ರೈತರಿಗೆ ನೀಡುವ ಹಾಲಿನ ದರದಲ್ಲಿ 1.5ರೂ. ಕಡಿತ; ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

s
Published on

ಬೆಂಗಳೂರು: ಸರ್ಕಾರ ರೈತರಿಗೆ ನೀಡುವ ಹಾಲಿನ ದರದಲ್ಲಿ 1.50 ರೂಪಾಯಿ ಕಡಿತಗೊಳಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಚಿವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಸಚಿವರು, ಅಧಿಕಾರ ದರ್ಪದ ಅಮಲಿನಿಂದ ಕೊಬ್ಬಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಅನ್ನದಾತನ ಮೇಲೆ ಬರೆಯ ಬರೆ ಎಳೆಯುತ್ತಿದೆ. ರೈತನ ಜೀವನಾಧಾರವಾಗಿರುವ ಹಾಲಿನ ಮೇಲೆ ಕಾಂಗ್ರೆಸ್ ಆಡಳಿತದ ಕಾಕದೃಷ್ಟಿ ಬಿದ್ದಿದೆ. ಪರಿಣಾಮ ಹಾಲಿನ ಖರೀದಿ ದರಕ್ಕೆ ಕತ್ತರಿ ಪ್ರಯೋಗವಾಗಿದೆ ಎಂದು ಹರಿ ಹಾಯ್ದಿದ್ದಾರೆ.

ಕೆಲ ಹಾಲು ಒಕ್ಕೂಟಗಳು ಏಕಪಕ್ಷೀಯವಾಗಿ ಹಾಲಿನ ಖರೀದಿ ದರದಲ್ಲಿ 1.50 ರೂ. ಕಡಿತ ಮಾಡಿವೆ. ಹೊಸ ಖರೀದಿ ದರ 30.50 ರಿಂದ 29ಕ್ಕೆ ರೂ. ಕುಸಿದಿದೆ. ಕಾಮಧೇನುವನ್ನೇ ನಂಬಿದ್ದ ರೈತನ ಕರುಳಿಗೆ ಕೊಳ್ಳಿ ಬಿದ್ದಿದೆ. ನಮ್ಮದು ರೈತಪರ ಸರ್ಕಾರ ಎನ್ನುವ ಮುಖ್ಯಮಂತ್ರಿಗಳು ಇತ್ತ ಗಮನ ಹರಿಸಬೇಕು. ಅವರಿಗೆ ಅಷ್ಟು ಸಮಯ ಇದೆ ಎಂದು ನಾನಾದರೂ ಪರಿಭಾವಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಕೂಡಲೇ ಈ ಬಗ್ಗೆ ಮುಖ್ಯಮಂತ್ರಿಗಳು ಕ್ರಮ ವಹಿಸಿ ಹಾಲು ಖರೀದಿ ದರಕ್ಕೆ ತಡೆ ಒಡ್ಡಬೇಕು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net