

ಎನ್.ಆರ್.ಪುರ: ಕೊಪ್ಪ, ಎನ್.ಆರ್.ಪುರ, ಶೃಂಗೇರಿ ತಾಲೂಕುಗಳ ರಸ್ತೆ ದುರಸ್ತಿಗಾಗಿ 9 ಕೋಟಿ ರೂಪಾಯಿ ಮಂಜೂರು ಮಾಡಿಸಿದ್ದೇನೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.
ಶನಿವಾರ ಪಪಂನಿಂದ ಏರ್ಪಡಿಸಿದ್ದ ಪೌರ ಸನ್ಮಾನ ಸ್ವೀಕರಿಸಿ ಮಾತನಾಡಿ, 3 ತಾಲೂಕುಗಳಲ್ಲಿ ರಸ್ತೆ ದುರಸ್ತಿ, ಗುಂಡಿ ಮುಚ್ಚುವುದಕ್ಕೆ ಸರ್ವೇ ಮಾಡಿಸಿ ಹಣ ಬಿಡುಗಡೆ ಮಾಡಿಸಿಕೊಂಡು ಬಂದಿದ್ದೇನೆ. ರಸ್ತೆಯಲ್ಲಿ ಬರುವ ಜಂಗಲ್ ಕ್ಲಿಯರೆನ್ಸ್, ಚರಂಡಿ ದುರಸ್ತಿ, ಗುಂಡಿ ಮುಚ್ಚುವುದು, ಹಾಳಾದ ರಸ್ತೆಗಳಿಗೆ ಮರು ಡಾಂಬರೀಕರಣ ಮಾಡಿಸಲಾಗುವುದು. ಟೆಂಡರ್ ಪ್ರಕ್ರಿಯೆ ಮುಗಿದಿದೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಬಡವರಿಗೆ 10 ಕೆ.ಜಿ. ಅಕ್ಕಿ ನೀಡುವ ಯೋಜನೆ ಅನ್ನಭಾಗ್ಯ ತರಲಾಗಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ಅದನ್ನು ನಿಲ್ಲಿಸಲಾಯಿತು. ಬಡವರಿಗೆ ಬೇಕಾದ ಸೀಮೆಎಣ್ಣೆ ಕೊಡುತ್ತಿಲ್ಲ. ಅಡುಗೆ ಅನಿಲ, ಪೆಟ್ರೋಲ್ ಬೆಲೆ ಏರಿಸಲಾಗಿದೆ. ಬಿಜೆಪಿ ಧರ್ಮದ ಆಧಾರದಲ್ಲಿ ರಾಜಕಾರಣ ಮಾಡುತ್ತಿದೆ. ನಾವೆಲ್ಲ ಭಾರತೀಯ ಮಕ್ಕಳು. ನಾನು ಎಲ್ಲ ಧರ್ಮದವರಿಗೂ ಅನುದಾನ ನೀಡಿದ್ದೇನೆ ಎಂದರು.
ಪಪಂ ವ್ಯಾಪ್ತಿಯಲ್ಲಿ ಹೊಸದಾಗಿ ಆಶ್ರಯ ಬಡಾವಣೆ ನಿರ್ಮಿಸುತ್ತಿದ್ದು ಇದರಲ್ಲಿ 158 ನಿವೇಶನವನ್ನು ಗುರುತಿಸಿ ಲಾನುಭವಿಗಳಿಗೆ ನೀಡಲಾಗುವುದು. ಮೂಲಭೂತ ಸೌಕರ್ಯಕ್ಕೆ 3.36 ಕೋಟಿ ರೂಪಾಯಿ ಅನುದಾನ ಮಂಜೂರಾಗಿದೆ. ಶೀಘ್ರದಲ್ಲೇ ಟೆಂಡರ್ ಕರೆಯಲಾಗುತ್ತದೆ ಎಂದರು.
ಈ ಹಿಂದೆ ಶಾಸಕನಾಗಿದ್ದಾಗ ಪಪಂಗೆ 2 ಕೋಟಿ ಅನುದಾನ ತಂದಿದ್ದೆ. ನಗರೋತ್ಥಾನ ಯೋಜನೆಯಡಿ 5 ಕೋಟಿ ಮಂಜೂರು ಮಾಡಿಸಿಕೊಂಡು ಬಂದಿದ್ದೆ. ಆದರೆ 7 ಕೋಟಿ ರೂಪಾಯಿಗೂ ಕೆಲವರು ತಡೆ ಒಡ್ಡಿದರು. ಆ ಹಣ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.
ಡಿಪೋ ಸಮೀಪ ಪಪಂನ 45 ಎಕರೆ ಜಾಗದಲ್ಲಿ ನಿವೇಶನ ನಿರ್ಮಿಸಲು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದೇನೆ. ಬಡವರು ಕಟ್ಟಿಕೊಂಡಿರುವ ಮನೆಗೆ ಹಕ್ಕು ಪತ್ರ ನೀಡಲು 94 ಸಿಸಿ ಪ್ರಕ್ರಿಯೆ ಮತ್ತೆ ಪ್ರಾರಂಭಿಸುತ್ತೇನೆ. ಈ ಹಿಂದೆ 66 ಹಕ್ಕು ಪತ್ರ ನೀಡಲು ಸಿದ್ಧತೆ ನಡೆಸಿದ್ದು ಇದರಲ್ಲಿ 20 ಜನರಿಗೆ ಹಕ್ಕು ಪತ್ರ ನೀಡಿದ್ದೆ. ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಲಂಚವಿಲ್ಲದೆ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಿದ್ದೇನೆ. ಸಂಬಂಧಪಟ್ಟ ಅಧಿಕಾರಿಗಳು ಶ್ರಮಪಟ್ಟು ಎಲ್ಲರಿಗೂ ಹಕ್ಕು ಪತ್ರ ನೀಡಬೇಕು ಎಂದು ಸೂಚಿಸಿದರು.
ಪಪಂ ಮಾಜಿ ಅಧ್ಯಕ್ಷ ಪಿ.ಆರ್.ಸದಾಶಿವ, ಸದಸ್ಯರಾದ ಕುಮಾರಸ್ವಾಮಿ, ಮಹಮ್ಮದ್ ವಸೀಂ, ಶೋಜ, ಮುನಾವರ್ ಪಾಷ, ಎನ್.ಎಲ್.ಮುಕುಂದ, ಉಮಾ, ಸುರೈಯಾಭಾನು, ರೀನಾ, ಆಡಳಿತಾಧಿಕಾರಿ ತನುಜಾ ಟಿ. ಸವದತ್ತಿ, ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್ ಇದ್ದರು.