ಗುಜರಿ ಗಾಡಿ ರಾಜ್ಯಕ್ಕೆ ಹೆಚ್ಚುವರಿ: 87.48 ಲಕ್ಷ ವಾಹನಗಳು ಸ್ಕ್ರ್ಯಾಪ್​, ದೇಶದಲ್ಲಿ ಕರ್ನಾಟಕ ನಂ.1

Scrapped Vehicle
Published on

| ಕೀರ್ತಿನಾರಾಯಣ ಸಿ. ಬೆಂಗಳೂರು

ವಾಯುಮಾಲಿನ್ಯ ನಿಯಂತ್ರಣ ಉದ್ದೇಶದಿಂದ, ಹದಿನೈದು ವರ್ಷ ತುಂಬಿರುವ ಖಾಸಗಿ ಹಾಗೂ ಸರ್ಕಾರಿ ವಾಹನಗಳನ್ನು ನಾಶಪಡಿಸುವ ‘ಗುಜರಿ ನೀತಿ’ಯನ್ನು ಕೇಂದ್ರ ಸರ್ಕಾರ ದೇಶಾದ್ಯಂತ ಜಾರಿಗೊಳಿಸಿದೆ. ಇದನ್ನು ಅನುಷ್ಠಾನಗೊಳಿಸುವ ಪ್ರಕ್ರಿಯೆ ರಾಜ್ಯದಲ್ಲಿ ಈಗಾಗಲೇ ಆರಂಭವಾಗಿದ್ದು, ಗುಜರಿ ಕೇಂದ್ರಗಳನ್ನು (ಆರ್​ವಿಎಸ್​ಪಿ) ಸ್ಥಾಪಿಸಲು ಸಾರಿಗೆ ಇಲಾಖೆ ಅರ್ಜಿಯನ್ನೂ ಆಹ್ವಾನಿಸಿದೆ. ಈ ಮಧ್ಯೆ, 15 ವರ್ಷದ ಹಾಗೂ ಅದಕ್ಕೂ ಮೇಲ್ಪಟ್ಟ ಹಳೇ ವಾಹನಗಳು ಕರ್ನಾಟಕದಲ್ಲೇ ಅಧಿಕ ಪ್ರಮಾಣದಲ್ಲಿರುವ ವಿಚಾರ ಬೆಳಕಿಗೆ ಬಂದಿದೆ.

ಕಳೆದ ಮಾ.31ರವರೆಗೆ ವಾಹನ್ ಪೋರ್ಟಲ್​ನಲ್ಲಿ ಲಭ್ಯವಿರುವ ಡೇಟಾ ಆಧರಿಸಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಕೊಟ್ಟಿರುವ ಮಾಹಿತಿಯನ್ವಯ ಹಳೇ ವಾಹನಗಳಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ರಾಜ್ಯದಲ್ಲಿ ಒಟ್ಟು 87,48,963 ಹಳೇ ವಾಹನಗಳಿವೆ. ಅಲ್ಲಿಗೆ ರಾಜ್ಯದ ಒಟ್ಟು 2.72 ಕೋಟಿ ವಾಹನಗಳಿಗೆ ಹೋಲಿಸಿದಲ್ಲಿ ಶೇ.30ಕ್ಕೂ ಅಧಿಕ ವಾಹನಗಳು ಸ್ಕ್ರಾ್ಯಪ್ ಎನ್ನುವುದು ತಿಳಿಯುತ್ತದೆ. ಉತ್ತರಪ್ರದೇಶ 74,91,584 ಹಳೇ ವಾಹನಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ವಾಯುಮಾಲಿನ್ಯ ಹೆಚ್ಚಿರುವ ನವದೆಹಲಿಯಲ್ಲಿ 57,85,609 ವಾಹನಗಳು 15 ವರ್ಷ ಮೇಲ್ಪಟ್ಟಿವೆ. ದೇಶಾದ್ಯಂತ 6.11 ಕೋಟಿ ವಾಹನಗಳು 15 ವರ್ಷ ಪೂರ್ಣಗೊಳಿಸಿದ್ದು, ಗುಜರಿಗೆ ಹೋಗ ಬೇಕಿವೆ. ಇದರಲ್ಲಿ 85,255 ಸಿಎನ್​ಜಿ ವಾಹನಗಳು (ಶೇ.0.14), 1,13,52,466 ಡೀಸೆಲ್ (ಶೇ.18,57) ಹಾಗೂ 4,72,46, 373 ಪೆಟ್ರೋಲ್ (ಶೇ.77.30) ವಾಹನಗಳಿವೆ.

