ಫ್ಲೋರಿಡಾದ ಲೇಕ್‌ಲ್ಯಾಂಡ್​ನಲ್ಲಿ 8ನೇ ನಾವಿಕ ವಿಶ್ವ ಕನ್ನಡ ಸಮಾವೇಶ ಆಯೋಜನೆ

dk (84) (1)
Published on
| ಬೆಂಕಿ ಬಸಣ್ಣ, ನಾವಿಕ ಪ್ರಚಾರ ಸಮಿತಿ ಛೇರ್ಮನ್, ನ್ಯೂಯಾರ್ಕ್​.

8ನೇ ನಾವಿಕ ವಿಶ್ವ ಕನ್ನಡ ಸಮಾವೇಶ 2025 ವನ್ನು ಫ್ಲೋರಿಡಾ ರಾಜ್ಯದ ಲೇಕ್‌ಲ್ಯಾಂಡ್ ನಗರದಲ್ಲಿರುವ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ RP ಫಂಡಿಂಗ್ ಕನ್ವೆನ್ಷನ್ ಸೆಂಟರ್​ನಲ್ಲಿ ಆಗಸ್ಟ್ 29ರಿಂದ 31ರವರೆಗೆ ನಡೆಯಲಿದೆ ಎಂದು ನಾವಿಕ ಸಂಸ್ಥೆಯ ಅಧ್ಯಕ್ಷ ಶಿವಕುಮಾರ್ ತಿಳಿಸಿದ್ದಾರೆ.

ನಮ್ಮ ನಾವಿಕ ಸಂಸ್ಥೆಯು ಫ್ಲೋರಿಡಾ ರಾಜ್ಯದಲ್ಲಿರುವ ನಾಲ್ಕು ಪ್ರಮುಖ ಕನ್ನಡ ಸಂಘಗಳಾದ ಶ್ರೀಗಂಧ ಕನ್ನಡ ಕೂಟ, ಟಾಂಪ, ಒರ್ಲಾಂಡೋ ಕನ್ನಡ ಕೂಟ, ನಂದಿ ಕನ್ನಡ ಕೂಟ, ಮಯಾಮಿ, ಮತ್ತು ಸವಿಕನ್ನಡ ಕೂಟ ಜ್ಯಾಕ್ಸನ್ವಿಲ್ ಸಹಯೋಗದೊಂದಿಗೆ ಈ ಬೃಹತ್ ವಿಶ್ವ ಕನ್ನಡ ಸಮಾವೇಶವನ್ನು ಆಯೋಜಿಸುತ್ತಿದೆ. ಈ ಪ್ರಯತ್ನಗಳಲ್ಲಿ ನಾವಿಕ ಕಾರ್ಯಕಾರಿಣಿ ಸಮಿತಿಯ ಹರ್ಷಿತ ಗೌಡ ಅಪಾರ ಶ್ರಮ ವಹಿಸಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು.

ನಾವಿಕ ಸಮಿತಿಯು ಕಳೆದ ಒಂದು ವರ್ಷದಿಂದ ನಾವಿಕ ವಿಶ್ವ ಕನ್ನಡ ಸಮಾವೇಶ ನಡೆಸಲು ಸೂಕ್ತ ಸ್ಥಳಕಾಗಿ ಅಮೇರಿಕಾದ ಸುಮಾರು 20 ಕ್ಕೂ ಹೆಚ್ಚು ನಗರಗಳ ಹುಡುಕಾಟ ಮತ್ತು ಅವಲೋಕನ ಮಾಡಿ ಕೊನೆಗೆ ಎಲ್ಲಾ ರೀತಿಯಿಂದಲೂ ಅತ್ಯಂತ ಅನುಕೂಲಕರವಾದ ಫ್ಲೋರಿಡಾ ರಾಜ್ಯದ ಲೇಕ್‌ಲ್ಯಾಂಡ್ ನಗರವನ್ನು ಆಯ್ಕೆ ಮಾಡಿದ್ದು, ಇದು ಲೇಕ್‌ಲ್ಯಾಂಡ್ ನಗರವು ಟ್ಯಾಂಪಾ ಮತ್ತು ಒರ್ಲ್ಯಾಂಡೊಗಳ ಮಧ್ಯೆ ಇದೆ ಎಂದರು.

