ವಿದ್ಯಾವಂತರಿಂದಲೇ ಶೇ.90ರಷ್ಟು ಅಪರಾಧ -- ಉಪನ್ಯಾಸ ಕಾರ್ಯಕ್ರಮದಲ್ಲಿ ಉಪ ಲೋಕಾಯುಕ್ತ ಜಸ್ಟೀಸ್ ಬಿ. ವೀರಪ್ಪ ಹೇಳಿಕೆ

20241201_121035
Published on

ಮಂಗಳೂರು: ದೇಶದಲ್ಲಿ ಶೇ.80ರಷ್ಟು ಸಾಕ್ಷರತೆ ಇದ್ದು, ನ್ಯಾಯಾಲಯದ ಕೇಸುಗಳ ಪೈಕಿ ಶೇ.90ರಷ್ಟು ವಿದ್ಯಾವಂತರದ್ದಾಗಿರುವುದು ಕಳವಳಕಾರಿ ಎಂದು ಉಪ ಲೋಕಾಯುಕ್ತ ಜಸ್ಟೀಸ್ ಬಿ. ವೀರಪ್ಪ ಹೇಳಿದ್ದಾರೆ.

ಮಂಗಳೂರಿನ ಜಿಲ್ಲಾ ನ್ಯಾಯಾಲಯ ಸಭಾಂಗಣದಲ್ಲಿ ಭಾನುವಾರ ‘ಸಾರ್ವಜನಿಕ ಆಡಳಿತದಲ್ಲಿ ಲೋಕಾಯುಕ್ತ ಹಾಗೂ ಕಾನೂನು ಸೇವಾ ಪ್ರಾಧಿಕಾರಗಳ ಪಾತ್ರ’ ಕುರಿತು ಅವರು ಮಾತನಾಡಿದರು.

ವಿದ್ಯಾವಂತರು ಕ್ರಿಮಿನಲ್, ಸಿವಿಲ್ ಮಾತ್ರವಲ್ಲ ಪೋಕ್ಸೋ ಕೇಸುಗಳಲ್ಲೂ ಭಾಗಿಯಾಗಿದ್ದಾರೆ. ಕಾನೂನು ಗೊತ್ತಿದ್ದೂ ಗೊತ್ತಿಲ್ಲದಂತೆ ವರ್ತಿಸುವ ವಿದ್ಯಾವಂತರೇ ಈ ಅಪರಾಧಗಳಲ್ಲಿ ತೊಡಗಿಸಿಕೊಳ್ಳುವುದು ಬೇಸರದ ಸಂಗತಿ. ಅಂತಹವರಿಗೆ ಜಾಮೀನು ಕೂಡ ನೀಡಬಾರದು ಎಂಬುದು ನನ್ನ ಸಲಹೆ ಎಂದು ಜಸ್ಟೀಸ್ ಬಿ.ವೀರಪ್ಪ ಹೇಳಿದರು.

ದೇಶದ ಎಲ್ಲ ರಂಗಗಳಲ್ಲೂ ಭ್ರಷ್ಟಾಚಾರ ಮೇತಿಮೀರಿದ್ದು, ಇದನ್ನು ಸರಿಪಡಿಸಬೇಕಾದರೆ ನ್ಯಾಯಾಂಗ ಮತ್ತು ಪತ್ರಿಕಾ ರಂಗ ಇನ್ನಷ್ಟು ಬಲಿಷ್ಠವಾಗಬೇಕು. ಸರ್ಕಾರಿ ಆಸ್ಪತ್ರೆ ಸೇರಿದಂತೆ ಎಲ್ಲ ಬಗೆಯ ಸರ್ಕಾರಿ ಕಚೇರಿಗಳಲ್ಲಿ ಲೋಕಾಯುಕ್ತ ಸಂಪರ್ಕ ಸಂಖ್ಯೆಯನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ಇದರಿಂದ ಜನತೆಯ ಶೋಷಣೆ ತಡೆಗಟ್ಟಬಹುದು ಮಾತ್ರವಲ್ಲ ಜನಸಾಮಾನ್ಯರಿಗೆ ಸುಲಭ ನ್ಯಾಯ ಸಿಗಲಿದೆ ಎಂದರು.

ವೈದ್ಯರು ಹೊರಗೆ ಚೀಟಿ ನೀಡುವಂತಿಲ್ಲ

ಸರ್ಕಾರಿ ಆಸ್ಪತ್ರೆಗಳಿಗೆ ಹೊರಗಿನಿಂದ ಔಷಧ ಖರೀದಿಗೆ ಪ್ರತಿದಿನಕ್ಕೆ 25 ಸಾವಿರ ರೂ. ವೆಚ್ಚ ಮಾಡಲು ಅವಕಾಶ ಇದೆ. ಆದರೆ ವೈದ್ಯರು ಹೊರಗಿನಿಂದ ಔಷಧ ಖರೀದಿಸುವಂತೆ ಬಡರೋಗಿಗಳಿಗೆ ಸೂಚಿಸುತ್ತಾರೆ. ಹಾಗಾದರೆ ಸರ್ಕಾರಿ ಆಸ್ಪತ್ರೆಯ ಉದ್ದೇಶ ಏನು ಎಂದು