ತೆಲಂಗಾಣ ಮತ್ತು ಲಕ್ಷದ್ವೀಪದ ಹಳೇ ವಾಹನಗಳ ಮಾಹಿತಿ ಲಭ್ಯವಿಲ್ಲ. ರಾಜ್ಯದಲ್ಲಿರುವ ಹಳೇ ವಾಹನಗಳನ್ನು ನಾಶಪಡಿಸಲು ಅಗತ್ಯವಿರುವ ನೋಂದಾಯಿತ ವಾಹನಗಳ ಗುಜರಿ ಕೇಂದ್ರಗಳನ್ನು (ಆರ್​ವಿಎಸ್​ಪಿ) ಸ್ಥಾಪಿಸಲು ಕರ್ನಾಟಕ ಗುಜರಿ ನೀತಿ-2022 ಯೋಜನೆಗೆ ಈಗಾಗಲೇ ಸರ್ಕಾರ ಅನುಮೋದನೆ ನೀಡಿದ್ದು, ಖಾಸಗಿ ವ್ಯಕ್ತಿ ಹಾಗೂ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಿದೆ. ಆದರೆ, ಇದಕ್ಕೆ ಯಾರೂ ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಹೊಸ ವಾಹನ ಖರೀದಿಗೆ ತೆರಿಗೆ ವಿನಾಯ್ತಿ

ಹಳೇ ವಾಹನಗಳನ್ನು ಗುಜರಿಗೆ ಹಾಕಿದರೆ ವಾಹನ ಮಾಲೀಕರಿಗೆ ನೀಡಲಾಗುವ ಠೇವಣಿ ಪ್ರಮಾಣಪತ್ರವನ್ನು (ಸಿಒಡಿ) ಆಧರಿಸಿ ಸಾರಿಗೇತರ ವಾಹನಕ್ಕೆ ಶೇ.25ರಷ್ಟು ಹಾಗೂ ಸಾರಿಗೆ ವಾಹನಕ್ಕೆ ಶೇ.15ರಷ್ಟು ತೆರಿಗೆ ವಿನಾಯಿತಿ ಸಿಗಲಿದೆ. ಈ ವಿನಾಯಿತಿಯನ್ನು ಸಾರಿಗೇತರ ವಾಹನಕ್ಕೆ 15 ವರ್ಷದವರೆಗೆ ಹಾಗೂ ಸಾರಿಗೆ ವಾಹನಕ್ಕೆ 8 ವರ್ಷದ ಅವಧಿಯಲ್ಲಿ ಯಾವಾಗ ಬೇಕಾದರೂ ಬಳಸಬಹುದು.

ಹೆಚ್ಚು ಹಳೇ ವಾಹನಗಳಿರುವ ರಾಜ್ಯಗಳು

ರಾಜ್ಯ ವಾಹನಗಳ ಸಂಖ್ಯೆ

  • ಕರ್ನಾಟಕ: 87,48,963
  • ಉತ್ತರಪ್ರದೇಶ:  74,91,584
  • ದೆಹಲಿ: 57,85,609
  • ತಮಿಳುನಾಡು: 55,81,434
  • ಕೇರಳ: 43,87,382
  • ಆಂಧ್ರಪ್ರದೇಶ: 33,41,659
  • ಮಧ್ಯಪ್ರದೇಶ: 32,36,743
  • ಮಹಾರಾಷ್ಟ್: 31,97,081
  • ಪಂಜಾಬ್: 31,78,581
  • ಪಶ್ಚಿಮ ಬಂಗಾಳ : 28,13,113
  • ಗುಜರಾತ್: 22,86,550
  • ಒಡಿಶಾ; 20,89,565

ಕಡಿಮೆ ಹಳೇ ವಾಹನಗಳಿರುವ ರಾಜ್ಯಗಳು

ರಾಜ್ಯ ವಾಹನಗಳ ಸಂಖ್ಯೆ

  • ಅಸ್ಸಾಂ: 3,70,553
  • ಬಿಹಾರ: 2,69,750
  • ಗೋವಾ: 2,10,653
  • ಪುದುಚೇರಿ: 4,27,679
  • ಚಂಡೀಗಢ: 1,49,845
  • ಜಮ್ಮು-ಕಾಶ್ಮೀರ: 1,59,951
  • ಮಣಿಪುರ: 1,18,054
  • ಮೇಘಾಲಯ: 1,27,466
  • ತ್ರಿಪುರ: 1,31,859

ದೇಶದಲ್ಲಿ ಗುಜರಿ ನೀತಿ ಜಾರಿ ಉದ್ದೇಶವೇನು?

* ಮಿತಿಮೀರುತ್ತಿರುವ ವಾಯುಮಾಲಿನ್ಯ ಪ್ರಮಾಣ ನಿಯಂತ್ರಣ

* ರಸ್ತೆ, ಪ್ರಯಾಣಿಕರು ಹಾಗೂ ವಾಹನ ಸುರಕ್ಷತೆಗೆ ಹೆಚ್ಚು ಆದ್ಯತೆ

* ಆಟೋಮೊಬೈಲ್ ಕ್ಷೇತ್ರದ ಉತ್ತೇಜನದ ಜತೆಗೆ ಉದ್ಯೋಗ ಸೃಷ್ಟಿ

* ಇಂಧನ ಮೈಲೇಜ್ ಹೆಚ್ಚಿಸಿ, ಮಾಲೀಕರಿಗೆ ನಿರ್ವಹಣೆ ವೆಚ್ಚ ಕಡಿಮೆ

ಸ್ಕ್ರ್ಯಾಪಿಂಗ್​ ಕೇಂದ್ರಗಳ ಸ್ಥಾಪನೆ ಹೇಗೆ?

