಥಾನದಿಂದ ಅನರ್ಹಗೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ನ್ಯಾಯಾಲಯ ಕೊಂಚ ರಿಲೀಫ್ ನೀಡಿದೆ.
ಸಂಸತ್ ಸ್ಥಾನದಿಂದ ಅನರ್ಹಗೊಂಡ ಬಳಿಕ ಸರ್ಕಾರಿ ಸವಲತ್ತುಗಳನ್ನು ಕಳೆದುಕೊಂಡಿದ್ದ ರಾಹುಲ್ ಗಾಂಧಿ ಅವರಿಗೆ ಸಾಮಾನ್ಯ ಪಾಸ್ಪೋರ್ಟ್ ಪಡೆಯಲು ದೆಹಲಿ ಹೈಕೋರ್ಟ್ ಅನುಮತಿ ನೀಡಿದೆ.
ನಿರಾಪೇಕ್ಷಣಾ ಪ್ರಮಾಣಪತ್ರ ಮಂಜೂರು
ಸಂಸದನ ಸ್ಥಾನದಿಂದ ಅನರ್ಹಗೊಂಡ ಬಳಿಕ ರಾಹುಲ್ ತಮ್ಮ ಬಳಿ ಇದ್ದ ಡಿಪ್ಲೋಮ್ಯಾಟಿಕ್ ಪಾಸ್ಪೋರ್ಟ್ಅನ್ನು ಅರ್ಕಾರಕ್ಕೆ ಒಪ್ಪಿಸಿದ ನಂತರ ನಿರಾಪೇಕ್ಷಣಾ ಪ್ರಮಾಣಪತ್ರ(NOC) ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು.
ಅರ್ಜಿ ವಿಚಾರಣೆಯನ್ನು ನಡೆಸಿದ ವೈಭವ್ ಮೆಹ್ತಾ ಅವರಿದ್ದ ಏಕ ಸದಸ್ಯ ಪೀಠವು ರಾಹುಲ್ ಗಾಂಧಿ ಅವರ ಮನವಿಯನ್ನು ಪುರಸ್ಕರಿಸಿ 10 ವರ್ಷದ ಬದಲಿಗೆ ಮೂರು ವರ್ಷಗಳ ಸಾಮಾನ್ಯ ಪಾಸ್ಪೋರ್ಟ್ ಹೊಂದಲು ಅನುಮತಿ ನೀಡಿದೆ.
ಉತ್ತರ ನೀಡುವಂತೆ ಸೂಚನೆ
ರಾಹುಲ್ ಗಾಂಧಿ ತಮ್ಮ ಬಳಿ ಪಾಸ್ಪೋರ್ಟ್ ಹೊಂದಲು ನ್ಯಾಯಾಲಯದ ಅನುಮತಿ ಬೇಕಿತ್ತು ಏಕೆಂದರೆ ನ್ಯಾಷನಲ್ ಹೆರಾಲ್ಡ್, ಅಕ್ರಮ ಹಣ ವರ್ಗಾವಣೆ, ಅನುದಾನ ದುರ್ಬಳಕೆ, ಸೇರಿದಂತೆ ಅನೇಕ ಪ್ರಕರಣಗಳ ವಿಚಾರಣೆಯನ್ನು ರಾಹುಲ್ ಎದುರಿಸುತ್ತಿದ್ದಾರೆ.
ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ ಅವರು ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಿದ್ದರು. ನಿರಾಪೇಕ್ಷಣಾ ಪ್ರಮಾಣಪತ್ರ(NOC) ನೀಡಿರುವ ಕುರಿತು ಶುಕ್ರವಾರದೊಳಗೆ ಉತ್ತರಿಸುವಂತೆ ನ್ಯಾಯಾಲಯ ಸ್ವಾಮಿ ಅವರಿಗೆ ಸೂಚಿಸಿದೆ.