ಪ್ರಶ್ನಿಸಿದರು. ಯಾವುದೇ ಕಾರಣಕ್ಕೂ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಹೊರಗೆ ಔಷಧ ಖರೀದಿಗೆ ಚೀಟಿ ನೀಡಲು ಅವಕಾಶ ಇಲ್ಲ. ಹಾಗೇನಾದರೂ ಕಂಡು ಬಂದರೆ ಲೋಕಾಯುಕ್ತಕ್ಕೆ ದೂರು ನೀಡಬಹುದು ಎಂದರು.

ಸ್ವಯಂ ಆಗಿಯೂ ಕೇಸು ದಾಖಲಿಸಲು ಲೋಕಾಯುಕ್ತಕ್ಕೆ ಅವಕಾಶ ಇದೆ. ದಿಢೀರ್ ಕಾರ್ಯಾಚರಣೆ ಮೂಲಕ ಮಹತ್ವದ ಸಂಗತಿಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಲೋಕಾಯುಕ್ತ ಕಾಯ್ದೆ ಬಳಸಿ ಮುಖ್ಯಮಂತ್ರಿಯನ್ನೇ ಜೈಲಿಗೆ ಕಳುಹಿಸಿದ ಉದಾಹರಣೆ ಕರ್ನಾಟಕದಲ್ಲಿದೆ. ಕರ್ನಾಟಕ ಲೋಕಾಯುಕ್ತ ದೇಶದಲ್ಲೇ ಬಲಿಷ್ಠವಾಗಿದೆ. ಲೋಕಾಯುಕ್ತ ಕೇವಲ ಕೇಸು ದಾಖಲು, ಕಾರ್ಯಾಚರಣೆಗೆ ಮಾತ್ರವಲ್ಲ, ಸಮಾಜಮುಖಿ ಸ್ಪಂದನ ಮಾಡುತ್ತಿದೆ ಎಂದರು.

ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ರವೀಂದ್ರ ಎಂ.ಜೋಶಿ ಅಧ್ಯಕ್ಷತೆ ವಹಿಸಿದ್ದರು. ಲೋಕಾಯುಕ್ತ ಅಪರ ನಿಬಂಧಕ ಕೆ.ಎಂ.ರಾಜಶೇಖರ್, ಉಪನಿಬಂಧಕರಾದ ಕೆ.ಎಂ.ಬಸವರಾಜಪ್ಪ, ಅರವಿಂದ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಶೋಭಾ ಬಿ.ಜಿ, ಜಿಲ್ಲಾ ಸತ್ರ ನ್ಯಾಯಾಧೀಶ ಮಲ್ಲಿಕಾರ್ಜನ ಸ್ವಾಮಿ, ಲೋಕಾಯುಕ್ತ ಎಸ್ಪಿ ನಟರಾಜ್ ಎಂ.ಎ. ಉಪಸ್ಥಿತರಿದ್ದರು.

ನ್ಯಾಯಾಲಯಗಳಲ್ಲಿ ಸುಳ್ಳು ದೂರುಗಳು ದಾಖಲಾಗುತ್ತಿರುವ ಸಂಖ್ಯೆ ಹೆಚ್ಚುತ್ತಿದೆ. ಕರ್ನಾಟಕ ಲೋಕಾಯುಕ್ತದಲ್ಲಿ 20 ಸಾವಿರ ಕೇಸುಗಳ ಪೈಕಿ ಸುಮಾರು 8 ಸಾವಿರ ಸುಳ್ಳು ಕೇಸುಗಳು. ಇವುಗಳನ್ನು ವಾಪಸ್ ಪಡೆಯಲು ಅವಕಾಶ ನೀಡದೆ, ಸುಳ್ಳು ಕೇಸು ದಾಖಲಿಸುವವರಿಗೆ ಕನಿಷ್ಠ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ದೇಶದಲ್ಲಿ ಸುಮಾರು 5 ಕೋಟಿ ಕೇಸುಗಳು ಇತ್ಯರ್ಥಕ್ಕೆ ಬಾಕಿ ಇದೆ. ಸುಪ್ರೀಂ ಕೋರ್ಟ್‌ನಲ್ಲಿ 70 ಸಾವಿರ ಕೇಸುಗಳು ಬಾಕಿ ಇದೆ. ನಾನು ಲೋಕಾಯುಕ್ತದಲ್ಲಿ ಅಧಿಕಾರ ಸ್ವೀಕರಿಸಿದ ಬಳಿಕ 1.08 ಕೋಟಿ ಕೇಸುಗಳನ್ನು ಇತ್ಯರ್ಥಪಡಿಸಲಾಗಿದೆ.

ಜಸ್ಟೀಸ್ ಬಿ. ವೀರಪ್ಪ

ಉಪ ಲೋಕಾಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net