ವಿವಿಧ ಕಾರ್ಯಕ್ರಮಗಳ ಆಯೋಜನೆ

ಈ ಸಮಾವೇಶದಲ್ಲಿ ಬಿಸಿನೆಸ್ ಫೋರಮ್, ವುಮೆನ್ಸ್ ಫೋರಮ್, ಕವಿ ಗೋಷ್ಠಿ , ಯೂಥ್ ಫೋರಮ್, ಸಾಹಿತ್ಯ ಗೋಷ್ಠಿ ಹೀಗೆ ಅನೇಕ ಕಾರ್ಯಕ್ರಮಗಳು ಮೂರು ದಿನಗಳ ಕಾಲ ಸತತವಾಗಿ ನಡೆಯಲಿವೆ. ಈ ಸಮಾವೇಶದಲ್ಲಿ ಅನಿವಾಸಿಯರು ಮಾತ್ರವಲ್ಲದೇ ಕರ್ನಾಟಕದ ಖ್ಯಾತನಾಮ ಕಲಾವಿದರಿಂದ ವೈವಿದ್ಯಮಯ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ.

ನಾವಿಕ ಸಂಸ್ಥೆಯು ನಡೆದು ಬಂದ ಹಾದಿ

ನಾವಿಕ ಸಂಸ್ಥೆಯು ಮಾತೃ ಭೂಮಿ ಕರ್ನಾಟಕ ಜನತೆಗೆ, ವಿದ್ಯಾರ್ಥಿಗಳಿಗೆ ಕೋವಿಡ್ ಸಮಯದಲ್ಲಿ, ಪ್ರವಾಹ ವಿಕೋಪ , ನೈಸರ್ಗಿಕ ವಿಕೋಪ ಮುಂತಾದ ಸಂದರ್ಭಗಳಲ್ಲಿ ಸಹಾಯ ಮಾಡುತ್ತಲೇ ಬಂದಿದೆ. ಕನ್ನಡ ನಾಡು-ನುಡಿ, ಸಾಹಿತ್ಯ, ಸಂಸ್ಕೃತಿ, ಸಾಂಸ್ಕೃತಿಕ ಪರಂಪರೆಯ ಹಿರಿಮೆಯನ್ನು ತಮ್ಮ ಮುಂದಿನ ಪೀಳಿಗೆಗೂ ಮುಂದುವರಿಸಿಕೊಂಡು ಹೋಗುವ ಅನೇಕ ಪ್ರಯತ್ನಗಳಲ್ಲಿ ಒಂದು ಭಾಗವಾಗಿ ನಾವಿಕ ಸಂಸ್ಥೆಯು ವಿಶ್ವ ಕನ್ನಡ ಸಮ್ಮೇಳನಗಳನ್ನು ಸಂಯೋಜಿಸುತ್ತಾ ಬಂದಿದೆ.

ನಾವಿಕ ಸಂಸ್ಥೆಯು ಬೆಸ ವರ್ಷಗಳಲ್ಲಿ ಅಮೇರಿಕಾ ದೇಶದಲ್ಲಿ ಮತ್ತು ಸಮ ವರ್ಷಗಳಲ್ಲಿ ಅಮೇರಿಕಾದ ಹೊರಗಡೆ ವಿಶ್ವ ಕನ್ನಡ ಸಮ್ಮೇಳನಗಳನ್ನು ಆಯೋಜಿಸುತ್ತಾ ಬಂದಿದೆ. ಕಳೆದ ವರ್ಷ 2024 ರಲ್ಲಿ ನಾವಿಕ ಸಂಸ್ಥೆಯು ಯೂರೋಪ್ ಖಂಡದ ಜರ್ಮನಿ ದೇಶದ ಫ್ರಾಂಕ್ಫರ್ಟ್ ನಲ್ಲಿ ರೈನ್ ಮೇನ್ ಕನ್ನಡ ಸಂಘದ ಸಹಯೋಗದೊಂದಿಗೆ ನಾವಿಕೋತ್ಸವ ವಿಶ್ವ ಕನ್ನಡ ಸಮ್ಮೇಳನವನ್ನು ಭಾರಿ ಅದ್ದೂರಿಯಾಗಿ ಆಯೋಜಿಸಿದ್ದನ್ನು ನೆನಪಿಸಿಕೊಳ್ಳಬಹುದು.

ಈ ಸಮಾವೇಶದ ಕುರಿತು ಹೆಚ್ಚಿನ ವಿವರಗಳು ಮತ್ತು ರಿಜಿಸ್ಟ್ರೇಷನ್ ಲಿಂಕ್ ಅನ್ನು www.navika.org ನಲ್ಲಿ ಶೀಘ್ರದಲ್ಲಿ ಪ್ರಕಟವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net