- ವ್ಯಕ್ತಿ, ಸಂಸ್ಥೆ, ಸೊಸೈಟಿ, ಸ್ಕ್ರಾ್ಯಂಗ್ ಕೇಂದ್ರ ಸ್ಥಾಪಿಸಬಹುದು

- ಅರ್ಜಿ ಸಲ್ಲಿಸಿದ 60 ದಿನದಲ್ಲಿ 1 ಲಕ್ಷ ರೂ. ಶುಲ್ಕ ಹಾಗೂ 10 ಲಕ್ಷ ರೂ. ಠೇವಣಿ ಇಡಬೇಕು

- 10 ವರ್ಷ ಅವಧಿಗೆ ನೋಂದಣಿ ಮಾಡಲಾಗುತ್ತದೆ. ಪುನಃ 10 ವರ್ಷಕ್ಕೆ ನವೀಕರಣಕ್ಕೆ ಅವಕಾಶ

ತುಮಕೂರು ಜಿಲ್ಲೆಯ ಕೊರಟಗೆರೆ ಬಳಿ ಹಾಗೂ ಬೆಂಗಳೂರು ಗ್ರಾಮಾಂತರದ ದೇವನಹಳ್ಳಿ ಹತ್ತಿರ ಹಳೇ ವಾಹನಗಳ ಸ್ಕ್ರಾ್ಯಪಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಅನುಮತಿ ಕೋರಿ ಎರಡು ಅರ್ಜಿಗಳು ಸಲ್ಲಿಕೆಯಾಗಿವೆ. ಚುನಾವಣೆ ಮುಗಿದ ನಂತರ, ಅನುಮತಿ ನೀಡುವ ಪ್ರಕ್ರಿಯೆ ಆರಂಭಿಸಲಾಗುತ್ತದೆ. | ಸಿ. ಮಲ್ಲಿಕಾರ್ಜುನ, ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ

ಖಾಸಗಿಯವರಿಗೆ ಸದ್ಯ ಕಡ್ಡಾಯವಲ್ಲ

ಕರ್ನಾಟಕದಲ್ಲಿ 15 ವರ್ಷ ತುಂಬಿರುವ ಖಾಸಗಿ ವಾಹನಗಳನ್ನು ಗುಜರಿಗೆ ಹಾಕುವ ನಿಯಮ ಕಡ್ಡಾಯಗೊಳಿಸದಿರಲು ಸಾರಿಗೆ ಇಲಾಖೆ ತೀರ್ವನಿಸಿದೆ. ವಾಹನದ ಮಾಲೀಕ ಇಚ್ಛಿಸಿದರೆ ಗುಜರಿಗೆ ಹಾಕಿ, ಹೊಸ ವಾಹನ ಖರೀದಿಯಲ್ಲಿ ರಿಯಾಯಿತಿ ಪಡೆಯ ಬಹುದು. ಆದರೆ, ಸರ್ಕಾರಿ ವಾಹನಗಳನ್ನು ಕಡ್ಡಾಯವಾಗಿ ಗುಜರಿಗೆ ಹಾಕಲಾಗುತ್ತದೆ.

ರಾಜ್ಯಗಳಿಗೆ 3000 ಕೋಟಿ ರೂ.

2023-24ರಲ್ಲಿ ಗುಜರಿ ನೀತಿ ಜಾರಿಗೆ ಕೇಂದ್ರ ಸರ್ಕಾರ ಸೂಚನೆ ಕೊಟ್ಟಿದೆ. ಸರ್ಕಾರಿ ಹಳೇ ವಾಹನಗಳನ್ನು ಗುಜರಿಗೆ ಹಾಕಲು, ಖಾಸಗಿ ವಾಹನಗಳಿಗೆ ತೆರಿಗೆ ರಿಯಾಯಿತಿ ಕೊಡಲು, ಆಟೋಮೇಟೆಡ್ ಟೆಸ್ಟಿಂಗ್ ಕೇಂದ್ರಗಳ ಸ್ಥಾಪನೆ ಹಾಗೂ ಗುಜರಿ ಕೇಂದ್ರಗಳ ಸ್ಥಾಪನೆಗೆ ಬೇಕಾದ ಸೌಲಭ್ಯ ಒದಗಿಸಲು ರಾಜ್ಯಗಳಿಗೆ ಕೊಡುವ ಅನುದಾನದ ಮೊತ್ತವನ್ನು ಕೇಂದ್ರ ಸರ್ಕಾರ 3,000 ಕೋಟಿ ರೂ.ಗಳಿಗೆ ಹೆಚ್ಚಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net